ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೆಟ್ರೋ ಪ್ರಯಾಣಿಕರಿಗೆ ರಿಲೀಫ್‌; ಫೆಬ್ರವರಿ 9ರಂದು ಟಿಕೆಟ್‌ ದರ ಏರಿಯಾಗಲ್ಲ ಎಂದ ಸಂಸದ ತೇಜಸ್ವಿ ಸೂರ್ಯ

Tejasvi Surya: ಸೋಮವಾರ (ಫೆಬ್ರವರಿ 9) ಏರಿಕೆಯಾಬೇಕಿದ್ದ ಮೆಟ್ರೋ ದರಕ್ಕೆ ಬ್ರೇಕ್‌ ಹಾಕಲಾಗಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಅವರು ಕೇಂದ್ರದ ಜತೆ ಮಾತನಾಡಿ ಮೆಟ್ರೋ ಟಿಕೆಟ್‌ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ ಒಡ್ಡಿದ್ದಾರೆ.

ಫೆಬ್ರವರಿ 9ರಂದು ಮೆಟ್ರೋ ಟಿಕೆಟ್‌ ದರ ಏರಿಯಾಗಲ್ಲ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 7, 2026 6:08 PM

ಬೆಂಗಳೂರು, ಫೆ. 7: ಬೆಲೆ ಏರಿಕೆಯ ಹೊಡೆತದಿಂದ ತತ್ತರಿಸಿದ್ದ ಬೆಂಗಳೂರಿಗರಿಗೆ ಚಿಕ್ಕದೊಂದು ರಿಲೀಫ್‌ ಸಿಕ್ಕಿದೆ. ಸೋಮವಾರ (ಫೆಬ್ರವರಿ 9) ಏರಿಕೆಯಾಬೇಕಿದ್ದ ಮೆಟ್ರೋ (Namma Metro) ದರಕ್ಕೆ ಬ್ರೇಕ್‌ ಹಾಕಲಾಗಿದೆ. ಆ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​​ ಸಿಕ್ಕಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಮಾಹಿತಿ ನೀಡಿದ್ದಾರೆ. ಅವರು ಕೇಂದ್ರದ ಜತೆ ಮಾತನಾಡಿ ಮೆಟ್ರೋ ಟಿಕೆಟ್‌ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ ಒಡ್ಡಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಕಟ್ಟರ್ ಅವರೊಂದಿಗೆ ವಿವರವಾದ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

ʼʼಮೆಟ್ರೋ ದರ ಏರಿಕೆ ಬಗ್ಗೆ ಮನೋಹರ್ ಲಾಲ್ ಖಟ್ಟರ್ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಫೆಬ್ರವರಿ 9ರಿಂದ ಮೆಟ್ರೋ ಟಿಕೆಟ್ ದರ ಹೆಚ್ಚಿಸದಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆʼʼ ಎಂಬುದಾಗಿ ಹೇಳಿದ್ದಾರೆ.

ತೇಜಸ್ವಿ ಸೂರ್ಯ ಅವರ ಎಕ್ಸ್‌ ಪೋಸ್ಟ್:‌



ತೇಜಸ್ವಿ ಸೂರ್ಯ ಹೇಳಿದ್ದೇನು?

ʼʼಫೆಬ್ರವರಿ 9ರಂದು ಪ್ರಾರಂಭಿಸಲು ಪ್ರಸ್ತಾಪಿಸಲಾದ ಬೆಂಗಳೂರು ಮೆಟ್ರೋ ದರ ಏರಿಕೆಯ ವಿರುದ್ಧ ತಕ್ಷಣದ ಮಧ್ಯ ಪ್ರವೇಶವನ್ನು ಕೋರಿದ್ದೇನೆ. ಬೆಂಗಳೂರಿನಲ್ಲಿ ಈಗಾಗಲೇ ಭಾರತದಲ್ಲಿ ಅತ್ಯಂತ ದುಬಾರಿ ಮೆಟ್ರೋ ದರಗಳಿವೆ ಎಂದು ನಾನು ಗಮನ ಸೆಳೆದಿದ್ದೇನೆ. ಮತ್ತೊಂದು ಹೆಚ್ಚಳವು ಲಕ್ಷಾಂತರ ನಾಗರಿಕರಿಗೆ ಸಾರ್ವಜನಿಕ ಸಾರಿಗೆಯನ್ನು ತಲುಪಲು ಕಷ್ಟವಾಗುತ್ತದೆʼʼ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ʼʼಪ್ರಸ್ತಾವಿತ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಸೂಚನೆ ನೀಡಿದ್ದಾರೆ. ಈ ಪ್ರಯಾಣ ದರ ಏರಿಕೆ ಸೋಮವಾರದಿಂದ ಜಾರಿಗೆ ಬರುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆʼʼ ಎಂದು ಹೇಳಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣ ದರ ಇಳಿಕೆಯಾಗುತ್ತ? ಬೆಲೆ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಅಧಿಕಾರಿಗಳ ಮಾತು

ಇನ್ನು ಬಿಎಂಆರ್​ಸಿಎಲ್ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿ ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಸರ್ಕಾರದಿಂದ ಮಾಹಿತಿ ಬಂದ ಬಳಿಕ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಬೆಲೆ ಏರಿಕೆ

ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಜತೆಗೆ ಫೆಬ್ರವರಿ 9ರಂದು ಹೊಸ ದರಗಳು ಜಾರಿಗೆ ಬರಲಿವೆ. ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಈ ದರ ಏರಿಕೆಗೆ ಮೆಟ್ರೋ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಜತೆಗೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.

ಬಿಜೆಪಿ ನಾಯಕರು ಬೆಲೆ ಏರಿಕೆಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು ಕಾಂಗ್ರೆಸ್‌ ಮುಖಂಡರು ಬೆಲೆ ಏರಿಕೆ ತೀರ್ಮಾನ ಕೇಂದ್ರ ಸರ್ಕಾರದ್ದು ಎಂದಿದ್ದರು. ಇದೀಗ ಸಂಸದ ತೇಜಸ್ವಿ ಸೂರ್ಯ ಅವರ ಮಧ್ಯ ಪ್ರವೇಶದಿಂದ ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದ್ದು, ಈ ನಿರ್ಧಾರ ಎಷ್ಟು ದಿನ ತನಕ ಇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.