ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Covid in Karnataka: ಕರ್ನಾಟಕದಲ್ಲಿ ಮತ್ತೆ ಕೋವಿಡ್ ಹಾವಳಿ; ಸೋಂಕಿಗೆ ಬೆಂಗಳೂರಿನಲ್ಲಿ ಮೊದಲ ಬಲಿ

ರಾಜ್ಯದಲ್ಲಿಯೂ ನಿಧಾನವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಶನಿವಾರ (ಮೇ 24) ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಬೆಂಗಳೂರಿನ 85 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ

ಸಾಂದರ್ಭಿಕ ಚಿತ್ರ.

Profile Ramesh B May 24, 2025 11:21 PM

ಬೆಂಗಳೂರು: ದೇಶದಲ್ಲಿ ಮತ್ತೆ ಕೊರೊನಾ ವೈರಸ್ (Covid-19)​ ಹಾವಳಿ ಆರಂಭವಾಗಿದೆ. ರಾಜ್ಯದಲ್ಲಿಯೂ ನಿಧಾನವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಶನಿವಾರ (ಮೇ 24) ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ (Covid in Karnataka). ಕೊರೊನಾ ಸೋಂಕಿಗೆ ಒಳಗಾಗಿದ್ದ ಬೆಂಗಳೂರಿನ 85 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲೇ ಇದೆ. ಇನ್ನು ವಿಜಯನಗರ ಜಿಲ್ಲೆಯಲ್ಲಿ ಒಬ್ಬರಿಗೆ, ಮೈಸೂರಿನಲ್ಲಿ ಇಬ್ಬರಿಗೆ ಮತ್ತು ಬೆಂಗಳೂರು ಗ್ರಾಮಂತರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ʼʼರಾಜ್ಯದಲ್ಲಿ ಕೋವಿಡ್‌ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿ (ತೀವ್ರ ಉಸಿರಾಟದ ಸಮಸ್ಯೆ) ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆʼʼ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Covid 19 alert: ಬೆಂಗಳೂರಿನಲ್ಲಿ 35 ಜನರಿಗೆ ಕೋವಿಡ್; ಮತ್ತೆ ಬಂತು ಮಾಸ್ಕ್‌, ಸ್ಯಾನಿಟೈಸರ್!‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ದಿನೇಶ್‌ ಗುಂಡೂರಾವ್‌, ʼʼಉಸಿರಾಟ ಸಮಸ್ಯೆ ಇರುವವರು ಆಸ್ಪತ್ರೆಗೆ ಬಂದಾಗ ಅವರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಬೇಕುʼʼ ಎಂದು ಸೂಚಿಸಿದ್ದಾರೆ.



ಭಯ ಪಡಬೇಕಾಗಿಲ್ಲ

ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿದ್ದರೂ ಭಯ ಪಡಬೇಕಾಗಿಲ್ಲ, ಎಚ್ಚರಿಕೆ ವಹಿಸಿದರೆ ಸಾಕು ಎಂದು ಸಚಿವರು ಧೈರ್ಯ ತುಂಬಿದ್ದಾರೆ. ʼʼಕಳೆದ ಒಂದು ವಾರದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರಲ್ಲಿ ಕೊಂಚ ಏರಿಕೆಯಾಗಿದೆ. ಮುಂಜಾಗ್ರತ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲʼʼ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ʼʼಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದವರನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್‌ಗೆ ಒಳಪಡಿಸಲು ಸೂಚಿಸಲಾಗಿದೆ. ಅಗತ್ಯ ಟೆಸ್ಟಿಂಗ್ ಕಿಟ್‌ಗಳನ್ನ ತೆಗೆದಿರಿಸಿಕೊಳ್ಳಲು ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ. ಒಂದು ತಿಂಗಳಿಗೆ ಬೇಕಾಗುವ 5 ಸಾವಿರ RTPCR ಹಾಗೂ 5 ಸಾವಿರ VDRL ಟೆಸ್ಟಿಂಗ್ ಕಿಟ್ ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆʼʼ ಎಂದು ತಿಳಿಸಿದ್ದಾರೆ.

ʼʼಬಾಣಂತಿಯರು, ಗರ್ಭೀಣಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ 35 ಜನರಲ್ಲಿ ಕೋವಿಡ್ ಗಂಭೀರವಾಗಿಲ್ಲ. ಸೌಮ್ಯ ಸ್ವಭಾವದ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಸಾರ್ವಜನಿಕರು ಕೋವಿಡ್ ಬಂತು ಎಂದು ಆತಂಕಗೊಳ್ಳದೇ ತಮ್ಮ ಸಹಜ ಜೀವನ ನಡೆಸಬಹುದುʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ಯ ದೇಶಾದ್ಯಂತ 500 ಸಕ್ರಿಯ ಪ್ರಕರಣಗಳಿವೆ. ನೆರೆ ರಾಜ್ಯ ಕೇರಳ ಒಂದರಲ್ಲೆ 273ಕ್ಕೂ ಹೆಚ್ಚು ಕೇಸ್‌ಗಳಿವೆ. ದಿಲ್ಲಿ, ಮಹಾರಾಷ್ಟ್ರ, ಗುಜರಾತ್‌, ಆಂಧ್ರ ಪ್ರದೇಶ, ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. ಇದು ಜೆಎನ್‌. 1 (JN.1) ರೂಪಾಂತರಿಯಾಗಿದ್ದು, ಸದ್ಯ ಇದು ಸೌಮ್ಯ ರೂಪದಲ್ಲೇ ಇದೆ ಎಂದು ತಜ್ಞರು ಅಭಯ ನೀಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.