ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಮ್ಮ ಮೆಟ್ರೋ ಪ್ರಯಾಣ ದರ ಇಳಿಕೆಯಾಗುತ್ತ? ಬೆಲೆ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

Namma Metro Ticket Price Hike: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆಬ್ರವರಿ 9ರಂದು ಹೊಸ ದರ ಜಾರಿಗೆ ಬರಲಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಕೇಂದ್ರದ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಮೆಟ್ರೋ ಟಿಕೆಟ್‌ ಬೆಲೆ ಏರಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್‌

ನಮ್ಮ ಮೆಟ್ರೋ ಮತ್ತು ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ). -

Ramesh Ballamoole
Ramesh Ballamoole Feb 6, 2026 10:40 PM

ಬೆಂಗಳೂರು, ಫೆ. 6: ಬೆಂಗಳೂರಿನ (Bengaluru) ‘ನಮ್ಮ ಮೆಟ್ರೋ’ (Namma Metro) ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು (Namma Metro Ticket Price Hike) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆಬ್ರವರಿ 9ರಂದು ಹೊಸ ದರ ಜಾರಿಗೆ ಬರಲಿದೆ. ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ನಡುವೆ ರಾಜ್ಯ ಸರ್ಕಾರ ಮತ್ತೊಂದು ಬರೆ ಎಳೆಯಲು ಮುಂದಾಗಿರುವುದು ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಈ ಮಧ್ಯೆ ಮುಖ್ಯಮಂತ್ರಿ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.

ಎಕ್ಸ್‌ ಖಾತೆಯಲ್ಲು ಸಿದ್ದರಾಮಯ್ಯ ಈ ಬಗ್ಗೆ ಬರೆದುಕೊಂಡಿದ್ದಾರೆ. ಮೆಟ್ರೋ ಟಿಕೆಟ್​​​ ದರ ಏರಿಕೆ ಬಗ್ಗೆ ಕೇಂದ್ರದ ಜತೆ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದು, ಬೆಲೆ ಇಳಿಕೆಯಾಗುತ್ತ ಎನ್ನುವ ನಿರೀಕ್ಷೆ ಹುಟ್ಟು ಹಾಕಿದೆ.

ಸಿಎಂ ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌:



ಸಿದ್ದರಾಮಯ್ಯ ಹೇಳಿದ್ದೇನು?

ತಮ್ಮ ದೀರ್ಘ ಪೋಸ್ಟ್‌ನಲ್ಲಿ ಸಿದ್ದರಾಮಯ್ಯ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು ಬೇಸರವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಜನರ ಅಹವಾಲಿಗೆ ಕಿವಿಯಾಗಬೇಕಿರುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ನಂಬಿರುವ ನಮಗೆ ನಿಮ್ಮ ಅಹವಾಲುಗಳೇ ಆದ್ಯತೆ ಎಂದು ತಮ್ಮ ಪೋಸ್ಟ್‌ ಆರಂಭಿಸಿದ್ದಾರೆ.

ಬೆಂಗಳೂರಿಗರಿಗೆ ಮತ್ತೆ ಬರೆ, ನಮ್ಮ ಮೆಟ್ರೋ ಪ್ರಯಾಣ ದರ ಶೇ.5 ಹೆಚ್ಚಳ

ಸತ್ಯ ಸಂಗತಿ ಏನೆಂದರೆ; ಮೆಟ್ರೋ ರೈಲ್ವೇಸ್ (ಆಪರೇಷನ್ & ಮೇಂಟೆನೆನ್ಸ್) ಆಕ್ಟ್, 2002ರ ಅಡಿಯಲ್ಲಿ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ದರಗಳನ್ನು ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಕಮಿಟಿ (FFC) ನಿರ್ಧರಿಸುತ್ತದೆ. ಆಕ್ಟ್‌ನ ಸೆಕ್ಷನ್ 36ರ ಪ್ರಕಾರ, ದರ ನಿಗದಿ ಕಮಿಟಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು, ಮತ್ತು ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳು ಮೆಟ್ರೋ ಆಡಳಿತವು ಒಪ್ಪಲೇಬೇಕಿದೆ ಮತ್ತು ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಈ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿಲ್ಲ. ಈ ದರ ನಿಗದಿ ಕಮಿಟಿಯನ್ನು ಕೇಂದ್ರ ಸರ್ಕಾರವೇ ರಚಿಸುತ್ತದೆ ಎಂದಿದ್ದಾರೆ.

ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಆಕ್ರೋಶ; ಮಾದಾವರ ಮೆಟ್ರೋ ನಿಲ್ದಾಣದ ಬಳಿ ಬಿಜೆಪಿ ಪ್ರತಿಭಟನೆ

ದರ ನಿಗದಿ ಕಮಿಟಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು, ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು, ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್‌ನ ಓಲೈಕೆಗಾಗಿ ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು, ಜನರ ಹಿತಕ್ಕಾಗಿ ಈಗಲಾದರೂ ತಮ್ಮದೇ ಪ್ರಧಾನಿ ಬಳಿ ಧ್ವನಿಯೆತ್ತಲಿ ಎಂದು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.