ಅಮೆರಿಕದಲ್ಲಿ ʻರಾಮಾಯಣʼ ಪ್ರೀಮಿಯರ್ ನೋಡಿದ ಪ್ರೇಕ್ಷಕರು ಏನಂದ್ರು? ರಾವಣನಾಗಿ ನಟ ಯಶ್ ಅಬ್ಬರ ಹೇಗಿದೆ?
Ramayana Movie Premiere: ‘ರಾಮಾಯಣ: ದಿ ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮೊದಲ ಪ್ರದರ್ಶನ ಅಮೆರಿಕದ ಲಾಸ್ ಏಂಜಲೀಸ್‌ನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಕಲಾವಿದರ ನಟನೆ, ಕ್ಲೈಮ್ಯಾಕ್ಸ್ ಹಾಗೂ ಹಿನ್ನೆಲೆ ಸಂಗೀತಕ್ಕೆ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
ಬಹುನಿರೀಕ್ಷಿತ ‘ರಾಮಾಯಣ: ದಿ ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮೊದಲ ಪ್ರದರ್ಶನ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ನಡೆದಿದ್ದು, ಸಿನಿಪ್ರಿಯರಿಂದ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.
ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿರುವ ಖ್ಯಾತ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರೀಮಿಯರ್ ಶೋಗೆ ಭಾರತೀಯರು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸಿನಿಪ್ರಿಯರೂ ಸಾಕ್ಷಿಯಾದರು. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಜನಪ್ರಿಯ ಸಿನಿ ವಿಮರ್ಶಾ ತಾಣ ‘ಲೆಟರ್‌ಬಾಕ್ಸ್‌ಡ್’ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಹಲವರು ಚಿತ್ರಕ್ಕೆ ಪೂರ್ಣ 4ಕ್ಕೆ 5 ಸ್ಟಾರ್ ನೀಡಿ ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ರಾಮ - ರಾವಣನ ಮುಖಾಮುಖಿ ಥ್ರಿಲ್ ನೀಡುತ್ತದೆ
ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ʻರಾಕಿಂಗ್ ಸ್ಟಾರ್ʼ ಯಶ್ ಹಾಗೂ ಸೀತಾದೇವಿಯಾಗಿ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟ ರಣಬೀರ್ ಕಪೂರ್ ಅವರ ಅಭಿನಯದಲ್ಲಿ ರಾಮನ ಪಾವಿತ್ರ್ಯತೆ ಮತ್ತು ಸೂಕ್ಷ್ಮ ಭಾವನೆಗಳು ಎದ್ದು ಕಾಣುತ್ತಿದ್ದು, ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಲಂಕೇಶ್ವರ ರಾವಣನ ಪಾತ್ರದಲ್ಲಿ ಅಬ್ಬರಿಸಿರುವ ಯಶ್, ತಮ್ಮ ಕಣ್ಣೋಟ, ಗಾಂಭೀರ್ಯ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಪರದೆಯ ಮೇಲೆ ಅಕ್ಷರಶಃ ನಡುಕ ಹುಟ್ಟಿಸಿದ್ದಾರೆ. ರಾವಣನ ಆಗಮನದ ದೃಶ್ಯಗಳು ನೋಡುಗರಲ್ಲಿ ರೋಮಾಂಚನ ಉಂಟುಮಾಡುವಂತಿದ್ದು, ರಾಮನ ಶಾಂತತೆ ಮತ್ತು ರಾವಣನ ತೀಕ್ಷ್ಣತೆಯ ನಡುವಿನ ಮುಖಾಮುಖಿ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ ಎಂದು ಪ್ರೇಕ್ಷಕರು ತಿಳಿಸಿದ್ದಾರೆ.
Ramayana Movie: ‘ರಾಮಾಯಣ’ ಹಾಡುಗಳ ಬಗ್ಗೆ ಟೀಕೆ; ಎಆರ್ ರೆಹಮಾನ್ ತಿರುಗೇಟು
ನನ್ನ ಕಣ್ಣಲ್ಲಿ ನೀರು ಬಂತು ಎಂದ ವಿದೇಶಿ ಪ್ರೇಕ್ಷಕ
ಈ ಪೌರಾಣಿಕ ಸಿನಿಮಾವು ವಿದೇಶಿ ಪ್ರೇಕ್ಷಕರ ಮೇಲೂ ಗಾಢವಾದ ಪ್ರಭಾವ ಬೀರಿದೆ. ಭಾರತೀಯ ಚಿತ್ರರಂಗದ ಪರಿಚಯವೇ ಇಲ್ಲದ ಅಂತಾರಾಷ್ಟ್ರೀಯ ಪ್ರೇಕ್ಷಕರೊಬ್ಬರು ಚಿತ್ರಕ್ಕೆ 4.5 ಸ್ಟಾರ್ ನೀಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು, "ಯಾವುದೇ ಪೂರ್ವಗ್ರಹ ಅಥವಾ ನಿರೀಕ್ಷೆಯಿಲ್ಲದೆ ಸಿನಿಮಾ ನೋಡಲು ಹೋದೆ. ಆದರೆ, ಇದರ ದೈವಿಕ ಹಿನ್ನೆಲೆ ಸಂಗೀತ ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳು ನನ್ನ ಕಣ್ಣಲ್ಲಿ ನೀರು ತರಿಸಿದವು, ಮೈಜುಂ ಎನಿಸುವ ಅನುಭವ ಇದಾಗಿತ್ತು" ಎಂದು ಬರೆದುಕೊಂಡಿದ್ದಾರೆ.
ಹನುಮಂತನ ಎಂಟ್ರಿಯಿಂದ ನಿರೀಕ್ಷೆ ಡಬಲ್
ತಾಂತ್ರಿಕವಾಗಿಯೂ ಚಿತ್ರವು ವಿಶ್ವದರ್ಜೆಯ ಗುಣಮಟ್ಟವನ್ನು ಕಾಯ್ದುಕೊಂಡಿದೆ. ವಿಎಫ್‌ಎಕ್ಸ್ ಕೆಲಸಗಳು ಅತ್ಯುತ್ತಮವಾಗಿ ಮೂಡಿಬಂದಿವೆ ಎಂದು ವಿಮರ್ಶಕರು ಶ್ಲಾಘಿಸಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರು ಕಥೆಯನ್ನು ತಿರುಚದೆ, ಧಾರ್ಮಿಕ ಭಾವನೆಗಳಿಗೆ ಎಲ್ಲೂ ಧಕ್ಕೆ ಬಾರದಂತೆ ಅತ್ಯಂತ ಪ್ರಾಮಾಣಿಕವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪೋಸ್ಟ್-ಕ್ರೆಡಿಟ್ ದೃಶ್ಯದಲ್ಲಿ ಬರುವ ಹನುಮಂತನ ಎಂಟ್ರಿಯು ಈ ಚಿತ್ರದ ಎರಡನೇ ಭಾಗದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಸಿನಿಮಾದ ಹೈಪ್ ಜಾಸ್ತಿಯಾಗಿದೆ
ಈ ಚಿತ್ರ ಪ್ರದರ್ಶನಕ್ಕೂ ಮುನ್ನ ನಡೆದ ರೆಡ್ ಕಾರ್ಪೆಟ್ ಸಂಭ್ರಮದಲ್ಲಿ ಚಿತ್ರತಂಡ ಸಖತ್ ಆಗಿ ಮಿಂಚಿದೆ. ನಟ ರಣಬೀರ್ ಕಪೂರ್ ಬೆಳ್ಳಿ ಬಣ್ಣದ ರಾಜಮನೆತನದ ಶೈಲಿಯ ಬಂದ್‌ಗಲಾ ಧರಿಸಿ ಗಮನ ಸೆಳೆದರೆ, ನಟಿ ಸಾಯಿ ಪಲ್ಲವಿ ಕೆಂಪು ಬಣ್ಣದ ಸಾಂಪ್ರದಾಯಿಕ ಜರ್ದೋಸಿ ಸೀರೆಯಲ್ಲಿ ಮಿಂಚಿದರು.
ಇನ್ನು ರಾವಣನ ತಲೆಗಳಿರುವ ವಿಶೇಷ ಬ್ರೂಚ್ ಹಾಗೂ ಕಪ್ಪು ಕನ್ನಡಕ ಧರಿಸಿ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್, ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಕೇಂದ್ರಬಿಂದುವಾದರು. ಒಟ್ಟಾರೆಯಾಗಿ ಅಮೆರಿಕದ ಪ್ರೀಮಿಯರ್‌ನಿಂದ ಹೊರಬಿದ್ದಿರುವ ಆರಂಭಿಕ ವಿಮರ್ಶೆಗಳು ಸಿನಿಮಾ ಮೇಲಿನ ಹೈಪ್ ಅನ್ನು ದುಪ್ಪಟ್ಟುಗೊಳಿಸಿವೆ.