ಬೆಂಗಳೂರಿನ ಜೈಲಿನಲ್ಲಿದ್ದ ಮಗನಿಗೆ ಕೊಡಲು ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದ ತಾಯಿ!
Bangalore Central Jail: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಘಟನೆ ನಡೆದಿದೆ. ಜೈಲಿನಲ್ಲಿದ್ದ ಮಗನನ್ನು ನೋಡಲು ತಾಯಿ ಹೋಗಿದ್ದ ವೇಳೆ ಖಾಸಗಿ ಭಾಗದಲ್ಲಿ ಮೊಬೈಲ್ ಇಟ್ಟುಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರು ಸೆಂಟ್ರಲ್ ಜೈಲು. -
ಬೆಂಗಳೂರು, ಜ.12: ಜೈಲಿನಲ್ಲಿದ್ದ ಮಗನಿಗೆ ಕೊಡಲು ಮೊಬೈಲ್ ಅನ್ನು ಖಾಸಗಿ ಭಾಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ತಾಯಿ ತಪಾಸಣೆ ವೇಳೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Bangalore Central Jail) ಮಗನ ಭೇಟಿಗೆ ಹೋಗಿದ್ದ ವೇಳೆ ತಾಯಿ ತನ್ನ ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದಿದ್ದಾರೆ. ಸದ್ಯ ತಾಯಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೈಲಿನಲ್ಲಿದ್ದ ಮಗ ಭರತ್ನನ್ನು ನೋಡಲು ತಾಯಿ ಲಕ್ಷ್ಮೀ ನರಸಮ್ಮ ಎಂಬುವವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ವಿಸಿಟರ್ ಪಾಸ್ ಪಡೆದುಕೊಂಡು ಹೋಗಿದ್ದ ಮಹಿಳೆಯನ್ನು ತಪಾಸಣೆ ಮಾಡಿದಾಗ ಖಾಸಗಿ ಭಾಗದಲ್ಲಿ ಮೊಬೈಲ್ ಇಟ್ಟುಕೊಂಡು ಹೋಗಿರುವುದು ಪತ್ತೆಯಾಗಿದೆ.
ಈ ಸಂಬಂಧ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಎಚ್.ಎ ಅವರು ತಮ್ಮ ಸಂಸ್ಥೆಯ ಸಿಬ್ಬಂದಿ ವಸಂತಮ್ಮ ಮುಖಾಂತರ ದೂರು ದಾಖಲಿಸಿದ್ದಾರೆ. ಕೇಂದ್ರ ಕಾರಾಗೃಹದ ಮುಖ್ಯದ್ವಾರದ ಹೊರಗೆ ಎಡಭಾಗದಲ್ಲಿರುವ ತಪಾಸಣಾ ವಿಭಾಗ-01ರಲ್ಲಿ ಜನವರಿ 02ರಂದು ಮಧ್ಯಾಹ್ನ ಲಕ್ಷ್ಮೀ ನರಸಮ್ಮ (38) ಅವರು ವಿಸಿಟರ್ ಪಾಸ್ ಪಡೆದುಕೊಂಡು 9689/2205 ವಿಚಾರಣಾಧೀನಾ ಸಂಖ್ಯೆ ಹೊಂದಿರುವ ಭರತ್ ಎಂಬ ಕಾರಾಗೃಹ ಬಂದಿಯ ಸಂದರ್ಶನಕ್ಕೆ ಬಂದಿದ್ದರು. ಈ ವೇಳೆ ಸಿಬ್ಬಂದಿ, ತಪಾಸಣಾ ಮಾಡಿದಾಗ ಖಾಸಗಿ ಭಾಗದೊಳಗೆ ಸಿಮ್ ಸಹಿತ ಬೇಸಿಕ್ ಮೊಬೈಲ್ ಪತ್ತೆ ಆಗಿದೆ.
ಮಹಿಳೆಯು ಕಾರಾಗೃಹದ ನಿಯಮ ಉಲ್ಲಂಘನೆ ಮಾಡಿ ಕೆಎಸ್ಐಎಸ್ಎಫ್ ಸಿಬ್ಬಂದಿಯವರ ಕಣ್ತಪ್ಪಿ ಕಾರಾಗೃಹದ ಒಳಗಡೆ ನಿಷೇಧಿತ ವಸ್ತು, ಸಾಗಿಸಲು ಪ್ರಯತ್ನಿಸಿರುವುದರಿಂದ ಲಕ್ಷ್ಮೀ ನರಸಮ್ಮ ಮತ್ತು ವಿಚಾರಣಾ ಬಂದಿ ಭರತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.