A T Ramaswamy: ಬಿಜೆಪಿಗೆ ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ರಾಜೀನಾಮೆ
A T Ramaswamy: ನನ್ನ ಪೂರ್ಣ ಸಮಯವನ್ನು, ನನ್ನ ಬದುಕಿನ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿರುತ್ತೇನೆ ಎಂದು ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ತಮ್ಮ ರಾಜೀನಾಮೆಗೆ ಕಾರಣ ತಿಳಿಸಿದ್ದಾರೆ.


ಬೆಂಗಳೂರು: ಮಾಜಿ ಶಾಸಕ ಎ.ಟಿ. ರಾಮಸ್ವಾಮಿ (A T Ramaswamy) ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿರುವ ಅವರು, ರಾಜಕಾರಣಕ್ಕಿಂತ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವದ ಕೆಲಸ. ಕೃಷಿ ಕಾರ್ಯದ ಜತೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ರಾಜೀನಾಮೆಗೆ ಎ.ಟಿ. ರಾಮಸ್ವಾಮಿ ಕಾರಣಗಳನ್ನು ನೀಡಿದ್ದಾರೆ.
ಜಾಗತಿಕ ತಾಪಮಾನದ ತೀವ್ರ ಏರಿಕೆಯಿಂದಾಗಿ ಹವಾಮಾನದ ಅಸಮತೋಲನ ಉಂಟಾಗಿದೆ. ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪನಗಳು ಸೃಷ್ಟಿಯಾಗುತ್ತಿವೆ. ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಪೂರಿತವಾಗಿವೆ. ಬೆಟ್ಟ, ಗುಡ್ಡ, ಅರಣ್ಯಗಳ ನಾಶದಿಂದ ನದಿ, ತೊರೆಗಳೂ ಬತ್ತಿ ಹೋಗಿವೆ. ಅಂತರ್ಜಲ ಕುಸಿದಿದೆ. ಜೀವ ಸಂಕುಲಗಳಿಗೆ ಸಂಕಷ್ಟ ಬಂದೊದಗಿದೆ. ಈ ಹೊತ್ತಿನಲ್ಲಾದರೂ ನಾವು ಜನರಲ್ಲಿ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಕಾರ್ಯ ಮಾಡಬೇಕಾಗಿದೆ. ಪರಿಸರ ಉಳಿದರೆ ಜೀವ ಸಂಕುಲಗಳೂ ಉಳಿಯುತ್ತವೆ. ಈ ಸನ್ನಿವೇಶದಲ್ಲಿ ರಾಜಕಾರಣಕ್ಕಿಂತ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವವೆಂದು ಭಾವಿಸಿರುತ್ತೇನೆ.
ನನ್ನ ಪೂರ್ಣ ಸಮಯವನ್ನು, ನನ್ನ ಬದುಕಿನ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿರುತ್ತೇನೆ. ಈ ಬಗ್ಗೆ ಈಗಾಗಲೇ ನಾನು ದಿನಾಂಕ : 11-04-2025ರಂದು ದೂರವಾಣಿ ಮೂಲಕ ತಮ್ಮ ಜತೆ ಮಾತನಾಡಿರುತ್ತೇನೆ ಎಂದು ಪತ್ರದಲ್ಲಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | CM Siddaramaiah: ಅಸ್ಪೃಶ್ಯತೆಯಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿ: ಸಿಎಂ ಸಿದ್ದರಾಮಯ್ಯ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕರ ವರ್ತನೆಯಿಂದ ರಾಮಸ್ವಾಮಿ ಅವರು ಬೇಸರಗೊಂಡು ಜೆಡಿಎಸ್ ತೊರೆದು, ಬಿಜೆಪಿ ಸೇರ್ಪಡೆಯಾಗಿದ್ದರು. ನಂತರ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಬಳಿಕ ಅಸಮಾಧಾನಗೊಂಡು ಬಿಜೆಪಿ ಚಟುವಟಿಕೆಗಳಿಂದ ರಾಮಸ್ವಾಮಿ ದೂರ ಉಳಿದಿದ್ದರು. ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ.
ʼಪರಿಸರಕ್ಕಾಗಿ ನಾವುʼ ಸಂಘಟನೆ ಸ್ಥಾಪನೆ
ಪರಿಸರ ಸಂರಕ್ಷಣೆಯ ಉದ್ದೇಶದೊಂದಿಗೆ ಇತ್ತೀಚೆಗೆ ಪರಿಸರವಾದಿಗಳ ಹೊಸ ಸಂಘಟನೆಯೊಂದು ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆಯಲ್ಲಿ 'ಪರಿಸರಕ್ಕಾಗಿ ನಾವು' ಸಂಘಟನೆಯು ಏಪ್ರಿಲ್ 12ರಂದು ಸ್ಥಾಪನೆಯಾಗಿತ್ತು.
ಈ ಕುರಿತು ಮಾಹಿತಿ ನೀಡಿದ್ದ ಎ.ಟಿ. ರಾಮಸ್ವಾಮಿ, 'ಬೇರೆಲ್ಲ ಕೆಲಸಗಳಿಗಿಂತಲೂ ಪರಿಸರದ ಸಂರಕ್ಷಣೆ ಬಹಳ ಮಹತ್ವದ್ದು. ಅದಕ್ಕಾಗಿ ನನ್ನ ಭವಿಷ್ಯದ ಸಂಪೂರ್ಣ ಸಮಯವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಡಲು ತೀರ್ಮಾನಿಸಿದ್ದೇನೆ. ರಾಜ್ಯದ ಬೇರೆ ಬೇರೆ ಪರಿಸರ ಸಂಘಟನೆಗಳು, ಪರಿಸರಾಸಕ್ತರು, ತಜ್ಞರನ್ನು ಒಳಗೊಂಡ ರಾಜ್ಯಮಟ್ಟದ 'ಪರಿಸರಕ್ಕಾಗಿ ನಾವು' ಸಂಘಟನೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದೇನೆ' ಎಂದು ತಿಳಿಸಿದ್ದರು.
“ವಿಷಮುಕ್ತ ಭೂಮಿ, ಕುಡಿಯಲು ಶುದ್ಧ ನೀರು, ಉಸಿರಾಡಲು ಸ್ವಚ್ಛ ಗಾಳಿಯನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಬೇಕು. ಈಗಾಗಲೇ ನಾವು ಪರಿಸರವನ್ನು ವಿಷಮಯಗೊಳಿಸುತ್ತಾ ತಪ್ಪು ಮಾಡಿದ್ದೇವೆ. ಇನ್ನಾದರೂ ತಿದ್ದಿಕೊಳ್ಳಬೇಕಿದೆ. ಎಲ್ಲರೂ ಸ್ವಚ್ಛ ಸ್ವಸ್ಥ, ಹಸಿರು ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದ್ದರು.