ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dasoha Ratna Award: ಬಸವ ಸಮಿತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ 'ದಾಸೋಹ ರತ್ನ' ಪ್ರಶಸ್ತಿ ಪ್ರದಾನ

Sadguru Sri Madhusudan Sai: ಅಕ್ಷರ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ಬಸವ ಸಮಿತಿಯಿಂದ ಪ್ರತಿಷ್ಠಿತ ‘ದಾಸೋಹ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ 'ದಾಸೋಹ ರತ್ನ' ಪ್ರಶಸ್ತಿ ಪ್ರದಾನ

ಬೆಂಗಳೂರಿನ ಬಸವ ಸಮಿತಿ ಭವನದಲ್ಲಿ ಶ್ರೀ ಮಧುಸೂದನ ಸಾಯಿ ಅವರಿಗೆ 'ದಾಸೋಹ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. -

Prabhakara R
Prabhakara R Sep 10, 2026 6:01 PM

ಬೆಂಗಳೂರು: ಬಸವ ಸಮಿತಿಯ 62ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬಸವ ಸಮಿತಿ ಸಂಸ್ಥಾಪಕ, ಮಾಜಿ ರಾಷ್ಟ್ರಪತಿ ಡಾ ಬಿ.ಡಿ.ಜತ್ತಿ ಅವರ 114ನೇ ಜಯಂತ್ಯುತ್ಸವದ ಪ್ರಯುಕ್ತ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಅವರಿಗೆ "ದಾಸೋಹ ರತ್ನ" ಪ್ರಶಸ್ತಿಯನ್ನು (Dasoha Ratna Award) ನಗರದಲ್ಲಿ ಗುರುವಾರ ನೀಡಿ ಗೌರವಿಸಲಾಯಿತು.

ಸದ್ಗುರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಎಲ್ಲಿಯಾದರೂ ಹುಟ್ಟಿರಲಿ. ಈಗ ಅವರು ಕನ್ನಡಿಗರು, ಕರ್ನಾಟಕದವರೇ ಆಗಿದ್ದಾರೆ. ಅವರು ಅದೆಷ್ಟು ಎತ್ತರಕ್ಕೆ ಬೆಳೆಯುತ್ತಾರೋ, ಎಷ್ಟು ಸೇವೆ ಮಾಡುತ್ತಾರೋ, ಎಷ್ಟು ಒಳ್ಳೆಯ ಹೆಸರು ಪಡೆಯುತ್ತಾರೋ ಅದೆಲ್ಲವೂ ಕರ್ನಾಟಕದ ಕೀರ್ತಿ ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಬದುಕಿನಲ್ಲಿ ಸುಲಭ-ಸರಳವಾಗಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದು ಮಧುಸೂದನ ಸಾಯಿ ಅವರು ತಮ್ಮ ಜೀವನದ ರೀತಿಯಿಂದಲೇ ಸಾಧಿಸಿ ತೋರಿಸುತ್ತಿದ್ದಾರೆ. ಅಧ್ಯಾತ್ಮವನ್ನು ಆಳವಾಗಿ ಅರಿತಿರುವ ಸದ್ಗುರು, ಅವರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಗ್ರಾಮಗಳಿಗೆ ಕುಡಿಯುವ ನೀರು, ಗೋಶಾಲೆ, ಆಸ್ಪತ್ರೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ದೇಶ-ವಿದೇಶಗಳಲ್ಲಿಯೂ ಕೇಂದ್ರಗಳನ್ನು ಸ್ಥಾಪಿಸಿ ಸಮಾಜಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಇದ್ದರೂ ತಾನೇನೂ ಮಾಡಿಲ್ಲ ಎಂಬ ವಿನೀತ ಭಾವದಿಂದ ಸಮಾಜದ ಜೊತೆಗೆ ಬದುಕುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು: ಸದ್ಗುರು ಶ್ರೀ ಮಧುಸೂದನ ಸಾಯಿ

_Sadguru Sri Madhusudan Sai (2)

ಸ್ವಾಗತ ಭಾಷಣ ಮಾಡಿದ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ, 'ಬಸವಣ್ಣನವರು ಹೇಳಿದ ದಾಸೋಹ ತತ್ತ್ವದ ನಿಜವಾದ ಅರ್ಥದ ಅನುಷ್ಠಾನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿದೆ. ಬಸವ ಸಮಿತಿಯ ಸದಸ್ಯರೊಬ್ಬರು ಹೃದಯಘಾತದಿಂದ ಕಷ್ಟದಲ್ಲಿದ್ದಾಗ ಅವರ ಜೀವ ಉಳಿಸಿದ್ದು ಮುದ್ದೇನಹಳ್ಳಿಯ ಮಧುಸೂದನ ಸಾಯಿ ಆಸ್ಪತ್ರೆ' ಎಂದು ಸ್ಮರಿಸಿದರು.

'ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆಗಳ ಸಿಬ್ಬಂದಿ ಕೆಲಸವನ್ನು ಸೇವೆಯಾಗಿ, ನಿಜವಾದ ಕಾಯಕವಾಗಿ ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವೆಗೆ ಅವರ ಸಂಸ್ಥೆಗಳು ಜೀವಂತ ಉದಾಹರಣೆ. ಸದ್ಗುರುಗಳು 'ಇವನಾರವ ಎಂದೆನಿಸದಿರಯ್ಯ' ಎಂದು ಕೇಳದೆ ಎಲ್ಲರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಸವ ಸಮಿತಿ ಆರಂಭವಾಗಿ 62 ವರ್ಷಗಳಾಗಿವೆ. ಜಗತ್ತಿನ 41 ಭಾಷೆಗಳಿಗೆ ವಚನ ಸಾಹಿತ್ಯ ತರ್ಜುಮೆಯಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ 80 ಭಾಷೆಗಳಿಗೆ ವಚನ ಸಾಹಿತ್ಯ ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ನುಡಿದರು.

ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಮಾತು, ಚಿಂತನೆಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಕೃತಿರೂಪಕ್ಕೆ ತರುತ್ತಿದ್ದಾರೆ. ಅವರದು ಸದ್ದುಗದ್ದಲವಿಲ್ಲದ ಸಾಧನೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಕರ್ನಾಟಕದ ಮಣ್ಣಿನಲ್ಲಿ ಬಸವ ತತ್ತ್ವಗಳು ಬೆರೆತಿವೆ. ಛತ್ತೀಸ್‌ಗಡದಲ್ಲಿ ಹುಟ್ಟಿ, ಆಂಧ್ರದಲ್ಲಿ ವಿದ್ಯಾಭ್ಯಾಸ ಮಾಡಿ, ಕರ್ನಾಟಕವನ್ನು ಕರ್ಮಭೂಮಿ ಮಾಡಿಕೊಂಡಿದ್ದೇನೆ. ನನ್ನನ್ನು ಯಾರೂ 'ಇವನಾರವ' ಎಂದು ಕೇಳಲಿಲ್ಲ. ಬದಲಿಗೆ 'ಇವನಮ್ಮವ' ಎಂದು ಒಪ್ಪಿಕೊಂಡರು. ಈ ನಾಡಿನ ಸಂಸ್ಕೃತಿಯ ಭಾಗವಾಗಿ ವಚನ ಸಾಹಿತ್ಯ ಬೆರೆತಿದೆ. ಇದರಿಂದ ನಾನೂ ಸಾಕಷ್ಟು ಕಲಿತಿದ್ದೇನೆ ಎಂದು ವಿವರಿಸಿದರು.

ಬಸವ ಸಮಿತಿಯವರು ನನಗೆ ಬಸವಣ್ಣನವರ ಹೆಸರಿನಲ್ಲಿ ದಾಸೋಹ ರತ್ನ ಪ್ರಶಸ್ತಿ ಕೊಟ್ಟಿದ್ದಾರೆ. ಈ ಮೂಲಕ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ, ಫಲಾನುಭವಿಗಳನ್ನು ಗೌರವಿಸಿದ್ದಾರೆ. ಮಾತೃಹೃದಯಿ ಸಂತರ ಸಮಕ್ಷಮದಲ್ಲಿ ಇಂಥ ಪ್ರಶಸ್ತಿ ಸ್ವೀಕರಿಸುವುದು ನನಗೆ ದೊಡ್ಡ ಗೌರವ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮುದ್ದೇನಹಳ್ಳಿಗೆ ಬಂದಿದ್ದ ಅರವಿಂದ ಜತ್ತಿ ಅವರು ಬಸವಣ್ಣನ ಆಶಯಗಳು ಮುದ್ದೇನಹಳ್ಳಿಯಲ್ಲಿ ಸಾಕಾರವಾಗಿವೆ ಎಂದು ಹೇಳಿದ್ದರು. ಆ ದಿನದ ಅವರ ಮಾತುಗಳೇ ನನಗೆ ದೊಡ್ಡ ಸನ್ಮಾನ ಎನಿಸಿತ್ತು. ವಚನ ಸಾಹಿತ್ಯ ನನಗೆ ಬಹಳ ಇಷ್ಟ. 'ಸೋಹಂ ಎಂಬುದ ಕೇಳಿ ದಾಸೋಹವ ಮಾಡದಿದ್ದರೆ ಅತಿಗಳೆವ ಗುಹೇಶ್ವರ' ಎನ್ನುತ್ತಾರೆ ಅಲ್ಲಮಪ್ರಭು. ನಮ್ಮ ಮಾತುಗಳು ಕೃತಿರೂಪಕ್ಕೆ ಇಳಿಯದಿದ್ದರೆ ಪ್ರಯೋಜನವಿಲ್ಲ ಎಂದು ವಿವರಿಸಿದರು.

ಛತ್ತೀಸಗಡದಲ್ಲಿ ಹುಟ್ಟಿದ ನನಗೆ ಕರ್ನಾಟಕದಲ್ಲಿ ಸನ್ಮಾನ ಮಾಡಿದ್ದೀರಿ. ಇದು ನಿಜವಾದ ಬಸವ ತತ್ತ್ವ. ವಚನ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಪ್ರಸಾರ ಮಾಡುವ ದೃಷ್ಟಿಯಿಂದ ನಮ್ಮ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ನಿಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡಲಿದೆ. ಬಾಬಾರವರ ಸಾಹಿತ್ಯದೊಂದಿಗೆ ಬಸವಸಾಹಿತ್ಯವೂ ವಿಶ್ವದಾದ್ಯಂತ ಹರಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

_Sadguru Sri Madhusudan Sai (3)

Hospet News: 'ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ': ಸದ್ಗುರು ಶ್ರೀ ಮಧುಸೂದನ ಸಾಯಿ

ಅಂತಾರಾಷ್ಟ್ರೀಯ ಮಾಹಿತಿ ಕೇಂದ್ರ ಉದ್ಘಾಟನೆ

ಇದೇ ಸಂದರ್ಭದಲ್ಲಿ ಬಸವ ಸಮಿತಿ ಕಟ್ಟಡದ ಆವರಣದಲ್ಲಿ 'ಬಸವ ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ'ವನ್ನು ಉದ್ಘಾಟಿಸಲಾಯಿತು. ಶ್ರೀಮತಿ ಸಂಗವ್ವ ಜತ್ತಿ ಸ್ಮರಣಾರ್ಥ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕೆಎಲ್‌ಇ ಬಸವ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಾದ ಗುರುಕುಲದ ವಿದ್ಯಾರ್ಥಿಗಳು 'ವಚನ ಸಂಗೀತ' ಕಾರ್ಯಕ್ರಮ ನಡೆಸಿಕೊಟ್ಟರು. ಬಸವ ಸಮಿತಿ ಉಪಾಧ್ಯಕ್ಷ ಪ್ರಭುದೇವ ಸಿ.ಚಿಗಟೇರಿ ಅವರು ಸಂಸ್ಥೆಯ ಸಹ ಪ್ರಾಧ್ಯಾಪಕ ಶ್ರೀ ಪ್ರಣವ್ ಕಶ್ಯಪ್ ಅವರನ್ನು ಅಭಿನಂದಿಸಿದರು.