ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

31 ಲಕ್ಷ ಬೋಗಸ್‌ ಮತದಾರರ ಗುರುತಿನ ಚೀಟಿ ಮುದ್ರಣ, ಸರ್ಕಾರದಿಂದ 20 ಕೋಟಿ ರೂಪಾಯಿ ಬೃಹತ್ ಹಗರಣ: ಆರ್. ಅಶೋಕ ಗಂಭೀರ ಆರೋಪ

MLC Election Results 2026: ರಾಜ್ಯದ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಜಯ ದಾಖಲಿಸಿದೆ. ಕಾಂಗ್ರೆಸ್‌ಗೆ ಭಾ ರಿ ಮುಖಭಂಗವಾಗಿದ್ದು, ಇದೀಗ ಬಿಜೆಪಿ ನಾಯಕ ಆರ್‌. ಅಶೋಕ 20 ಕೋಟಿ ರೂ. ಹಗರಣ ನಡೆದಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರ್ಕಾರದಿಂದ ಬೃಹತ್ ಹಗರಣ ನಡೆದಿದೆ ಎಂದ ಆರ್‌. ಅಶೋಕ

ಬಿಜೆಪಿ ನಾಯಕ ಆರ್‌. ಅಶೋಕ -

Ramesh Ballamoole
Ramesh Ballamoole Oct 28, 2026 7:18 PM

ಬೆಂಗಳೂರು, ಅ. 28: ''ಎಸ್‌ಐಆರ್‌ ನಡೆಯಲಿದೆ ಎಂದು ಗೊತ್ತಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಮತದಾರರ ಗುರುತಿನ ಚೀಟಿ ಮುದ್ರಿಸಿ 20 ಕೋಟಿ ರೂ. ಹಗರಣ ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್‌ ಸರ್ಕಾರ ಭಾಗಿಯಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು'' ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ (R. Ashoka) ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಮೂಲಕ ಸರ್ಕಾರ ನಡೆಸಿರುವ ಹಗರಣ, ಟೆಂಡರ್‌ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ''ಮೂರೂವರೆ ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಸರಣಿಯಂತೆ ಹಗರಣಗಳನ್ನು ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಅಬಕಾರಿ ಸೇರಿ ಹಲವು ಅಕ್ರಮಗಳು ನಡೆದಿವೆ. ಬೆಂಗಳೂರಿನ ಕಸ ಹಗರಣಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಕರ್ನಾಟಕ ರಾಜ್ಯೋತ್ಸವ ಆಚರಿಸುವ ಬದಲು ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಉತ್ಸವ ಮಾಡಲು ಮುಂದಾಗಿದ್ದಾರೆ. ಇವರು ಎಸ್‌ಐಆರ್‌ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ರಾಜ್ಯದಲ್ಲಿ ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್‌ ಸರ್ಕಾರ 20 ಕೋಟಿ ರೂ. ಮೊತ್ತದ ಹಗರಣ ನಡೆಸಿದೆʼʼ ಎಂದರು.

ಗುರುತಿನ ಚೀಟಿ ಮುದ್ರಣ

ʼʼಬೆಂಗಳೂರಿನ ಮತದಾರರಿಗೆ ಎಸ್‌ವಿಐಸಿ ಕಾರ್ಡ್‌ ಎಂದರೆ ಮತದದಾರರ ಗುರುತಿನ ಚೀಟಿ ನೀಡಲು ರಾಜ್ಯ ಚುನಾವಣಾ ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ. 90 ಲಕ್ಷ ಕಾರ್ಡ್‌ ಮುದ್ರಿಸಲು ಒಂದೇ ಟೆಂಡರ್‌ ಕರೆಯಲಾಗಿದೆ. ಆದರೆ ಆರ್ಥಿಕ ಇಲಾಖೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ, ಫೋಟೊ ಸೆರೆಹಿಡಿದು ನಂತರ ಮುದ್ರಣ ಮಾಡಬೇಕು. ಆದರೆ ಎಲ್ಲಿಗೂ ಹೋಗದೆ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಆಧರಿಸಲಾಗಿದೆ. 2026ರ ಮೇ 14 ರಂದು ಕೇಂದ್ರ ಚುನಾವಣಾ ಆಯೋಗದಿಂದ ಎಸ್‌ಐಆರ್‌ ಮಾಡಲಾಗುವುದು ಎಂದು ಆದೇಶ ನೀಡಲಾಗಿತ್ತು. ಆದರೆ ಮೇ 15 ರಂದು ರಾಜ್ಯ ಚುನಾವಣಾ ಆಯೋಗದಿಂದ ಟೆಂಡರ್‌ ಕರೆಯಲಾಗಿದೆ. ಮೇ 29ರಂದು ಕಾರ್ಯಾದೇಶ ನೀಡಲಾಗಿದೆ. ಇದೇ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದ್ದು, ಎಸ್‌ಐಆರ್‌ ಬಳಿಕ ಮತದಾರರ ಹೊಸ ಪಟ್ಟಿ ಬಂದ ಬಳಿಕ ಸ್ಥಳೀಯ ಚುನಾವಣೆ ನಡೆಸುತ್ತೇವೆ ಎಂದು ಹೇಳಲಾಗಿದೆʼʼ ಎಂಬುದಾಗಿ ತಿಳಿಸಿದರು.

ಫಾರ್ಮ್‌ 7 ಯಾರು ಬೇಕಾದ್ರೂ ಸಲ್ಲಿಸಬಹುದು, ತಪ್ಪಿದ್ದರೆ ಕೋರ್ಟ್‌ ಮೊರೆ ಹೋಗಲಿ: ಆರ್‌.ಅಶೋಕ್‌ ಕಿಡಿ

ʼʼಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಯುವಾಗ, ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕವಾಗಿ ಹೊಸ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ. ಬೆಂಗಳೂರಿನಲ್ಲಿ ಎಸ್‌ಐಆರ್‌ ನಂತರ ಒಟ್ಟು 59,09,775 ಮತದಾರರಿದ್ದಾರೆ. ವಿಳಾಸ ಬದಲಾದವರ, ಸ್ಥಳಾಂತರಗೊಂಡವರ ಹೆಸರ ತೆಗೆದುಹಾಕಲಾಗಿದೆ. ಆದರೆ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಗುರುತಿನ ಚೀಟಿ ಮುದ್ರಿಸಲಾಗಿದೆ ಎಂದರೆ, ಇದರಲ್ಲಿ ಹಗರಣ ನಡೆದಿರುವುದು ಖಚಿತ. ಈ ಕಾರ್ಡ್‌ಗಳನ್ನು ಈಗ ಯಾರಿಗೆ ವಿತರಣೆ ಮಾಡಲಾಗುತ್ತದೆ? ಮುದ್ರಣವಾಗಿ ಇಷ್ಟು ದಿನಗಳಾದರೂ ಯಾಕೆ ವಿತರಿಸಿಲ್ಲ? ಇದಕ್ಕೆ 20 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಈ ಹಣ ಪೂರ್ತಿಯಾಗಿ ವ್ಯರ್ಥವಾಗಿದೆʼʼ ಎಂದರು.

31 ಲಕ್ಷ ಬೋಗಸ್‌ ಕಾರ್ಡ್‌, ವೋಟ್‌ ಚೋರಿ

ʼʼವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿಯವರೇ ಈಗ ಬೆಂಗಳೂರಿಗೆ ಬಂದು ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಏಕೆಂದರೆ ಬೆಂಗಳೂರಿನಲ್ಲಿ ವಾಸ್ತವದಲ್ಲಿ 59 ಲಕ್ಷ ಮತದಾರರಿದ್ದರೆ, ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಕಾರ್ಡ್‌ ಮುದ್ರಿಸಲಾಗಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಸರ್ಕಾರದಿಂದ ಇದಕ್ಕೆ ಉತ್ತರ ನೀಡಬೇಕು. ಅಂದರೆ ವೋಟ್‌ ಚೋರಿಗೆ ಹಾಗೂ 31 ಲಕ್ಷ ಜನರಿಗೆ ಬೋಗಸ್‌ ಕಾರ್ಡ್‌ ನೀಡಲು ಕಾಂಗ್ರೆಸ್‌ ಕಾರಣವಾಗಿದೆ. 31 ಲಕ್ಷ ಮತದಾರರು ಎಲ್ಲಿದ್ದಾರೆ ಎಂಬುದನ್ನು ಈಗ ಸರ್ಕಾರ ಪತ್ತೆ ಮಾಡಬೇಕಿದೆʼʼ ಎಂದು ಆಗ್ರಹಿಸಿದರು.

ʼʼಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. 31 ಲಕ್ಷ ಜನರ ಬೋಗಸ್‌ ಕಾರ್ಡ್‌ಗಳನ್ನು ಏಕೆ ಮುದ್ರಿಸಲಾಗಿದೆ ಎಂದು ಎಲ್ಲರಿಗೂ ತಿಳಿಯಬೇಕಿದೆ. ಎಸ್‌ಐಆರ್‌ ಮುಗಿದಿರುವುದರಿಂದ ಕೇಂದ್ರ ಚುನಾವಣಾ ಆಯೋಗದಿಂದ ಹೊಸ ಕಾರ್ಡ್‌ ನೀಡಲಾಗುತ್ತದೆ. ಜಿಬಿಎ ಚುನಾವಣೆಯಲ್ಲಿ ಅಕ್ರಮ ಮಾಡಲು ಕಾಂಗ್ರೆಸ್‌ ಸರ್ಕಾರ ಇದನ್ನು ಮಾಡಿಸಿದೆ. ಒಂದು ವೇಳೆ ತಪ್ಪಿಲ್ಲವಾದರೆ ಸರ್ಕಾರದಿಂದ ಈ ಗುರುತಿನ ಚೀಟಿಗಳನ್ನು ಕೂಡಲೇ ವಿತರಣೆ ಮಾಡಬೇಕುʼʼ ಎಂದರು.

ʼʼಕೇಂದ್ರ ಸಚಿವ ಅಮಿತ್‌ ಶಾ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಸ್ಟಿಂಗ್‌ ಆಪರೇಶನ್‌ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗೆ ಅನ್ಯಾಯವಾಗಿದ್ದು, ಅದರ ಬಗ್ಗೆ ಸರಿಯಾಗಿ ತನಿಖೆ ನಡೆಯಬೇಕು. ಕೇವಲ ಹಂಚಿದವರನ್ನು ಅಲ್ಲ, ವಿಡಿಯೊ ಮಾಡಿಸಿದವರನ್ನು ಪತ್ತೆ ಮಾಡಬೇಕಿದೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕುʼʼ ಎಂದು ಆರ್‌. ಅಶೋಕ್‌ ಆಗ್ರಹಿಸಿದರು.

ಆರ್ಥಿಕ ಇಲಾಖೆ ದಿವಾಳಿ

ʼʼಆರ್ಥಿಕ ಇಲಾಖೆ ಸಂಕಷ್ಟದಲ್ಲಿರುವ ಕುರಿತು ಅಧಿವೇಶನದಲ್ಲಿ ನಾನು ಮಾತಾಡಿದ್ದೆ. ಸಾಲದ ಮಿತಿ 3% ಇದ್ದರೆ, 2.95%ಗೆ ತಲುಪಿರುವುದನ್ನು ತೋರಿಸಿದ್ದೆ. ಆದರೆ ನಮ್ಮ ಖಜಾನೆ ತುಂಬಿದೆ ಎಂದು ಸಿಎಂ ಹೇಳಿದ್ದರು. ಈಗ ಕಬ್ಬು ಬೆಳೆಗಾರರ ಜತೆ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್‌ ಖಜಾನೆ ಖಾಲಿಯಾಗಿದೆ, ಹಣವಿಲ್ಲ ಎಂದು ಹೇಳಿದ್ದಾರೆ. ರೈತರಿಗೆ ಪರಿಹಾರ ಕೊಡಲು ಕೂಡ ಈ ಸರ್ಕಾರದ ಬಳಿ ಹಣವಿಲ್ಲʼʼ ಎಂದು ಹೇಳಿದರು.

ಬರ ಪರಿಹಾರ ನೀಡಿಲ್ಲ, ನಾವಿಟ್ಟ ಬೇಡಿಕೆ ಈಡೇರಿಸಿಲ್ಲ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್‌. ಅಶೋಕ್‌

ಎಲ್ಲ ಕಡೆ ಎನ್‌ಡಿಎ ಗೆದ್ದಿದೆ

ʼʼವಿಧಾನ ಪರಿಷತ್‌ ಚುನಾವಣೆಯಲ್ಲಿ ರಾಜ್ಯದಲ್ಲಿ ನಾಲ್ಕು ಸ್ಥಾನಗಳನ್ನು ಹಾಗೂ ದೇಶದಲ್ಲಿ 28 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಇದು ಬ್ಯಾಲೆಟ್‌ ಕಾಗದದಲ್ಲಿ ಆಗಿರುವ ಚುನಾವಣೆಯಾಗಿದ್ದು, ಅದರಲ್ಲೂ ಬಿಜೆಪಿ ಗೆದ್ದಿದೆ. ಅಂದರೆ ಕಾಂಗ್ರೆಸ್‌ ವೋಟ್‌ ಚೋರಿ ಆರೋಪ ಸುಳ್ಳಾಗಿದ್ದು, ಎಲ್ಲದರಲ್ಲೂ ಕಾಂಗ್ರೆಸ್‌ಗೆ ಸೋಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಾಧನೆ ಶೂನ್ಯ ಎನ್ನುವುದು ಇದರಿಂದ ತಿಳಿದುಬಂದಿದೆ. ಈ ಬಾರಿ ಜೆಡಿಎಸ್‌-ಬಿಜೆಪಿ ಸಮನ್ವಯ ಸಭೆಗಳು ನಡೆದಿದ್ದು, ಜೆಡಿಎಸ್‌ನ ಎಲ್ಲ ಮುಖಂಡರು ಸಂಪೂರ್ಣ ಸಹಕಾರ ನೀಡಿ ಶ್ರಮಿಸಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆʼʼ ಎಂದರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.