ರಾಜ್ಯದಲ್ಲೂ ಜಿರಳೆ ಅಬ್ಬರ; ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆಗೊಳಿಸಿದ ಕಾಂಗ್ರೆಸ್ ನಾಯಕರು
I am Cockroach Tshirt: ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಸದ್ದು ಮಾಡುತ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆಗೊಳಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್‌ನ ಪ್ರತಿಭಟನೆ ನಡೆಯಿತು -
ಬೆಂಗಳೂರು, ಮೇ 21: ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಜಿರಳೆಯದ್ದೇ ಸುದ್ದಿ. ಹೌದು, ಕಾಕ್ರೋಚ್ ಜನತಾ ಪಾರ್ಟಿ (Cockroach Janata Party-CJP) ದೇಶಾದ್ಯಂತ ಸದ್ದು ಮಾಡುತ್ತಿದೆ. ಜೆನ್ ಝೀ ಸಮುದಾಯ ಈ ಸಿಜೆಪಿಗೆ ಭಾರಿ ಬೆಂಬಲ ನೀಡುತ್ತಿದ್ದು, ಸಂಚಲನ ಮೂಡಿಸಿದೆ. ಸೆಲೆಬ್ರಿಟಿಗಳೂ ಕಾಕ್ರೋಚ್ ಜನತಾ ಪಾರ್ಟಿಯತ್ತ ಆಕರ್ಷಿತರಾಗಿದ್ದಾರೆ. ರಾಜ್ಯದಲ್ಲೂ ಜಿರಳೆ ಪಾರ್ಟಿ ಅರ್ಥಾತ್ ಕಾಕ್ರೋಚ್ ಜನತಾ ಪಾರ್ಟಿಯ ಹವಾ ಜೋರಾಗಿಯೇ ಇದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಕೈ ನಾಯಕರು ಕಾಕ್ರೋಚ್ ಟೀ ಶರ್ಟ್ ಬಿಡುಗಡೆಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿ ಹಲವು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆಗೊಳಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.
ಸಿದ್ದರಾಮಯ್ಯ ಅವರ ಎಕ್ಸ್ ಪೋಸ್ಟ್:
Today, I took part in the protest organised by the Indian Youth Congress at Freedom Park, Bengaluru, against the Union Government over the NEET-UG paper leak.
— Siddaramaiah (@siddaramaiah) May 21, 2026
The BJP government led by PM @narendramodi has repeatedly proven that it cannot even conduct one examination properly.… pic.twitter.com/hdiHWA4Dre
ಕೇಂದ್ರದ ವಿರುದ್ಧ ಪ್ರತಿಭಟನೆ
ಇದೇ ವೇಳೆ ಕಾಂಗ್ರೆಸ್ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ʼಪಿಎಂ ಇಸ್ ಕಾಂಪ್ರಮೈಸ್‌ಡ್ʼ ಟೀ ಶರ್ಟ್ ಅನ್ನೂ ಅನಾವರಣಗೊಳಿಸಲಾಯಿತು. ಈ ಬಗ್ಗೆ ಎಕ್ಸ್‌ನಲ್ಲಿ ಸಿದ್ದರಾಮಯ್ಯ ಬರೆದುಕೊಂಡಿದ್ದು, ʼʼನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶ ನೀಡುವ ಮೂಲಕ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಬದುಕಿನ ಜತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ಅನ್ಯಾಯದ ವಿರುದ್ಧದ ಜನರ ದನಿಗೆ ದನಿಗೂಡಿಸಿದೆʼʼ ಎಂದು ಬರೆದುಕೊಂಡಿದ್ದಾರೆ.
ʼʼರಾಜ್ಯದ 1 ಲಕ್ಷಕ್ಕೂ ಹೆಚ್ಚು ಮಕ್ಕಳು ತಿಂಗಳುಗಟ್ಟಲೆ ಕಠಿಣ ಪರಿಶ್ರಮದಿಂದ ತಯಾರಿ ನಡೆಸಿ, ಪರೀಕ್ಷೆ ಎದುರಿಸಿದ್ದರು. ಕೇಂದ್ರದ ಅಸಮರ್ಥತೆ, ಬೇಜವಾಬ್ದಾರಿತನದಿಂದಾಗಿ ಇಂದು ಈ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ದೇಶಾದ್ಯಂತ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಮಾತನಾಡಬೇಕಾದ ಪ್ರಧಾನಿ ನರೇಂದ್ರ ಮೋದಿ ಅವರು ನಿಶ್ಚಿಂತರಾಗಿ ವಿದೇಶದಲ್ಲಿ ಕಾಲಕಳೆಯುತ್ತಿದ್ದಾರೆ. ದೇಶದ ಮಕ್ಕಳ ಭವಿಷ್ಯವನ್ನು ಬಿಜೆಪಿಯವರಿಂದ ಕಾಪಾಡಬೇಕಾದ ಸ್ಥಿತಿ ಬಂದೊದಗಿದೆʼʼ ಎಂದು ಅವರು ಹರಿಹಾಯ್ದರು.
ʼʼಭ್ರಷ್ಟ, ನಿರ್ಲಜ್ಜ ಬಿಜೆಪಿ ಸರ್ಕಾರದ ವಿರುದ್ಧ ದೇಶದ ಜನತೆ ಮತ್ತೊಂದು ಸುತ್ತಿನ ಸ್ವಾತಂತ್ರ್ಯ ಹೋರಾಟದಂತಹ ಚಳುವಳಿ ಆರಂಭಿಸುವ ದಿನಗಳು ದೂರವಿಲ್ಲʼʼ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.
5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ
ಏನಿದು ಕಾಕ್ರೋಚ್ ಜನತಾ ಪಾರ್ಟಿ?
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿವಾದಾತ್ಮಕ ಹೇಳಿಕೆಯಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ಎಂಬ ವ್ಯಂಗ್ಯಭರಿತ ಆಂದೋಲನವು ಸದ್ಯ ದೇಶದ ಅತಿ ದೊಡ್ಡ ಆನ್‌ಲೈನ್ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಕೇವಲ ಮೂರೇ ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಇದರ ಸದಸ್ಯತ್ವ ಪಡೆದಿದ್ದಾರೆ. ಇದು ಅಧಿಕೃತವಾಗಿ ನೋಂದಾಯಿತ ರಾಜಕೀಯ ಪಕ್ಷವಲ್ಲದಿದ್ದರೂ, ಯುವ ಸಮೂಹದ ಆಕ್ರೋಶ, ಮೀಮ್ಸ್ ಹಾಗೂ ರಾಜಕೀಯ ಸಂದೇಶಗಳನ್ನು ಒಳಗೊಂಡ ಡಿಜಿಟಲ್ ಯುಗದ ಪ್ರತಿಭಟನೆಯ ಸಂಕೇತವಾಗಿ ಹೊರ ಹೊಮ್ಮಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.