ಕತಾರ್ ನಿವಾಸಿ ಮಹೇಶ್ ಗೌಡಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ
ಸಮಾಜಸೇವೆ, ಜನಕಲ್ಯಾಣ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕತಾರ್ ನಿವಾಸಿ, ಸಮುದಾಯ ಮುಖಂಡ ಹಾಗೂ ಕರ್ನಾಟಕ ಸಂಘ ಕತಾರ್‌ನ ಮಾಜಿ ಅಧ್ಯಕ್ಷರಾದ ಮಹೇಶ್ ಗೌಡ ಅವರಿಗೆ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಂಗ್ರಹ ಚಿತ್ರ -
ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಕೆಂಪೇಗೌಡ ಪ್ರತಿಷ್ಠಾನ (Kempegowda Foundation) ವತಿಯಿಂದ ಬೆಂಗಳೂರಿನ (Bengaluru) ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕತಾರ್ (qatar) ನಿವಾಸಿ, ಸಮುದಾಯ ಮುಖಂಡ ಹಾಗೂ ಕರ್ನಾಟಕ ಸಂಘ ಕತಾರ್‌ನ ಮಾಜಿ ಅಧ್ಯಕ್ಷರಾದ ಮಹೇಶ್ ಗೌಡ ಅವರಿಗೆ ಭಾರತದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ರಾಜ್ಯದ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದರು. ಸಮಾಜಸೇವೆ, ಜನಕಲ್ಯಾಣ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರು, ಸಂಸತ್ ಸದಸ್ಯರು, ಶಾಸಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 6 ಮಂದಿಯ ರಕ್ಷಣೆ
ನಾಡಪ್ರಭು ಕೆಂಪೇಗೌಡರ ಆದರ್ಶ, ಮೌಲ್ಯ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿಸುವ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಹೇಶ್ ಗೌಡ ಅವರು ಹಲವು ವರ್ಷಗಳಿಂದ ಕರ್ನಾಟಕ ಸಂಘ ಕತಾರ್, ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.
ಕರ್ನಾಟಕ ಸಂಘ ಕತಾರ್‌ನ ಮಾಜಿ ಅಧ್ಯಕ್ಷರಾಗಿ ಮಹೇಶ್ ಗೌಡ ಅವರು ಕತಾರ್‌ನ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ, ಕನ್ನಡ ನುಡಿ-ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಹಾಗೂ ಅನೇಕ ಸಾಮಾಜಿಕ, ಮಾನವೀಯ ಮತ್ತು ಸೇವಾ ಕಾರ್ಯಗಳಿಗೆ ನಾಯಕತ್ವ ವಹಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ; ಆರೆಂಜ್ ಅಲರ್ಟ್ ಘೋಷಣೆ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹೇಶ್ ಗೌಡ ಅವರು, ಪ್ರಶಸ್ತಿ ಆಯ್ಕೆ ಸಮಿತಿ, ತಮ್ಮ ಗುರುಗಳು, ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ವಿಶ್ವದಾದ್ಯಂತ ಇರುವ ಕನ್ನಡ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಪ್ರಶಸ್ತಿಯನ್ನು ತಮ್ಮ ಸೇವಾ ಪಯಣದಲ್ಲಿ ಜೊತೆಯಾಗಿ ನಿಂತ ಎಲ್ಲರಿಗೂ ಸಮರ್ಪಿಸುತ್ತಿರುವುದಾಗಿ ತಿಳಿಸಿದ ಅವರು, ಈ ಗೌರವವು ಸಮಾಜ ಸೇವೆಯನ್ನು ಇನ್ನಷ್ಟು ಸಮರ್ಪಣೆ, ವಿನಯ ಮತ್ತು ಜವಾಬ್ದಾರಿಯಿಂದ ಮುಂದುವರಿಸಲು ತಮಗೆ ಹೊಸ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.