ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿʼ ಅಭಿಯಾನ: ಸುನೀಲ್ ಕುಮಾರ್
ಕಾಂಗ್ರೆಸ್ ಈ ದೇಶದಲ್ಲಿ ಎಸ್ಐಆರ್ ವಿಚಾರದ ಮೂಲಕ ಯುವಕರನ್ನು ಸಂಘರ್ಷಕ್ಕೆ ಇಳಿಸುವ ಹಾಗೂ ಯುವಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಮಾಡುತ್ತಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
-
ಬೆಂಗಳೂರು, ಅ.30: ಯುವ ಸಮುದಾಯಕ್ಕೆ ಎಸ್ಐಆರ್ ಕುರಿತಂತೆ (SIR) ಸರಿಯಾದ ಮಾಹಿತಿ ನೀಡಿ ಕಾಂಗ್ರೆಸ್ಸಿನ ಅರಾಜಕತೆಯ ಮನಸ್ಥಿತಿಯನ್ನು ಬಯಲು ಮಾಡುವ ಉದ್ದೇಶದಿಂದ ನ.1ರಿಂದ ನ.30ರವರೆಗೆ ಕಾಲೇಜು ವಿದ್ಯಾರ್ಥಿಗಳು, ಯುವಜನರ ನಡುವೆ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಅಭಿಯಾನವನ್ನು ಮಾಡಲಿದ್ದೇವೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶದಲ್ಲಿ ಎಸ್ಐಆರ್ ವಿಚಾರದ ಮೂಲಕ ಯುವಕರನ್ನು ಸಂಘರ್ಷಕ್ಕೆ ಇಳಿಸುವ ಹಾಗೂ ಯುವಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು. ಯುವಜನರ ನಡುವೆ ದೊಡ್ಡ ಸಂವಾದ ಗೋಷ್ಠಿಗಳನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ವಿವರಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯುವಜನರನ್ನು ಕಣ್ಮುಂದೆ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಮಾಡಿದ್ದಾರೆ. 7 ಐಐಟಿಗಳ ಸ್ಥಾಪನೆ, ತ್ರಿಬಲ್ ಐಐಟಿಗಳನ್ನು 16 ಕಡೆ ಆರಂಭಿಸಲಾಗಿದೆ. 8 ಕಡೆ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ. 2014ಕ್ಕೆ ಮೊದಲು ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. 12 ವರ್ಷಗಳಲ್ಲಿ 431 ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೋದಿ ಅವರು ಕೌಶಲ್ಯಾಭಿವೃದ್ಧಿಯ ಹೊಸ ಸಚಿವಾಲಯ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ಸ್ಟಾರ್ಟಪ್ ಸಂಖ್ಯೆಗಳೂ ಹೆಚ್ಚಾಗಿವೆ. 2,12,283 ಸ್ಟಾರ್ಟಪ್ಗಳು ಆರಂಭವಾಗಿವೆ. ಈ ಪೈಕಿ 21,601 ಕರ್ನಾಟಕದಲ್ಲೇ ಆರಂಭಗೊಂಡಿವೆ. ಕ್ರೀಡಾ ಕ್ಷೇತ್ರದಲ್ಲಿ ಯುವಜನರಿಗಾಗಿ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದು ಹೇಳಿದರು. ಆದರೆ, ಕಾಂಗ್ರೆಸ್ ಯುವಜನರ ಮನಸ್ಸನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಭಾರತವನ್ನು ಬಾಂಗ್ಲಾ, ಶ್ರೀಲಂಕಾ, ಫ್ರಾನ್ಸ್ ಮಾಡಲು, ಇಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ.5ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ
ನ.3ರಂದು ಹುಬ್ಬಳ್ಳಿ, 5ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಇದೆ. ರಾಜ್ಯದೆಲ್ಲೆಡೆ ವಿವಿಧ ಹಂತಗಳಲ್ಲಿ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ತಿಳಿಸಿದರು. ಕಾಂಗ್ರೆಸ್ಸಿನದೇ ಯೋಜನೆಗಳನ್ನು ಪರಿಷ್ಕರಿಸುವ ಸರ್ಕಾರ, ಮತದಾರರ ಪಟ್ಟಿ ಪರಿಷ್ಕರಣೆಗೆ (ಎಸ್ಐಆರ್) ಯಾಕೆ ವಿರೋಧ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಎಸ್ಐಆರ್, ಚುನಾವಣಾ ಆಯೋಗದ ಕಾನೂನುಬದ್ಧ ಚಟುವಟಿಕೆ. ಇದನ್ನು ನೆಪವಾಗಿ ಇಟ್ಟುಕೊಂಡು, ಸುಪ್ರೀಂ ಕೋರ್ಟ್ ಹೇಳಿದಂತೆ ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಂಘರ್ಷಕ್ಕೆ ಇಳಿಸುವುದು ಸರಿಯಲ್ಲ ಎಂದು ತಿಳಿಸಿದರು.
ಎಸ್ಐಆರ್ ಕಾರಣಕ್ಕೆ ಕೇರಳದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್
ವಾಸ್ತವಿಕತೆ ಜನರಿಗೆ ಗೊತ್ತಾಗಬೇಕಿದೆ. ಇದೇ ಎಸ್ಐಆರ್ ಕಾರಣಕ್ಕೆ ಕಾಂಗ್ರೆಸ್ ಕೇರಳದಲ್ಲಿ ಅಧಿಕಾರಕ್ಕೆ ಬಂದಿದೆ. ಇವಿಎಂ ಸರಿ ಇಲ್ಲ ಎಂದು ಆರಂಭದಲ್ಲಿ ಕಾಂಗ್ರೆಸ್ ತಿಳಿಸಿತು. ನಂತರ ಮತಪತ್ರ ಬೇಕೆಂದರು. ಮತದಾರರ ಪಟ್ಟಿ ಸರಿ ಇಲ್ಲ ಎಂದು ದೂರಿದ್ದರು. ಈಗ ಎಸ್ಐಆರ್ ಸರಿ ಇಲ್ಲ ಎನ್ನುತ್ತಾರೆ. ಉತ್ತರ ಪ್ರದೇಶದ ಚುನಾವಣೆ ಬಳಿಕ ಮತದಾರರೇ ಸರಿ ಇಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ದೇಶದಲ್ಲಿ 12 ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. 10 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಆಗಿದೆ. 2004ರಲ್ಲಿ ಎಸ್ಐಆರ್ ಆಗಿದ್ದು, ಸುಮಾರು 2 ದಶಕಗಳ ಬಳಿಕ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಕಾಂಗ್ರೆಸ್ಸಿನದು ಎಂದು ವಾಗ್ದಾಳಿ ನಡೆಸಿದರು. ದೇಶವನ್ನು ಅಸ್ಥಿರಗೊಳಿಸಲು ಯಾವ ಶಕ್ತಿಯಿಂದಲೂ ಅಸಾಧ್ಯ ಎಂದು ತಿಳಿಸಿದರು.
ಎಸ್ಐಆರ್ ರಾಹುಲ್ ಗಾಂಧಿ ಅವರಿಗೆ ಮಾತ್ರ ಸರಿಯಾಗಿ ಕಾಣುತ್ತಿಲ್ಲ. ಕಪಿಲ್ ಸಿಬಲ್ ಅವರೂ ಇದು ಸರಿಯಾಗಿ ಆಗಿದೆ ಎಂದಿದ್ದಾರೆ. ಜಾರಕಿಹೊಳಿಯವರ ಹೇಳಿಕೆ ರಾಹುಲ್ ಗಾಂಧಿ ಅವರಿಗೆ ಗೊತ್ತಾದರೆ ಅವರ ರಾಜಕೀಯಕ್ಕೂ ಧಕ್ಕೆ ಆಗಬಹುದೇನೋ ಎಂದರು. ರಾಜಣ್ಣನ ಪರಿಸ್ಥಿತಿ ಬರಬಹುದೆಂದು ಹೇಳಿದರು.
ಬರಗಾಲ ಪರಿಹಾರ ನೀಡಲು ಷರತ್ತು ಬೇಡ
ಬರಗಾಲಕ್ಕೆ ಸಂಬಂಧಿಸಿ ರೈತರಿಗೆ ರೂ. 2,500 ಕೊಡುವ ವಿಷಯದಲ್ಲಿ ಸದನದಲ್ಲಿ ಸರ್ಕಾರ ಒಪ್ಪಿಕೊಂಡದ್ದಕ್ಕಿಂತ ವಿರುದ್ಧವಾಗಿ ಆದೇಶ ಹೊರಡಿಸಿದ್ದಾರೆ. 17 ಷರತ್ತುಗಳನ್ನು ವಿಧಿಸಿದ್ದು, ಅವನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಸರ್ಕಾರದ ಆರ್ಥಿಕತೆ ದಿವಾಳಿಯಾಗಿರುವುದೇ ಷರತ್ತು ವಿಧಿಸಲು ಕಾರಣ. ರೂ. 2,500 ಪಡೆಯಲು ರೈತರು ಅಷ್ಟೇ ಮೊತ್ತ ಖರ್ಚು ಮಾಡಬೇಕಾದೀತು ಎಂದು ತಿಳಿಸಿದರು.
ಹಾಲಿನ ಸಬ್ಸಿಡಿ ಹಣ ಬಾಕಿ
ಹಾಲಿನ ಬೆಲೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸರ್ಕಾರ ಬಂದ ಬಳಿಕ ಲೀಟರ್ ಹಾಲಿನ ದರ 17 ರೂ. ಹೆಚ್ಚಾಗಿದೆ ಎಂದು ಆಕ್ಷೇಪಿಸಿದರು. ರೈತರ ಹಾಲಿನ 1200 ಕೋಟಿಗೂ ಹೆಚ್ಚು ಸಬ್ಸಿಡಿ ಹಣವನ್ನು ಇನ್ನೂ ಬಾಕಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು. ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಸ್ಟಾಂಪ್ ಡ್ಯೂಟಿ ದರ ಏರಿಸಿದ್ದಾರೆ. ಕಂದಾಯ ಇಲಾಖೆ ಫಾರಂಗಳ ದರ ಏರಿಸಿದ್ದಾರೆ. ಬಸ್ಸಿನ ಪ್ರಯಾಣದರವನ್ನೂ ಹೆಚ್ಚಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
9.34 ಕೋಟಿ ರೈತರಿಗೆ ದೀಪಾವಳಿ ಗಿಫ್ಟ್: ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಗ್ಯಾರಂಟಿ ಸರ್ಕಾರ ಇದಲ್ಲ, ಇದು ರಾಬರಿ ಸರ್ಕಾರ
ಖಾಲಿ ಖಜಾನೆ ತುಂಬಿಸಿಕೊಳ್ಳಲು ಇವರು ಜನರಿಂದಲೇ ಸುಲಿಗೆ ಮಾಡುತ್ತಿದ್ದಾರೆ. ಗ್ಯಾರಂಟಿ ಸರ್ಕಾರ ಇದಲ್ಲ. ಇದು ರಾಬರಿ ಸರ್ಕಾರ. ಬೋರ್ಡ್ ಮಾತ್ರ ಗ್ಯಾರಂಟಿ ಸರ್ಕಾರದ್ದು. ನಡವಳಿಕೆಯಲ್ಲಿ ಇದು ರಾಬರಿ ಸರ್ಕಾರ. ರೈತರಿಗೆ ಪರಿಹಾರ ಕೊಡಲು ಷರತ್ತುಗಳನ್ನು ವಿಧಿಸುತ್ತಾರೆ. ವಿವಿಧ ಸಮೀಕ್ಷೆಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಉಸ್ತುವಾರಿ ಸಚಿವರು ಬರಗಾಲ ಸಂಬಂಧ ಸಭೆಗಳನ್ನೇ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಹಾಜರಿದ್ದರು.