ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ: ಆಗಸ್ಟ್ 16ಕ್ಕೆ ವಿಶೇಷ ಸಚಿವ ಸಂಪುಟ ಸಭೆ
CM Siddaramaiah: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ ಆಯೋಗವನ್ನು ನೇಮಕ ಮಾಡಿದ್ದು, ವರದಿ ಸಲ್ಲಿಕೆಯಾಗಿದೆ. ಈ ಬಗ್ಗೆ ಅಧ್ಯಯನ ಮಾಡಿ, ಆಗಸ್ಟ್ 16ರಂದು ಶನಿವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.


ಬೆಂಗಳೂರು: ʼ'ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ ಆಯೋಗವನ್ನು ನೇಮಕ ಮಾಡಿದ್ದು, ವರದಿ ಸಲ್ಲಿಕೆಯಾಗಿದೆ. ಕಡಿಮೆ ಸಮಯದಲ್ಲಿ ವೈಜ್ಞಾನಿಕ ಅಧ್ಯಯನ ಮಾಡುವ ಮೂಲಕ ಶೇ. 95ರಷ್ಟು ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಎಲ್ಲ ಸಚಿವರಿಗೆ ನೀಡಲಾಗಿದೆ. ಸಚಿವ ಸಂಪುಟ ವರದಿಯನ್ನು ಸ್ವೀಕರಿಸಿದೆ. ಈ ಬಗ್ಗೆ ಅಧ್ಯಯನ ಮಾಡಿ, ಆಗಸ್ಟ್ 16ರಂದು ಶನಿವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗುವುದುʼʼ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ (HK Patil) ತಿಳಿಸಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ: Bengaluru Traffic Police: ಬೆಂಗಳೂರಿನಲ್ಲಿ ನಾಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ: ಹಲವೆಡೆ ವಾಹನ ಸಂಚಾರ ಬಂದ್; ಈ ಪರ್ಯಾಯ ಮಾರ್ಗ ಬಳಸಿ
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
2021-22ನೇ ಸಾಲಿನ ಟ್ರಾಂಚ್-27ರಡಿ ನಬಾರ್ಡ್‌ನಿಂದ ಅನುಮೋದನೆಗೊಂಡು ನಿರ್ಮಿಸುತ್ತಿರುವ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣ ಕಾಮಗಾರಿಗಳ 171.91 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಹಾಗೂ ಹೆಚ್ಚುವರಿ ಮೊತ್ತ 47.81 ಕೋಟಿ ರೂ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದಿಂದ ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಕಿತ್ತೂರಿಗೆ 100 ಹಾಸಿಗೆ ಆಸ್ಪತ್ರೆ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯನ್ನು 3,378.65 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲು ಹೊಸದಾಗಿ ಟೆಂಡರ್ ಆಹ್ವಾನಿಸಿ ಅಂದಾಜು ಪಟ್ಟಿ ತಯಾರಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿತು.
ಮೊಳಕಾಲ್ಮೂರು ಆಸ್ಪತ್ರೆ ಮೇಲ್ದರ್ಜೆಗೆ
ಗಣಿ ಬಾಧಿತ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಪ್ರಸ್ತುತವಿರುವ 100 ಹಾಸಿಗೆ ತಾಲೂಕು ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಉನ್ನತೀಕರಿಸಿ ಪ್ರತ್ಯೇಕ ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಸ್ಥಾಪಿಸಲು ಸಚಿವ ಸಂಪುಟ ಅನುಮೋದಿಸಿದೆ.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ
ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಂಯೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ. 50ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ತೆಗೆದುಹಾಕಲು ಸಚಿವ ಸಂಪುಟ ನಿರ್ಣಯಿಸಿದೆ.
ವರದಾ ನದಿಗೆ ನೀರು ತುಂಬಿಸುವ ಯೋಜನೆ
ಹಾವೇರಿ ಜಿಲ್ಲೆ, ಹಾನಗಲ್ಲ ತಾಲೂಕಿನ ವರದಾ ನದಿಯಿಂದ ನೆರೆಗಲ್ ಹಾಗೂ ಕುಸನೂರ ಏತ ನೀರಾವರಿ ಮುಖಾಂತರ 111 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 220 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸೊಕನಾದಗಿ ನೀರಾವರಿ ಯೋಜನೆಗೆ ಅನುಮೋದನೆ
ಬಾಗಲಕೋಟೆ ಜಿಲ್ಲೆಯ ಸೊಕನಾದಗಿ ಗ್ರಾಮ ಮತ್ತು ಸುತ್ತಮುತ್ತಲಿನ 588 ಹೆಕ್ಟೇರ್ ಕ್ಷೇತ್ರಕ್ಕೆ ಏತ ನೀರಾವರಿ ಯೋಜನೆಯ ಮೂಲಕ ನೀರಾವರಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ 17 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಯನ್ನು ಕೈಗೊಳ್ಳಲು ಅನುಮೋದನೆ.
ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಹಾಸ್ಟೇಲ್
ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವ್ಯತ್ಯಾಸದ ಮೊತ್ತ 265.57 ಲಕ್ಷ ರೂ.ಯಂತೆ ಒಟ್ಟು 15 ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತ 3,983.55 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ಕೈಗೊಳ್ಳಲು ಹಾಗೂ 87.60 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ತಲಕಾಡು ಇನ್ನು ಪಟ್ಟಣ ಪಂಚಾಯಿತಿ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮ ಪಂಚಾಯಿತಿಯೊಂದಿಗೆ ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಟಿ.ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳನ್ನು ಸೇರ್ಪಡೆಗೊಳಿಸಿ ತಲಕಾಡು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಶಿವ ಸಮತೋಲನ ಜಲಾಶಯ ಯೋಜನೆ ವಿಸ್ತರಣೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಂದ ಶಿವ ಸಮತೋಲನ ಜಲಾಶಯದಿಂದ ಶಿವ ಸಮತೋಲನ ಜಲಾಶಯದ ಕೊಳವೆ ಮಾರ್ಗಗಳ ಇಂಟೇಕ್ ಬಳಿ ಇರುವ 5ನೇ ಹಂತದ ಕಚ್ಚಾ ನೀರು ಸರಬರಾಜು ಕೊಳವೆ ಮಾರ್ಗದವರೆಗೆ 3,200 ಮಿ.ಮೀ. ವ್ಯಾಸದ ವಿಸ್ತರಿತ ಹೆಚ್ಚುವರಿ ಕಚ್ಚಾ ನೀರಿನ ಕೊಳವೆ ಮಾರ್ಗವನ್ನು ಅಳವಡಿಸುವ 136.50 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಯನ್ನು ಕೆ.ಟಿ.ಪಿ.ಪಿ. ಕಾಯ್ದೆ 1999ರನ್ವಯ ಅನುಷ್ಟಾನಗೊಳಿಸುವ ಷರತ್ತಿಗೊಳಪಟ್ಟು ಕಾಮಗಾರಿಯ ವಿಸ್ತೃತ ಯೋಜನಾ ವರದಿಗೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ನಗರ, ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಇನ್ನು ಆಯುಕ್ತಾಲಯ
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ರಚನೆ, ಆಯುಕ್ತರ ನೇಮಕಾತಿ ಹಾಗೂ ಅಧಿಕಾರ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಶಾಸನಬದ್ಧ ಅವಕಾಶವನ್ನು ಕಲ್ಪಿಸಲು ಹಾಗೂ ಆಯುಕ್ತಾಲಯ ರಚನೆಯಿಂದ ನಗರಾಭಿವೃದ್ಧಿ ಪ್ರಾಧಿಕಾರಗಳ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣವನ್ನು ಆಯುಕ್ತಾಲಯದ ವ್ಯಾಪ್ತಿಗೆ ಒಳಪಡಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ಕ್ಕೆ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024 ಗಳಲ್ಲಿ ತಿದ್ದುಪಡಿ ತರುವುದು ಅವಶ್ಯಕವಿರುವುದರಿಂದ ಈ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ
ಗದಗ-ಬೆಟಗೇರಿ ಅಧ್ಯಾದೇಶ ಬದಲಿಗೆ ವಿಧೇಯಕ
ಅಧ್ಯಾದೇಶವನ್ನು ಬದಲಿ ವಿಧೇಯಕವನ್ನಾಗಿ ವಿದಾಯಿಸುವ ಪ್ರಕ್ರಿಯೆ ಜತೆಗೆ ಅಧ್ಯಾದೇಶದಲ್ಲಿ ಒಳಗೊಂಡಿರದ ಇಬ್ಬರು ಹೆಚ್ಚುವರಿ ಸದಸ್ಯರನ್ನು ಸಹ ಕಾಯ್ದೆಗೆ ಸೇರ್ಪಡೆಗೊಳಿಸಿ ಸಿದ್ದಪಡಿಸಿರುವ ಪರಿಷ್ಕೃತ ಗದಗ-ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ (ಅನುಬಂಧದಲ್ಲಿರುವಂತೆ); ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಹುಣಸೂರು ನಾಲೆಗಳ ಆಧುನೀಕರಣ
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಆಣೆಕಟ್ಟು ನಾಲೆ ಮತ್ತು ವಡಕೆಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ ಕಾಮಗಾರಿಗಳ ಹಾಗೂ ಅಡ್ಡಮೋರಿಗಳ ಅಭಿವೃದ್ಧಿ ಕಾಮಗಾರಿಗಳ 49.85 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮರೂರು ಶಾಖಾ ನಾಲೆ ಆಧುನೀಕರಣ
ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ಅದರಡಿ ಬರುವ ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಯ (Modernization of Marur Branch Canal and its distributaries under HRBC) 90 ಕೋಟಿ ರೂ. ಮೊತ್ತದ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ಹೇಮಾವತಿ ಡಿಸ್ಟ್ರಿಬ್ಯೂಟರಿ 64 ಆಧುನೀಕರಣ
ಹೇಮಾವತಿ ಎಡದಂಡೆ ಕಾಲುವೆ ಅಡಿಯಲ್ಲಿ ಡಿಸ್ಟ್ರಿಬ್ಯೂಟರಿ-64 ಮತ್ತು ಅದರ ಉಪ ಕಾಲುವೆಗಳ ಸಿಸಿ ಲೈನಿಂಗ್ ಮತ್ತು ಪುನರ್‌ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.