Transport workers Strike: ಹೈಕೋರ್ಟ್ ಆದೇಶದ ಹಿನ್ನೆಲೆ ಸಾರಿಗೆ ಮುಷ್ಕರ ವಾಪಸ್; ನಾಳೆ ಎಂದಿನಂತೆ ಬಸ್‌ಗಳ ಸಂಚಾರ
ಮುಷ್ಕರ ಬಿಟ್ಟು ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಾರಿಗೆ ನೌಕರರ ಸಂಘಟನೆಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಇನ್ನು ಹೈಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 19: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಳೆಯಿಂದ (ಮೇ 20) ನಡೆಯಬೇಕಿದ್ದ ಸಾರಿಗೆ ಮುಷ್ಕರವನ್ನು (Transport workers Strike) ನೌಕರರು ಹಿಂಪಡೆದಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ನಿಗಮಗಳ ಬಸ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಮುಷ್ಕರ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಸಾರಿಗೆ ನೌಕರರ ಒಕ್ಕೂಟಗಳಿಗೆ ಹೈಕೋರ್ಟ್ ಆಘಾತ ನೀಡಿದೆ. ಸಾರ್ವಜನಿಕರಿಗೆ ಎದುರಾಗಬಹುದಾದ ಭಾರೀ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್, ಸಾರಿಗೆ ನೌಕರರ ಉದ್ದೇಶಿತ ಮುಷ್ಕರಕ್ಕೆ ಮಧ್ಯಂತರ ತಡೆ ವಿಧಿಸಿ ಆದೇಶ ಹೊರಡಿಸಿದೆ. ಮುಷ್ಕರ ಬಿಟ್ಟು ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಇನ್ನು ಹೈಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ತಿಳಿಸಿದ್ದಾರೆ. ನಾವು ಮುಷ್ಕರದ ಸಂಬಂಧ ಸರ್ಕಾರಕ್ಕೆ ಮೊದಲೇ ಮಾಹಿತಿ ಕೊಟ್ಟಿದ್ದೆವು. ಈ ನಡುವೆ ಹೈಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು. ವಾದ-ಪ್ರತಿವಾದ ಆಲಿಸಿದ ನಂತರ ಮುಷ್ಕರ ಹಿಂದಕ್ಕೆ ಪಡೆಯಬೇಕು ಎಂದು ಕೋರ್ಟ್ ನಿರ್ದೇಶನ ಕೊಟ್ಟಿದೆ. ಸಿಎಂ ಅಥವಾ ಸಾರಿಗೆ ಸಚಿವರು ಶೀಘ್ರ ಸಮಯ ನಿಗದಿ ಮಾಡಿ ಸಭೆ ಮಾಡಬೇಕು ಎಂದು ಹೇಳಿದೆ. ಹೈಕೋರ್ಟ್ ಆದೇಶದ ಪ್ರಕಾರ ಮುಷ್ಕರ ಹಿಂಪಡೆದಿದ್ದೇವೆ ಎಂದು ಹೇಳಿದ್ದಾರೆ.
ಯುರೋಪ್ ಈಗ ಮತ್ತಷ್ಟು ಹತ್ತಿರ: ಬೆಂಗಳೂರು-ಜ್ಯೂರಿಕ್ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ
ಈ ಬಗ್ಗೆ ಜಂಟಿ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಮಾತನಾಡಿ, ಯಾರೋ ಹಾಕಿದ ಪಿಐಎಲ್‌ನಿಂದಾಗಿ ಸರ್ಕಾರ ನಮ್ಮ ಜೊತೆ ಸಭೆ ಮಾಡಬೇಕಿದೆ. ಅದನ್ನು ಸರ್ಕಾರವೇ ನಿರ್ಧಾರ ಮಾಡಿ ಸಭೆ ಮಾಡಬಹುದಿತ್ತು. ನಮ್ಮ ಒಂದಷ್ಟು ಮನವಿಯನ್ನು ಕೂಡ ಹೈಕೋರ್ಟ್ ಗಮನಿಸಿದೆ. ವೇತನ ಹೆಚ್ಚಳ ಹಾಗೂ ಡಿಎ ಹೆಚ್ಚಳ ಆಗಬೇಕಿದೆ. ಎಸ್ಮಾ ತಂದರೂ ಕೂಡ ಹಲವು ಬಾರಿ ಮುಷ್ಕರ ಮಾಡಿದ್ದೇವೆ. ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಅಂದರೆ, ಎಸ್ಮಾ ಯಾಕೆ ಜಾರಿ ಮಾಡಿದಿರಿ? ಎಂದು ಸಾರಿಗೆ ಸಚಿವರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.