CM Siddaramaiah: ''ಬಿಜೆಪಿಯಿಂದ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎನ್ನುವ ವಿವರ ರಾಹುಲ್ ಗಾಂಧಿಯಿಂದ ಬಹಿರಂಗ'': ಸಿದ್ದರಾಮಯ್ಯ
Rahul Gandhi: ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎಂಬುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆಗಳ ಸಹಿತ ದೇಶದ ಜನರ ಮುಂದಿಟ್ಟಿದ್ದಾರೆ. ಈ ಎಲ್ಲ ಮಾಹಿತಿಗಳು ಚುನಾವಣಾ ಆಯೋಗವೇ ನೀಡಿದ ದಾಖಲೆಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎಂಬುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ದಾಖಲೆಗಳ ಸಹಿತ ದೇಶದ ಜನರ ಮುಂದಿಟ್ಟಿದ್ದಾರೆ. ಈ ಎಲ್ಲ ಮಾಹಿತಿಗಳು ಚುನಾವಣಾ ಆಯೋಗವೇ ನೀಡಿದ ದಾಖಲೆಗಳಾಗಿವೆ. ನರೇಂದ್ರ ಮೋದಿ (Narendra Modi) ಅವರ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕವಾದ ಜನಾಕ್ರೋಶವಿದ್ದರೂ ಅವರು ಹೇಗೆ ಮತಗಳ್ಳತನದ ಮೂಲಕ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಯಿತು? ಎನ್ನುವುದಕ್ಕೆ ರಾಹುಲ್ ಗಾಂಧಿ ಬಿಡುಗಡೆ ಮಾಡಿರುವ ದಾಖಲೆಗಳೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಚುನಾವಣಾ ಆಯೋಗದ ದುರುಪಯೋಗ, ಮತ ಕಳವು ಮತ್ತು ಅಧಿಕಾರ ದುರ್ಬಳಕೆಯ ಮೂಲಕ ಪ್ರಧಾನಿಯಾಗಿರುವ ಮೋದಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಇಲ್ಲ. ಈ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಧ್ವನಿಯೆತ್ತಿ, ಬಿಜೆಪಿಯ ಈ ಎಲ್ಲ ಅನಾಚಾರಗಳನ್ನು ಪ್ರತಿಯೊಬ್ಬರಿಗೂ ಅರ್ಥ ಮಾಡಿಸುವ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
Leader of the Opposition in the Lok Sabha, Shri @RahulGandhi, has today exposed—with hard evidence—how widespread vote theft took place across India in the recent Lok Sabha elections.
— Siddaramaiah (@siddaramaiah) August 7, 2025
Despite massive public anger, @narendramodi returned to power only through electoral fraud. The… pic.twitter.com/OoOGo2lTJo
ಈ ಸುದ್ದಿಯನ್ನೂ ಓದಿ: Dharmasthala Case: ಧರ್ಮಸ್ಥಳ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಖಚಿತ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ದಾಖಲೆಗಳನ್ನು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸುದೀರ್ಘ 6 ತಿಂಗಳ ಕಾಲ ಹಲವು ಮಂದಿ ಅಧ್ಯಯನ ನಡೆಸಿ, ಮತಗಳ್ಳತನದ ಇಂಚಿಂಚೂ ಮಾಹಿತಿಯನ್ನು ಪತ್ತೆ ಹಚ್ಚಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಕೇವಲ ಮೂರುವರೆ ಲಕ್ಷ ಮತದಾರರಿರುವ ಮಹದೇವಪುರ ಕ್ಷೇತ್ರದಲ್ಲಿ 1ಲಕ್ಷದ 250 ಮತಗಳನ್ನು ಅಕ್ರಮವಾಗಿ ಪಡೆದುಕೊಂಡು ಚುನಾವಣೆಯಲ್ಲಿ ಜಯಿಸಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 5 ರೀತಿಯಲ್ಲಿ ಚುನಾವಣಾ ಅಕ್ರಮ ಎಸಗಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಕಲಿ ಮತದಾರರು
ಒಟ್ಟು 11,965 ಮಂದಿ ನಕಲಿ ಮತದಾರರು ಈ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ. ಒಬ್ಬನೇ ಮತದಾರ ನಾಲ್ಕಾರು ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವುದು, ಒಬ್ಬನೇ ಮತದಾರ ಈ ಕ್ಷೇತ್ರದ ಜತೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕೂಡ ಮತ ಚಲಾವಣೆ ಮಾಡಿರುವುದು. ಹೀಗೆ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ.
ನಕಲಿ ವಿಳಾಸ ಹೊಂದಿರುವ ಮತದಾರರು
ಒಟ್ಟು 40,009 ಮಂದಿ ನಕಲಿ ವಿಳಾಸ ಹೊಂದಿರುವ ಮತದಾರರನ್ನು ಈ ಕ್ಷೇತ್ರದಲ್ಲಿ ಪತ್ತೆ ಮಾಡಲಾಗಿದೆ. ಮನೆಯ ನಂಬರ್ '0' ಎಂದು ನಮೂದಾಗಿರುವ ಸಾವಿರಾರು ವಿಳಾಸವೇ ಇಲ್ಲದ ಮತದಾರರು, ತಂದೆ ಮತ್ತು ಪತಿಯ ಹೆಸರು ಇರುವ ಜಾಗದಲ್ಲಿ ಅರ್ಥವೇ ಇಲ್ಲದಂತೆ ಮನಸೋಇಚ್ಛೆ ಇಂಗ್ಲಿಷ್ ಅಕ್ಷರಗಳನ್ನು ನಮೂದಿಸಿರುವುದು ಮತ್ತು ಅಸ್ತಿತ್ವದಲ್ಲಿ ಇಲ್ಲದ ವಿಳಾಸಗಳನ್ನು ನೀಡಿರುವುದು. ಹೀಗೆ ನಕಲಿ ವಿಳಾಸ ನೀಡಿ ಮತಗಳ್ಳತನ ನಡೆಸಲಾಗಿದೆ.
ಒಂದೇ ವಿಳಾಸದಲ್ಲಿ ನೂರಾರು ಮಂದಿ ಮತದಾರರ ವಾಸ
ಒಟ್ಟು 10,452 ಮಂದಿ ಮತದಾರರು ಎಲ್ಲರೂ ಒಟ್ಟಿಗೆ ಬೆರಳೆಣಿಕೆಯಷ್ಟು ಸಂಖ್ಯೆಯ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ. ಸಿಂಗಲ್ ಬೆಡ್ ರೂಂ ಮನೆಯ ವಿಳಾಸ ನೀಡಿ 80 ಜನ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. 68 ಮಂದಿ ಮತದಾರರ ಗುರುತಿನ ಚೀಟಿಯಲ್ಲಿ ಒಂದು ಖಾಸಗಿ ಕ್ಲಬ್ ನ ವಿಳಾಸವಿದೆ. ಈ ಬಗ್ಗೆ ಅಲ್ಲಿ ವಿಚಾರಣೆ ನಡೆಸಿದಾಗ ಗುರುತಿನ ಚೀಟಿ ಹೊಂದಿರುವ ಯಾರೊಬ್ಬರೂ ಅಲ್ಲಿ ವಾಸವಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ.
ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತಹ ಮತದಾರರ ಫೋಟೊ
ಒಟ್ಟು ಈ ಕ್ಷೇತ್ರದಲ್ಲಿ 4,132 ಮಂದಿಯ ಗುರುತಿನ ಚೀಟಿಯಲ್ಲಿ ಫೋಟೋಗಳೇ ಲಭ್ಯವಿಲ್ಲ ಅಥವಾ ಫೋಟೋಗಳನ್ನು ಗುರುತಿಸಲು ಸಾಧ್ಯವಾಗದಂತೆ ಅತ್ಯಂತ ಚಿಕ್ಕದಾಗಿ ನಮೂದಿಸಲಾಗಿದೆ. ಅಂದರೆ ಗುರುತೇ ಹಿಡಿಯಲಾಗದವರು ಕೂಡ ಮತದಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಫಾರ್ಮ್ 6ರಡಿ ಮೊದಲ ಬಾರಿಗೆ ಮತ ಚಲಾಯಿಸಿದ ವಯೋವೃದ್ಧರು
ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ 33,692 ಮಂದಿಯ ವಯಸ್ಸು 60 ರಿಂದ 90 ವರ್ಷಕ್ಕೂ ಮೇಲ್ಪಟ್ಟಿದೆ. ಹೊಸ ಅಥವಾ ಯುವ ಮತದಾರರು ನರೇಂದ್ರ ಮೋದಿಗೆ ಮತ ನೀಡುತ್ತಾರೆ ಎಂಬ ಮಾತನ್ನು ಆಗಾಗ್ಗೆ ಬಿಜೆಪಿಯವರೇ ಹೇಳುತ್ತಿರುತ್ತಾರೆ. ವಾಸ್ತವದಲ್ಲಿ 98 ವರ್ಷ, 89 ವರ್ಷದ ವಯೋವೃದ್ಧರು ಮೊದಲ ಬಾರಿಗೆ ಚುನಾವಣೆಯಲ್ಲಿ ಮತದಾನ ಮಾಡಿರುವುದು ಈ ಹಗರಣದ ಆಳ, ಅಗಲವನ್ನು ತೋರಿಸುತ್ತದೆ.
ರಾಹುಲ್ ಗಾಂಧಿ ಕೇಳಿದ ಮತದಾರರ ಎಲೆಕ್ಟ್ರಾನಿಕ್ ಮಾಹಿತಿ ಮತ್ತು ಸಿಸಿ ಟಿವಿ ದಾಖಲೆಗಳನ್ನು ನೀಡಿ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದರೆ ಈ ಹಗರಣವನ್ನು ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲು ಸಾಧ್ಯವಿತ್ತು. ಮಾಹಿತಿ ಮುಚ್ಚಿಡುವ ಏಕೈಕ ಉದ್ದೇಶದೊಂದಿಗೆ ಚುನಾವಣಾ ಆಯೋಗವು ತನ್ನ ನಿಯಮಗಳನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿಕೊಂಡಿದೆ. ಇದು ಮಹದೇವಪುರ ಕ್ಷೇತ್ರಕ್ಕೆ ಸೀಮಿತವಾದ ಹಗರಣವಲ್ಲ, ಇಡೀ ದೇಶದಲ್ಲೇ ಇದೇ ಮಾದರಿಯ ಮತಗಳ್ಳತನ ಮಾಡಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.