ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪುತ್ತೂರು ಕಾಲೇಜು ಸ್ಥಳಾಂತರ ವಿಚಾರಕ್ಕೆ ಶಾಸಕನಿಗೇ ಲೇಡಿ ಪ್ರಿನ್ಸಿಪಾಲ್‌ ಕ್ಲಾಸ್‌; ತಬ್ಬಿಬ್ಬಾದ ಅಶೋಕ್ ರೈ!

Puttur News: ಪುತ್ತೂರಿನಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿ, ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕರಿಗೇ ಪ್ರಾಂಶುಪಾಲೆ ವೇದಶ್ರೀ ನಿತ್ಯಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಪುತ್ತೂರು ಕಾಲೇಜು ಪ್ರಾಂಶುಪಾಲೆಯಿಂದ ಶಾಸಕ ಅಶೋಕ್ ರೈಗೆ ಕ್ಲಾಸ್!

ಪುತ್ತೂರು ಶಾಸಕ ಅಶೋಕ್‌ ರೈ ಮತ್ತು ಕಾಲೇಜು ಪ್ರಾಂಶುಪಾಲೆ ನಡುವೆ ವಾಗ್ವಾದ. -

Prabhakara R
Prabhakara R Feb 16, 2026 9:55 PM

ಪುತ್ತೂರು: ಆಸ್ಪತ್ರೆ ಕಟ್ಟಡ ಕಾಮಗಾರಿಯಿಂದ ಧೂಳಿನ ಸಮಸ್ಯೆ ಹಿನ್ನೆಲೆಯಲ್ಲಿ ಪುತ್ತೂರಿನ (Puttur News) ಸರಕಾರಿ ಮಹಿಳಾ ಪದವಿ ಕಾಲೇಜನ್ನು ಸ್ಥಳಾಂತರ ಮಾಡಲು ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈ ವಿಚಾರವಾಗಿ ತಮ್ಮನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅಶೋಕ್ ಕುಮಾರ್‌ ರೈ ಅವರಿಗೇ ಕಾಲೇಜಿನ ಪ್ರಾಂಶುಪಾಲೆ ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಗರದಲ್ಲಿ ಸೋಮವಾರ ನಡೆದಿದೆ.

ಪುತ್ತೂರು ನಗರದ ಮಧ್ಯೆ ಇರುವ ಸರಕಾರಿ ಮಹಿಳಾ ಪದವಿ ಕಾಲೇಜು ಬಳಿ ಆಸ್ಪತ್ರೆ ಕಾಮಗಾರಿ ಹಿನ್ನೆಲೆ ತರಗತಿ ಕೊಠಡಿಗಳಿಗೆ ವಿಪರೀತ ಧೂಳು ಬರುತ್ತಿತ್ತು. ಇದರಿಂದ ತರಗತಿಗಳಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿತ್ತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿ, ಪ್ರತಿಭಟನೆ ವಿಚಾರವಾಗಿ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ವಿಷಯದ ಗಂಭೀರತೆ ಅರಿಯದೆ ಆಪಾದನೆ ಮಾಡಿದ ಶಾಸಕರಿಗೇ ಪ್ರಾಂಶುಪಾಲೆ ವೇದಶ್ರೀ ನಿತ್ಯಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಕಾಮಗಾರಿ ನಡೆಯುತ್ತಿರುವಾಗ ಧೂಳು ಬರುತ್ತೆ ಅನ್ನೋ ಕಾಮನ್ ಸೆನ್ಸ್ ಬೇಕು, ಹಲವು ಬಾರಿ ನಿಮ್ಮಲ್ಲಿಗೆ ಬಂದು ಮನವಿ ನೀಡಿದ್ದೇನೆ. ಸುಮ್ಮನೆ ಗೊತ್ತಿಲ್ಲದೆ ಮಾತನಾಡಬೇಡಿ, ಇಲ್ಲಿಯವರೆಗೂ ಮಹಿಳಾ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿಲ್ಲ ಎಂದು ಏರು ಧ್ವನಿಯಲ್ಲೇ ವೇದಶ್ರೀ ನಿತ್ಯಾ ಮಾತನಾಡಿದ್ದಾರೆ. ಈ ವೇಳೆ ಪ್ರಾಂಶುಪಾಲರ ಮಾತಿಗೆ ಅಶೋಕ್ ರೈ ತಬ್ಬಿಬ್ಬಾಗಿದ್ದಾರೆ.

ಶಾಸಕರಿಗೆ ವಿದ್ಯಾರ್ಥಿನಿಯರಿಂದ ಮನವಿ ಪತ್ರ

ಧೂಳಿನ ಸಮಸ್ಯೆ ಹಿನ್ನೆಲೆಯಲ್ಲಿ ಹೊಸ ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂತರಗೊಳಿಸಲು ಕೋರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದಾರೆ.

ಈ ಕಾಲೇಜು 2014ರಲ್ಲಿ ಪ್ರಾರಂಭವಾಗಿದ್ದು ಈಗ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ 500 ಕ್ಕಿಂತ ಹೆಚ್ಚು ಇದೆ. ಕಾಲೇಜು ಆರಂಭವಾಗಿ ಹನ್ನೆರಡು ವರುಷಗಳು ಕಳೆದರೂ, ಇನ್ನೂ ನೂತನ ಕಟ್ಟಡ ನಿರ್ಮಾಣವಾಗಿಲ್ಲ. ಇದರಿಂದಾಗಿ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಕಳೆದು ಹೋಗುತ್ತಿವೆ. ನಮಗೆ ಲಭಿಸಬೇಕಾದಂತಹ ಹಲವಾರು ಸದಾವಕಾಶಗಳು (ಕಟ್ಟಡದ ಕೊರತೆಯ ಕಾರಣದಿಂದಾಗಿ) ಕೈ ತಪ್ಪಿ ಹೋಗುತ್ತಿವೆ.

ಪ್ರಸ್ತುತ ಕಟ್ಟಡವು ಹಿಂದಿನ ಹಳೆಯ ತಾಲೂಕು ಕಚೇರಿಯಾಗಿದ್ದು, ನಮಗೆ ಸರಿಯಾಗಿರುವ ತರಗತಿಗಳು ಇಲ್ಲ, ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಇಲ್ಲ, ಬೆಂಚು ಡೆಸ್ಕ್‌ಗಳನ್ನು ಎತ್ತಿ ಹೊರ ಹಾಕುವ ಪರಿಸ್ಥಿತಿ ಉಂಟಾಗಿದೆ. ಈ ತರಗತಿಗಳಲ್ಲಿ ಸರಿಯಾದ ಗಾಳಿ, ಬೆಳಕು ಇಲ್ಲದೆ ಪಾಠ ಪ್ರವಚನಗಳು ನಡೆಯುತ್ತದೆ. ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ನಿಂದ ಬರುವ ದುರ್ವಾಸನೆಯಿಂದ ತರಗತಿಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ನೂತನ ಕಟ್ಟಡವು ಆಗುತ್ತದೆ ಆಗುತ್ತದೆ ಎಂದು ಹನ್ನೆರಡು ವರ್ಷಗಳಿಂದ ಕಾಯುತ್ತಲೇ ಇದ್ದೇವೆ.

ಇತ್ತೀಚೆಗೆ ನಮ್ಮ ತರಗತಿಗೆ ಹೊಂದಿಕೊಂಡು ಇನ್ನೊಂದು ಡಯಾಲಿಸಿಸ್ ಸೆಂಟರ್ ನಿರ್ಮಾಣವಾಗುತ್ತಿದ್ದು, ನಮಗೆ ತರಗತಿಯಲ್ಲಿ ಕುಳಿತುಕೊಳ್ಳಲು ತೊಂದರೆಯಾಗುತ್ತಿದೆ. ತರಗತಿ ಮುಂಭಾಗದಲ್ಲಿದ್ದ ಒಂದು ಕಿಟಕಿಯನ್ನು ಸಹ ಮುಚ್ಚಲಾಗಿದೆ. ಶೀಟಿನ ಬಿಸಿಯಿಂದಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ ಮತ್ತು ನಮಗೆ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ.

Attendance Management: ಸರ್ಕಾರಿ ಶಾಲೆ ಶಿಕ್ಷಕರು, ಉಪನ್ಯಾಸಕರಿಗೆ ಕರ್ತವ್ಯ KAAMS ಹಾಜರಾತಿ ಆ್ಯಪ್ ಕಡ್ಡಾಯ

ನಮ್ಮ ಕಾಲೇಜಿನ ಹೊಸ ಕಟ್ಟಡ ಕಾಮಗಾರಿಯೂ ಪ್ರಾರಂಭವಾಗಿದ್ದು ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ದಯಾಳುಗಳಾದ ತಾವು ನಮ್ಮ ಮೇಲೆ ಕರುಣೆ ತೋರಿ ನಮಗೆ ಅಗತ್ಯವಿರುವ ಕೊಠಡಿಗಳನ್ನು ಕಲ್ಪಿಸಿ ಹೊಸ ಕಟ್ಟಡಕ್ಕೆ ನಮ್ಮನ್ನು ಸ್ಥಳಾಂತರ ಮಾಡಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಕೋರಿದ್ದಾರೆ.