ಬೆಂಗಳೂರು ಏರ್‌ಪೋರ್ಟ್‌ನಲ್ಲಿ 'ಚಾಲೆಂಜರ್ 2026' ಭರ್ಜರಿ ತಾಲೀಮು
Kempegowda International Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಚಾಲೆಂಜರ್ 2026' ಎಂಬ ಮಹಾ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ತಾಲೀಮಿನಲ್ಲಿ ವಿಮಾನಯಾನ ಸಂಸ್ಥೆಗಳು, ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆಸ್ಪತ್ರೆಗಳು, ಭಾರತೀಯ ವಾಯುಪಡೆ, ಸೇನಾ ಹಾಗೂ ಅರೆಸೇನಾ ಪಡೆಗಳು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸೇರಿ ಬರೋಬ್ಬರಿ 100ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ 3,000ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ 'ಚಾಲೆಂಜರ್ 2026' ಎಂಬ ಮಹಾ ಅಭ್ಯಾಸ ನಡೆಸಲಾಯಿತು. -
ಬೆಂಗಳೂರು, ಮೇ 21: ವಿಮಾನ ನಿಲ್ದಾಣದಲ್ಲಿ ದಿಢೀರ್ ಅಂತ ಏನಾದರೂ ಅವಘಡ ಸಂಭವಿಸಿದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಪ್ರಯಾಣಿಕರ ಪ್ರಾಣ ರಕ್ಷಣೆ ಹೇಗೆ ಮಾಡಬೇಕು? ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) 'ಚಾಲೆಂಜರ್ 2026' ಎಂಬ ಮಹಾ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. ಡಿಜಿಸಿಎ ಮತ್ತು ಐಸಿಎಒ ಮಾರ್ಗಸೂಚಿಗಳ ಅನ್ವಯ, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪೂರ್ಣ ಪ್ರಮಾಣದ ತಾಲೀಮು, ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಬಿಕ್ಕಟ್ಟು ನಿರ್ವಹಣೆಯ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿದೆ.
ಇದು ಕೆಂಪೇಗೌಡ ವಿಮಾನ ನಿಲ್ದಾಣದ ಇತಿಹಾಸದಲ್ಲಿ ನಡೆದ ಅತಿದೊಡ್ಡ ತುರ್ತು ಪರಿಸ್ಥಿತಿ ಅಭ್ಯಾಸವಾಗಿದೆ. ಈ ತಾಲೀಮಿನಲ್ಲಿ ವಿಮಾನಯಾನ ಸಂಸ್ಥೆಗಳು, ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆಸ್ಪತ್ರೆಗಳು, ಭಾರತೀಯ ವಾಯುಪಡೆ, ಸೇನಾ ಹಾಗೂ ಅರೆಸೇನಾ ಪಡೆಗಳು, ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸೇರಿದಂತೆ ಬರೋಬ್ಬರಿ 100ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ 3,000ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಏನೆಲ್ಲಾ ಕಸರತ್ತು?
ಈ ಅಭ್ಯಾಸದಲ್ಲಿ ವಿಮಾನ ಅಪಘಾತದಂತಹ ಸಂಕೀರ್ಣ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ತಕ್ಷಣವೇ ಅಲರ್ಟ್ ಸಿಸ್ಟಮ್ ಆನ್ ಮಾಡುವುದು, ಅಗ್ನಿಶಾಮಕ ದಳದ ಆಗಮನ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಜೀರೋ-ಟ್ರಾಫಿಕ್ 'ಗ್ರೀನ್ ಕಾರಿಡಾರ್' ವ್ಯವಸ್ಥೆ ಮಾಡುವುದು... ಹೀಗೆ ಪ್ರತಿಯೊಂದು ಹಂತವನ್ನೂ ಅಚ್ಚುಕಟ್ಟಾಗಿ ಪರೀಕ್ಷಿಸಲಾಯಿತು. ವಿಶೇಷವಾಗಿ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಏರ್-ಲಿಫ್ಟ್ ಮಾಡುವ ತಾಲೀಮು ಎಲ್ಲರ ಗಮನ ಸೆಳೆಯಿತು.
ನೈಜ ಸವಾಲು ಮತ್ತು ಎಐ ತಂತ್ರಜ್ಞಾನದ ಬಳಕೆ
ಈ ಬಾರಿಯ 'ಚಾಲೆಂಜರ್ 2026' ತಾಲೀಮಿನ ಅತಿ ದೊಡ್ಡ ಸವಾಲು ಎಂದರೆ, ವಿಮಾನ ನಿಲ್ದಾಣದ ಎರಡನೇ ರನ್‌ವೇಯಲ್ಲಿ ನೈಜ ವಿಮಾನಗಳ ಹಾರಾಟ ನಡೆಯುತ್ತಿದ್ದಾಗಲೇ ಈ ಅಣಕು ಪ್ರದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು! ಇದು ವಿವಿಧ ಸಂಸ್ಥೆಗಳ ನಡುವಿನ ನಿಖರವಾದ ಸಂವಹನ ಮತ್ತು ಸಮಯಪಾಲನೆಯನ್ನು ಸಾಬೀತುಪಡಿಸಿತು.
ಜತೆಗೆ, ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡಗಳಿಗೆ ತ್ವರಿತವಾಗಿ ಮಾರ್ಗದರ್ಶನ ನೀಡಲು ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಟೂಲ್‌ಗಳನ್ನು ಬಳಸಲಾಯಿತು. ಘಟನೆಯ ಕ್ಷಣಕ್ಷಣದ ಮಾಹಿತಿಯನ್ನು ರಿಯಲ್-ಟೈಮ್‌ನಲ್ಲಿ ಟ್ರ್ಯಾಕ್ ಮಾಡಲು ಹೊಸ ಡಿಜಿಟಲ್ ವೇದಿಕೆಯನ್ನು ಅಳವಡಿಸಲಾಗಿತ್ತು.
ಈ ಕುರಿತು ಮಾತನಾಡಿದ ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಮರಾರ್, ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ದಿನೇ ದಿನೇ ವಿಸ್ತಾರವಾಗುತ್ತಿವೆ. ಹಾಗಾಗಿ, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಾವು ಸದಾ ಸಿದ್ಧರಾಗಿರಬೇಕು. ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಚುರುಕುತನವನ್ನು ಪರೀಕ್ಷಿಸಲು ಈ ಅಭ್ಯಾಸವನ್ನು ರೂಪಿಸಲಾಗಿತ್ತು. ವಿಮಾನಗಳ ಓಡಾಟದ ನಡುವೆಯೇ ಈ ತಾಲೀಮನ್ನು ಯಶಸ್ವಿಯಾಗಿ ಮುಗಿಸಿದ್ದು ನಮ್ಮ ಸುರಕ್ಷತಾ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಯುರೋಪ್ ಈಗ ಮತ್ತಷ್ಟು ಹತ್ತಿರ: ಬೆಂಗಳೂರು-ಜ್ಯೂರಿಕ್ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ
ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅತಿ ದೊಡ್ಡ ಹಾಗೂ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. 2025-26ನೇ ಆರ್ಥಿಕ ವರ್ಷದಲ್ಲಿ 4.44 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿರುವ ಇದು, 2026ರ ಏಪ್ರಿಲ್ ವೇಳೆಗೆ ಒಟ್ಟು 40 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದ ಮೈಲಿಗಲ್ಲನ್ನು ತಲುಪಿದೆ. ಸರಕು ಸಾಗಣೆಯಲ್ಲಿಯೂ, ಅದರಲ್ಲೂ ವಿಶೇಷವಾಗಿ ಬೇಗನೆ ಹಾಳಾಗುವ ವಸ್ತುಗಳ ಸಾಗಣೆಯಲ್ಲಿ ಸತತ ಐದನೇ ವರ್ಷವೂ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.