ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026

ಕೌಶಲ್ಯಾಭಿವೃದ್ಧಿ, ನೆಟ್‌ ವರ್ಕಿಂಗ್ ಮತ್ತು ಅನ್ವೇಷಣೆ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯ ಕ್ರಮವು, ಕೇವಲ ಸಾಂಪ್ರದಾಯಿಕ ಉಪನ್ಯಾಸಗಳಿಗೆ ಸೀಮಿತವಾಗಿರದೆ ಸ್ಟಾರ್ಟ್‌ ಅಪ್ ಸಂಸ್ಥಾಪಕರು ಎದುರಿಸುತ್ತಿರುವ ಬಂಡವಾಳ ಹೂಡಿಕೆ, ಗ್ರಾಹಕರ ಸಂಪಾದನೆ, ನಾಯಕತ್ವ ನಿರ್ವಹಣೆ ಮತ್ತು ಜಾಗತಿಕ ವಿಸ್ತರಣೆಯಂತಹ ನೈಜ ಸವಾಲುಗಳ ಪರಿಹಾರದ ಕುರಿತು ಪ್ರಮುಖವಾಗಿ ಗಮನಹರಿಸಿತು.

ಅದ್ದೂರಿಯಾಗಿ ನಡೆದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026

-

Profile
Ashok Nayak Aug 25, 2026 9:04 PM

ಬೆಂಗಳೂರು: ಬೆಂಗಳೂರಿನ ವೈಟ್‌ ಫೀಲ್ಡ್‌'ನ ಹೋಟೆಲ್‌ ನಲ್ಲಿ ಎರಡು ದಿನಗಳ ಕಾಲ ಆಯೋಜಿಸ ಲಾಗಿದ್ದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026 (ಐಎಸ್‌ಡಬ್ಲ್ಯು 2026) ಬೆಂಗಳೂರು ಆವೃತ್ತಿಯ ಸಮಾವೇಶವು ಯಶಸ್ವಿಯಾಗಿ, ಅದ್ದೂರಿಯಾಗಿ ಮುಕ್ತಾಯ ಗೊಂಡಿದೆ. ಈ ಮಹತ್ವದ ಸಮಾವೇಶದಲ್ಲಿ ದೇಶಾದ್ಯಂತದ 250ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಸಂಸ್ಥಾಪಕರು, ಹೂಡಿಕೆದಾರರು, ಉದ್ಯಮ ಮಾರ್ಗದರ್ಶಕರು ಮತ್ತು ನೀತಿ ನಿರೂಪಕರು ಭಾಗವಹಿಸಿ ಮಹತ್ವದ ಚರ್ಚೆಗಳನ್ನು ನಡೆಸಿದರು.

ಕೌಶಲ್ಯಾಭಿವೃದ್ಧಿ, ನೆಟ್‌ ವರ್ಕಿಂಗ್ ಮತ್ತು ಅನ್ವೇಷಣೆ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮವು, ಕೇವಲ ಸಾಂಪ್ರದಾಯಿಕ ಉಪನ್ಯಾಸಗಳಿಗೆ ಸೀಮಿತವಾಗಿರದೆ ಸ್ಟಾರ್ಟ್‌ ಅಪ್ ಸಂಸ್ಥಾಪಕರು ಎದುರಿಸುತ್ತಿರುವ ಬಂಡವಾಳ ಹೂಡಿಕೆ, ಗ್ರಾಹಕರ ಸಂಪಾದನೆ, ನಾಯಕತ್ವ ನಿರ್ವಹಣೆ ಮತ್ತು ಜಾಗತಿಕ ವಿಸ್ತರಣೆಯಂತಹ ನೈಜ ಸವಾಲುಗಳ ಪರಿಹಾರದ ಕುರಿತು ಪ್ರಮುಖವಾಗಿ ಗಮನಹರಿಸಿತು.

ಈ ಸಂದರ್ಭದಲ್ಲಿ ಬಿಸಿಡಿ ಗ್ರೂಪ್‌ ನ ಉಪಾಧ್ಯಕ್ಷ ಮತ್ತು ಸಿಇಒ ಹಾಗೂ ಸಿಐಐ ರಿಯಲ್ ಎಸ್ಟೇಟ್ ಅಧ್ಯಕ್ಷ ಅಶ್ವಿಂದರ್ ಸಿಂಗ್ ಪ್ರಧಾನ ಭಾಷಣ ಮಾಡಿ, ಭಾರತದ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಅವಕಾಶಗಳನ್ನು ಉಲ್ಲೇಖಿಸಿ, "ಸಂಸ್ಥಾಪಕರು ಕೇವಲ ಬಂಡವಾಳ ಸಂಗ್ರಹದ ಸುತ್ತುಗಳಿಗಷ್ಟೇ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ಮತ್ತು ದೀರ್ಘಕಾಲಿಕವಾಗಿ ಬೆಳೆಯಬಲ್ಲ ಉದ್ಯಮಗಳನ್ನು ಕಟ್ಟಬೇಕು" ಎಂದು ಕರೆ ನೀಡಿದರು.

ಇದನ್ನೂ ಓದಿ: Bangalore University: ಕಳೆದ ಆರು ತಿಂಗಳಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ; ಆಗಸ್ಟ್ 3, 4ರಂದು ಸಂದರ್ಶನ

ವಿಶೇಷ ಗೋಷ್ಠಿಯಲ್ಲಿ ಮಾತನಾಡಿದ ಥೈರೋಕೇರ್ ಸಂಸ್ಥಾಪಕ ಡಾ.ಎ.ವೇಲುಮಣಿ ಅವರು, ಉದ್ಯಮಶೀಲತೆಯಲ್ಲಿ ಸ್ಪಷ್ಟ ಗುರಿ, ಸವಾಲುಗಳನ್ನು ಎದುರಿಸುವ ದೃಢತೆ ಮತ್ತು ಸರಳತೆಯ ಮಹತ್ವದ ಕುರಿತು ತಮ್ಮ ಅನುಭವದ ಪಾಠಗಳನ್ನು ಹಂಚಿಕೊಂಡರು.

ಜಸ್ಟ್‌ ಡಯಲ್ ಸಹ-ಸಂಸ್ಥಾಪಕ ಹಾಗೂ ಐಎಸ್‌ಡಬ್ಲ್ಯು ಮುಖ್ಯ ಮೆಂಟರ್ ರಮಣಿ ಅಯ್ಯರ್, ಉದ್ಯಮ ಪ್ರಮುಖರಾದ ಬಿರೇನ್ ಪರೇಖ್, ಅಭಿನವ್ ಶರ್ಮಾ, ಸುದೀಪ್ ಅಂಬರೆ, ಅಯ್ಯಪ್ಪ ಸೋಮಯ್ಯಂಡ ಮತ್ತು ರೋಹನ್ ಬಜಾಜ್ ಉಪಸ್ಥಿತರಿದ್ದರು.

ಮಹಿಳಾ ಉದ್ಯಮಿಗಳ ನಾಯಕತ್ವ ಗೋಷ್ಠಿಯಲ್ಲಿ ರೇವತಿ ಕಾಮತ್, ಮೇನಕಾ ಸುಳ್ಳದಮಠ್ ಮತ್ತು ಹೀನಾ ಅರೋರಾ ಅಗರ್ವಾಲ್ ಪಾಲ್ಗೊಂಡು, ಮಹಿಳಾ ನವೋದ್ಯಮಿಗಳು ಬಲವಾದ ನೆಟ್‌ ವರ್ಕ್ ರೂಪಿಸುವ ಬಗ್ಗೆ ಚರ್ಚಿಸಿದರು. ಜೊತೆಗೆ ಐಎಸ್‌ಡಬ್ಲ್ಯು ಫಂಡ್ ಕನೆಕ್ಟ್ ಮೂಲಕ 18 ಪ್ರಮುಖ ಏಂಜೆಲ್ ಹೂಡಿಕೆದಾರರು ಸ್ಟಾರ್ಟ್‌ಅಪ್‌ಗಳೊಂದಿಗೆ ನೇರ ನಿಧಿ ಸಂಗ್ರಹಣಾ ಮಾತುಕತೆಗಳನ್ನು ನಡೆಸಿದರು.

ಮಾರಿಷಸ್‌ನ ಸ್ಟೇಟ್ ಇನ್‌ಫರ್ಮ್ಯಾಟಿಕ್ಸ್ ಲಿಮಿಟೆಡ್ ಅಧ್ಯಕ್ಷ ಜೋಯದೀಪ್ ಬಿಹಾರಿ ಮತ್ತು ಡಾ. ಪರಮೇಶ್ ಪಲ್ಲಾನಿ ಅವರು, ಭಾರತೀಯ ಸ್ಟಾರ್ಟ್‌ ಅಪ್‌ ಗಳಿಗೆ ಜಾಗತಿಕ ಮಾರುಕಟ್ಟೆ ಅವಕಾಶ ಕಲ್ಪಿಸುವ ಸಲುವಾಗಿ 2027 ರಲ್ಲಿ ಇಂಡಿಯಾ ಸ್ಟಾರ್ಟ್‌ ಅಪ್ ವೀಕ್ ಅನ್ನು ಮಾರಿಷಸ್‌ಗೆ ಕೊಂಡೊ ಯ್ಯುವ ಪ್ರಸ್ತಾವನೆಯನ್ನು ಪ್ರಕಟಿಸಿದರು.

ಇಸ್ಕಾನ್‌ ನ ಶ್ರೀ ಕೃಷ್ಣ ಚೈತನ್ಯ ಸ್ವಾಮೀಜಿ ಅವರು ಸಂಸ್ಥಾಪಕರ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯ ಗಳ ಕುರಿತು ಪ್ರವಚನ ನೀಡಿದರು. ಸಮಾರಂಭದ ಕೊನೆಯಲ್ಲಿ ಐಎಸ್‌ಡಬ್ಲ್ಯು ಅವಾರ್ಡ್ಸ್ 2026 ಪ್ರದಾನ ಮಾಡಲಾಗಿದ್ದು, ತಂತ್ರಜ್ಞಾನ, ಸಂಚಾರ, ಗ್ರಾಹಕ ಸೇವೆ ಮತ್ತು ಸಾಮಾಜಿಕ ಪರಿಣಾಮ ವಿಭಾಗಗಳಲ್ಲಿ 32 ವಿಜೇತರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಮಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತು ರಾಯಭಾರಿ ನಟಿ ರಾಗಿಣಿ ದ್ವಿವೇದಿ ಉಪಸ್ಥಿತರಿದ್ದರು. ನಲಪಾಡ್ ಅವರು ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.

ಸಂಸ್ಥಾಪಕರಾದ ಉಜ್ವಲ್ ಮುಖಿಯಾ, ವಿಕ್ರಮ್ ಶಾ, ರಾಕೇಶ್ ಮೇಘಾನಿ, ದೀಕ್ಷಿತ್ ಮೆಹ್ತಾ ಮತ್ತು ಕಶಿಶ್ ಮುಖಿಯಾ ಆಯೋಜಿಸಿದ್ದ ಈ ಸಮಾವೇಶವು ನವೆಂಬರ್ 2026 ರಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿದೆ.