ಯುರೋಪ್ ಈಗ ಮತ್ತಷ್ಟು ಹತ್ತಿರ: ಬೆಂಗಳೂರು-ಜ್ಯೂರಿಕ್ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ
Bangalore To Zurich Flight: ಬೆಂಗಳೂರಿಗರಿಗೆ 'ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್' (ಸ್ವಿಸ್) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್‌ನ ಪ್ರಮುಖ ನಗರ 'ಜ್ಯೂರಿಕ್' ನಡುವೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.
'ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್' ನಿಂದ ಬೆಂಗಳೂರು - ಜ್ಯೂರಿಕ್ ನೇರ ವಿಮಾನ ಸೇವೆ ಅಕ್ಟೋಬರ್‌ನಿಂದ ಆರಂಭ. -
ಬೆಂಗಳೂರು, ಮೇ 19: ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ನಗರಿ ಬೆಂಗಳೂರಿಗರಿಗೆ 'ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್' (ಸ್ವಿಸ್) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್‌ನ ಪ್ರಮುಖ ನಗರ 'ಜ್ಯೂರಿಕ್' ನಡುವೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.
2026ರ ಅಕ್ಟೋಬರ್‌ನಿಂದ ಈ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದ್ದು, ವಾರದಲ್ಲಿ ಐದು ದಿನ ಈ ಸೇವೆ ಲಭ್ಯವಿರಲಿದೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರು ಜ್ಯೂರಿಕ್ ತಲುಪುವುದು ಮಾತ್ರವಲ್ಲದೆ, ಲುಫ್ತಾನ್ಸಾ ಸಮೂಹದ ಬೃಹತ್ ವಿಮಾನಜಾಲದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಹಲವು ನಗರಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.
ಬೆಂಗಳೂರನ್ನೇ ಆಯ್ದುಕೊಂಡಿದ್ದೇಕೆ ಸ್ವಿಸ್?
ಭಾರತದಲ್ಲಿ ಸ್ವಿಸ್ ಏರ್‌ಲೈನ್ಸ್‌ನ ಹೊಸ ತಾಣವಾಗಿ ಈಗ ಬೆಂಗಳೂರು ಸೇರ್ಪಡೆಯಾಗಿದೆ. ಕಾರ್ಪೊರೇಟ್ ಪ್ರಯಾಣಿಕರು, ಐಟಿ ತಂತ್ರಜ್ಞರು, ಪ್ರೀಮಿಯಂ ಪ್ರವಾಸಿಗರು ಮತ್ತು ಯುರೋಪ್-ಅಮೆರಿಕಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರಿಂದ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸ್ವಿಸ್‌ನ ಮಾಲೀಕ ಸಂಸ್ಥೆ ಲುಫ್ತಾನ್ಸಾ ಗ್ರೂಪ್‌ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಕೆವಿನ್ ಮಾರ್ಕೆಟ್ಟೆ, ‘ಲುಫ್ತಾನ್ಸಾ ಗ್ರೂಪ್‌ಗೆ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಜಾಗತಿಕ ಟೆಕ್ ಹಬ್ ಆಗಿರುವ ಬೆಂಗಳೂರಿನಿಂದ ಸ್ವಿಸ್ ಏರ್ ಲೈನ್ಸ್ ಸೇವೆಯನ್ನು ಆರಂಭಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಜರ್ಮನಿಯ ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಕ್ ನಗರಗಳ ಬಳಿಕ, ಬೆಂಗಳೂರಿನಿಂದ ಲುಫ್ತಾನ್ಸಾ ಗ್ರೂಪ್‌ನ ಮೂರನೇ ಪ್ರಮುಖ ಮಾರ್ಗ ಇದಾಗಲಿದೆ. ಪ್ರಯಾಣಿಕರು 'ಫಸ್ಟ್ ಕ್ಲಾಸ್' ಸೇರಿದಂತೆ ಅತ್ಯುತ್ತಮ ಸ್ವಿಸ್ ಆತಿಥ್ಯದ ಅನುಭವ ಪಡೆಯಲಿದ್ದಾರೆ’ ಎಂದು ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, ‘ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ಕನೆಕ್ಷನ್ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಒಂದೇ ಟಿಕೆಟ್‌ನಲ್ಲಿ ಯುರೋಪ್‌ಗೆ ಸುಲಭ ಸಂಪರ್ಕ ಸಿಗಲಿದೆ’ ಎಂದರು.
ಬೆಂಗಳೂರು-ಜ್ಯೂರಿಕ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಕರು ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅತ್ಯುತ್ತಮ ಊಟ, ಪ್ರೀಮಿಯಂ ಲೌಂಜ್ ಸೇರಿದಂತೆ ಉತ್ತಮ ಆತಿಥ್ಯವನ್ನು ಸಂಸ್ಥೆ ನೀಡಲಿದೆ. ಹೊಸ ಮಾರ್ಗದ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಸ್ವಿಸ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಮೂಲಕ ಲಭ್ಯವಿದೆ.
ಇನ್ನು ಈ ವಿಮಾನಯಾನ ಸೇವೆಯನ್ನು ನೀಡುತ್ತಿರುವ ಲುಫ್ತಾನ್ಸಾ ಜಗತ್ತಿನ ಮುಂಚೂಣಿ ವಿಮಾನಯಾನ ಸಮೂಹವಾಗಿದ್ದು, 164 ದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಸಂಸ್ಥೆ ಕೇವಲ 2025ರಲ್ಲಿ 13.5 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ್ದು 39.6 ಬಿಲಿಯನ್ ಯುರೋ (ಸರಿಸುಮಾರು 3.6 ಲಕ್ಷ ಕೋಟಿ ರೂ.) ಆದಾಯ ಗಳಿಸಿದೆ. ಪ್ರಯಾಣಿಕರ ಸೇವೆ ಮಾತ್ರವಲ್ಲದೆ ಲಾಜಿಸ್ಟಿಕ್ಸ್, ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ (ಎಂಆರ್‌ಒ) ಕ್ಷೇತ್ರಗಳಲ್ಲೂ ಈ ಸಂಸ್ಥೆ ಬಲಿಷ್ಠವಾಗಿದೆ. ಸ್ವಿಸ್ ಏರ್‌ಲೈನ್ಸ್ ಕೂಡ ಲುಫ್ತಾನ್ಸಾ ಗ್ರೂಪ್‌ನ ಪ್ರಮುಖ ಅಂಗಸಂಸ್ಥೆಯಾಗಿದೆ.