ಬೆಂಗಳೂರಿಗರೇ ಎಚ್ಚರ: ರಸ್ತೆ ಬದಿ ವಾಹನ ನಿಲ್ಲಿಸಿ ಹೋದರೆ ಮರಳಿ ಸಿಗದೇ ಇರಬಹುದು! ಜಿಬಿಎಯಿಂದ ಬೃಹತ್ ತೆರವು ಕಾರ್ಯಾಚರಣೆ
ತುಂಬಾ ದಿನಗಳಿಂದ ಬೆಂಗಳೂರಿನ ರಸ್ತೆ ಬದಿ ವಾಹನ ನಿಲ್ಲಿಸಿ ಹೋಗಿದ್ದರೆ ನಿಮ್ಮ ವಾಹನ ಇದೆಯೇ ಎಂಬುದನ್ನು ಒಮ್ಮೆ ಖಾತ್ರಿ ಪಡಿಸಿಕೊಳ್ಳಿ. ಇಲ್ಲವಾದರೆ ಮುಂದೆ ವಾಹನಕ್ಕಾಗಿ ಬೀದಿ ಬೀದಿ ಅಲೆದಾಡಬೇಕಾಗಬಹುದು. ಯಾಕೆಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರು ಸಂಚಾರಿ ಪೊಲೀಸರು ಜಂಟಿಯಾಗಿ ಬೀದಿ ಬದಿಯ ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಬೀದಿ ಬದಿಯಲ್ಲಿ ಅನಾಥವಾಗಿರುವ ವಾಹನಗಳ (Orphan vehicle) ತೆರವು ಕಾರ್ಯಾಚರಣೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bangalore Authority) ಮತ್ತು ಬೆಂಗಳೂರು ಸಂಚಾರಿ ಪೊಲೀಸರು (Bangalore Traffic Police) ಜಂಟಿಯಾಗಿ ಪ್ರಾರಂಭಿಸಿವೆ. ನಗರದ ಪ್ರಮುಖ ರಸ್ತೆಗಳು, ಪಾದಚಾರಿ ಮಾರ್ಗಗಳಲ್ಲಿ ತುಂಬಾ ದಿನಗಳಿಂದ ವಾಹನಗಳನ್ನು ನಿಲ್ಲಿಸಿ ಹೋಗಿದ್ದವರು ತಮ್ಮ ವಾಹನ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ ಸೂಕ್ತ ಜಾಗಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿ. ಇಲ್ಲವಾದರೆ ಮುಂದೆ ವಾಹನಕ್ಕಾಗಿ ಬೀದಿ ಬೀದಿ ಅಲೆಯಬೇಕಾದ ಸಂದರ್ಭ ಎದುರಾಗಬಹುದು.
ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ತುಂಬಾ ದಿನಗಳಿಂದ ಅನಾಥವಾಗಿ ನಿಂತಿರುವ ವಾಹನಗಳನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರು ಸಂಚಾರಿ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ವಾಹನ ತೆರವಿಗೂ 7 ದಿನಗಳ ಮುನ್ನ ನೋಟಿಸ್ ನೀಡಲಾಗುತ್ತದೆ. ಇದಕ್ಕೆ ಉತ್ತರಿಸದೇ ಇದ್ದರೆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಮಾಡಲಾಗುತ್ತದೆ ಎಂದು ಜಿಬಿಎ ಹೇಳಿದೆ.
ಶಿಶು ಮಂದಿರ- ಆನ್ ಸಹಯೋಗ: ಪರಿಸರಸ್ನೇಹಿ ಸಾರಿಗೆ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಸ ಬಲ
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ನಗರದಾದ್ಯಂತ ರಸ್ತೆ, ಫುಟ್ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ನಿಲ್ಲಿಸಿದ ವಾಹನಗಳ ಬೃಹತ್ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳು ಮತ್ತು ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಅಭಿಯಾನ ಪ್ರಾರಂಭಿಸಿದ್ದಾರೆ.
ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಕಾಯ್ದೆ 2024ರ ಸೆಕ್ಷನ್ 324 ರ ಅಡಿಯಲ್ಲಿ ನಡೆಸುತ್ತಿರುವ ಈ ಅಭಿಯಾನದಲ್ಲಿ ಮೊದಲು ಅಧಿಕಾರಿಗಳು ವಾಹನಗಳನ್ನು ಗುರುತಿಸಿ ನೋಟಿಸ್ ಅಂಟಿಸುತ್ತಾರೆ ಹಾಗೂ ಚಕ್ರಗಳಿಗೆ ವೀಲ್ ಕ್ಲಾಂಪ್ ಹಾಕುತ್ತಾರೆ. ಅಲ್ಲಿಂದ ವಾಹನ ತೆರವಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ವಾಹನಗಳು ಬೇಕಾದರೆ ಸಂಬಂಧಪಟ್ಟ ಪಾಲಿಕೆ ಅಥವಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತೆಗೆದುಕೊಂಡು ಹೋಗಬೇಕಾಗುತ್ತದೆ.
ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೆ ಜಂಟಿ ಕಾರ್ಯಾಚರಣೆ ತಂಡ ವಾಹನವನ್ನು ಜಪ್ತಿ ಮಾಡಲಿದೆ. ಬಳಿಕವೂ ಯಾರೂ ವಾಹನವನ್ನು ಕೇಳಲು ಬಾರದೇ ಇದ್ದರೆ ಬಹಿರಂಗ ಹರಾಜು ಮಾಡಿ ವಿಲೇವಾರಿ ಮಾಡಲಾಗುತ್ತದೆ. ಹರಾಜಾದ ಮೇಲೆ ವಾಹನವನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಸಿಸಿಟಿವಿ ಅಳವಡಿಸಲು ಸಿಎಂ ಆದೇಶ
ತಮ್ಮ ಸುತ್ತಮುತ್ತ ಅನಾಥ ವಾಹನಗಳಿದ್ದರೆ ಸಾರ್ವಜನಿಕರು ನೇರವಾಗಿ ‘Public Eye' ಮೊಬೈಲ್ ಆ್ಯಪ್ ಮೂಲಕ ಫೋಟೋ ಅಪ್ಲೋಡ್ ಮಾಡಿ ದೂರು ನೀಡಬಹುದಾಗಿದೆ. ಈಗಾಗಲೇ ಸಂಚಾರಿ ಪೊಲೀಸರು ನಗರದಾದ್ಯಂತ ಸುಮಾರು 1,518 ಅನಾಥ ವಾಹನಗಳನ್ನು ಪತ್ತೆ ಹಚ್ಚಿದ್ದಾರೆ.