ತಪ್ಪಿದ ಭಾರೀ ದುರಂತ: ನೆಲಕ್ಕಪ್ಪಳಿಸಿದ ಏರ್ ಇಂಡಿಯಾ ವಿಮಾನದ ಹಿಂಭಾಗ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವಘಡ
tail strike in Bengaluru: ಏರ್ ಇಂಡಿಯಾ ವಿಮಾನವೊಂದು ಇಂದು (ಗುರುವಾರ, ಮೇ 21) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅದರ ಹಿಂಭಾಗ ನೆಲಕ್ಕಪ್ಪಳಿಸಿದ ಘಟನೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಾಂತ್ರಿಕ ಅಡಚಣೆ ಉಂಟಾಗಿದ್ದರಿಂದ ಈ ದುರ್ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮೇ 21: ಏರ್ ಇಂಡಿಯಾ (Air India) ವಿಮಾನವೊಂದು ಇಂದು (ಗುರುವಾರ, ಮೇ 21) ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempe Gowda International Airport Bengaluru) ಲ್ಯಾಂಡಿಂಗ್ ವೇಳೆ ಅದರ ಹಿಂಭಾಗ ನೆಲಕ್ಕಪ್ಪಳಿಸಿದ ಘಟನೆ ನಡೆದಿದೆ. ವಿಮಾನವು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿದಿದ್ದು, ಅದೃಷ್ಟವಶಾತ್ ಸಿಬ್ಬಂದಿ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏರ್ ಇಂಡಿಯಾ ಸಂಸ್ಥೆಯ AI2651 ಸಂಖ್ಯೆಯ ವಿಮಾನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವಾಗ ಈ ಘಟನೆ ನಡೆದಿದೆ. ವಿಮಾನ ಟೇಕ್‌ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಹಿಂಭಾಗದ ಭಾಗವು ರನ್‌ವೇಗೆ ತಾಗಿದಾಗ ಅದನ್ನು ಟೇಲ್‌ಸ್ಟ್ರೈಕ್ ಎಂದು ಕರೆಯಲಾಗುತ್ತದೆ. ಇಂತಹ ಘಟನೆ ಬಳಿಕ ವಿಮಾನವನ್ನು ಪರಿಶೀಲಿಸಲು ಸಂಪೂರ್ಣ ತಾಂತ್ರಿಕ ತಪಾಸಣೆ ನಡೆಸಲಾಗುತ್ತದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಾಂತ್ರಿಕ ಅಡಚಣೆ ಉಂಟಾಗಿದ್ದರಿಂದ ಈ ದುರ್ಘಟನೆ ನಡೆದಿದೆ. ಈ ವಿಮಾನ ಇಳಿಯುವ ಮುನ್ನ ಸರಕು ಸಾಗಣೆ ವಿಮಾನವೊಂದು ಅದೇ ರನ್ ವೇನಿಂದ ಟೇಕ್ ಆಫ್ ಆಗಿತ್ತು. ವಾತಾವರಣದಲ್ಲಿ ಉಂಟಾದ ಗಾಳಿಯ ಒತ್ತಡದಿಂದ ಏರ್ ಇಂಡಿಯಾ ವಿಮಾನ ಸಮತೋಲನ ತಪ್ಪಿದೆ. ಇದರಿಂದ ಪೈಲಟ್ ವಿಮಾನವನ್ನು ಮತ್ತೆ ಹಾರಾಟಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ವಿಮಾನದ ಹಿಂಭಾಗ ರನ್‌ವೇಗೆ ಬಡಿದಿದೆ (ಟೇಲ್‌ಸ್ಟ್ರೈಕ್ ಉಂಟಾಗಿದೆ).
ಇಂಧನ ದರ ಹೆಚ್ಚಳ; ಸುಮಾರು 400 ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲು ಮುಂದಾದ ಏರ್ ಇಂಡಿಯಾ
ಅಪಘಾತಕ್ಕೀಡಾದ ವಿಮಾನವನ್ನು ತಪಾಸಣೆಗೆ ಒಳಪಡಿಸಿರುವುದರಿಂದ, ಬೆಂಗಳೂರಿನಿಂದ ದೆಹಲಿಗೆ ಮರಳಬೇಕಾಗಿದ್ದ ವಿಮಾನದ ಸೇವೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಸ್ಥೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ.
ಪ್ರಯಾಣಿಕರಿಗೆ ಆದಷ್ಟು ಬೇಗ ಸ್ಥಳಾವಕಾಶ ಕಲ್ಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿರುವ ನಮ್ಮ ವಿಮಾನ ನಿಲ್ದಾಣದ ಸಿಬ್ಬಂದಿ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತಿವೆ ಎಂದು ಹೇಳಿದೆ. ಜೊತೆಗೆ ಈ ಘಟನೆಯನ್ನು ತನಿಖೆ ಮಾಡಲಾಗುವುದು ಎಂಬುದಾಗಿ ತಿಳಿಸಿದೆ.
ಇನ್ನು ಅವಘಡದ ಮಧ್ಯೆ ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ವಿಮಾನಕ್ಕೆ ಯುಎಇಯಲ್ಲಿ ಎಫ್- 16 ಯುದ್ಧ ವಿಮಾನಗಳಿಂದ ಭದ್ರತೆ; ಕಾರಣವೇನು?
ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಸನಿಹತ್ತೆ ಬಂದಾಗ ಬೋಯಿಂಗ್ 747 ವಿಮಾನ ಹೊರಟಿತ್ತು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ವಿಮಾನದ ಎಂಜಿನ್‌ಗಳು ಗಾಳಿಯ ಪ್ರಕ್ಷುಬ್ಧತೆಯನ್ನು ಉಂಟುಮಾಡಿದವು. ಇದು ಲ್ಯಾಂಡಿಂಗ್‌ಗೆ ಸಮಸ್ಯೆಯಾಗಬಹುದು ಎಂದು ಅರಿತ ಪೈಲಟ್, ಮತ್ತೆ ಹಾರಾಟ ನಡೆಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಇನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಯಿತೆ ಅಥವಾ ಪೈಲಟ್‌ಗಳು ಎಡವಿದ್ರಾ ಅನ್ನೋ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಮುಗಿಯುವವರೆಗೆ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.