ʼʼನಾನು ಮಾತು ತಪ್ಪುವ ಕೆಲಸ ಮಾಡಿಲ್ಲʼʼ: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ ಭಾವುಕ
Siddaramaiah Resigns: ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಗುರುವಾರ (ಮೇ 28) ಲೋಕ ಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ಪತ್ರ ಹಸ್ತಾಂತರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದರು.
ಸಿದ್ದರಾಮಯ್ಯ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 28: ಕೆಲವು ತಿಂಗಳಿನಿಂದ ನಡೆಯುತ್ತಿದ್ದ ರಾಜ್ಯದ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ (Siddaramaiah Resigns) ನೀಡಿದರು. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದರು. ಗುರುವಾರ (ಮೇ 28) ಲೋಕ ಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ಪತ್ರ ಹಸ್ತಾಂತರಿಸಿದರು. ಅದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಜತೆಗೆ ಮಾತು ತಪ್ಪುವ ಕೆಲ ಮಾಡಿಲ್ಲ ಎಂದರು.
ʼʼಹಳ್ಳಿಗಾಡಿನಿಂದ ಬಂದ ನಾನು ರಾಜಕೀಯಕ್ಕೆ ಪ್ರವೇಶಿಸಿದ್ದೇ ಆಕಸ್ಮಿಕ. ಯಾಕೆಂದರೆ ನನ್ನ ಕುಟುಂಬದಲ್ಲಿ ಯಾರೂ ರಾಜಕಾರಣಿಗಳಿರಲಿಲ್ಲ. ಶಾಸಕನಾಗ್ತೀನಿ, ಸಚಿವನಾಗ್ತೀನಿ ಮತ್ತು ಮುಖ್ಯಮಂತ್ರಿಯಾಗ್ತೀನಿ ಎನ್ನುವ ಕನಸೂ ಕಂಡಿರಲಿಲ್ಲ. ಇದೀಗ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆʼʼ ಎಂದು ವಿವರಿಸಿದರು.
ಅಹಿಂದ ನಾಯಕ, ಕರ್ನಾಟಕದ ದೀರ್ಘಾವಧಿಯ ಸಿಎಂ ಸಿದ್ದರಾಮಯ್ಯ: ನಡೆದು ಬಂದ ಹಾದಿ ಹೀಗಿತ್ತು
ʼʼಚುನಾವಣಾ ಪ್ರಣಾಳಿಕೆಯ ಭರವಸೆ ಈಡೇರಿಸಿದ್ದೇವೆ. ಸಮಾನತೆ ತರಲು ಪ್ರಯತ್ನಿಸಿದ್ದೇವೆ. ನನಗೆ ಜಾತಿ, ಮತ, ಧರ್ಮದ ಭೇದವಿಲ್ಲʼʼ ಎಂದು ಹೇಳಿದರು. ವಿದಾಯ ಭಾಷಣದ ವೇಳೆ ಸಿದ್ದರಾಮಯ್ಯ ಕೊಂಚ ಭಾವುಕರಾಗಿದ್ದಂತೆ ಕಂಡು ಬಂದರು.
ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ
ʼʼನಾನು ಹಿಂದೆಯೂ ಹಲವು ಬಾರಿ, ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಹಲವು ಬಾರಿ ಹೇಳಿದ್ದೆ. 2 ದಿನಗಳ ಹಿಂದೆ ಹೈಕಮಾಂಡ್ ಸಿಎಂ ಹುದ್ದೆ ಬಿಟ್ಟುಕೊಡುವಂತೆ ಸೂಚಿಸಿತು. ಅದರಂತೆ ರಾಜೀನಾಮೆ ನೀಡಿದ್ದೇನೆʼʼ ಎಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ಒಂದೇ ಕುಟುಂಬದಂತೆ ಕೆಲಸ ಮಾಡಲಿದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ʼʼನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ಆಸ್ತಿ-ಪಾಸ್ತಿ ಮಾಡಬೇಕೆಂದು ರಾಜಕೀಯಕ್ಕೆ ಬಂದವನೂ ಅಲ್ಲ. ನನ್ನ ಜೀವನ ತೆರೆದ ಪುಸ್ತಕ. ಮತದಾರರು ಅದಿಕಾರ ಕೊಟ್ಟಾಗ ಜನ ಸೇವೆ ಮಾಡಿದ್ದೇನೆ. 50 ವರ್ಷ ರಾಜಕಾರಣ ಮಾಡಿದ್ದೇನೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಮೂಲ ಸೌಲಭ್ಯ ದೊರೆಯಬೇಕು ಎನ್ನುವುದೇ ನನ್ನ ಆಶಯ. ಅದಕ್ಕಾಗಿಯೇ ಶ್ರಮಿಸಿದ್ದೇನೆ. ಅಂಬೇಡ್ಕರ್, ಬಸವಣ್ಣ, ಬುದ್ಧ ಮತ್ತು ಗಾಂಧೀಜಿ ನನಗೆ ಸ್ಫೂರ್ತಿ. ನಾನು ನಂಬಿದ ಸಿದ್ದಾಂತ, ಮೌಲ್ಯಗಳಿಗೆ ರಾಜಿ ಆಗಿಲ್ಲʼʼ ಎಂದು ವಿವರಿಸಿದರು.
ʼʼಕಾಂಗ್ರೆಸ್ ಹೈಕಮಾಂಡ್ ನನಗೆ ರಾಜ್ಯಸಭೆಯ ಆಫರ್ ನೀಡಿತ್ತು. ಆದರೆ ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದಿದ್ದೇನೆ. ನನಗೆ ಜನರ ಸೇವೆ ಮಾಡಲು ಇನ್ನೂ 2 ವರ್ಷಗಳ ಅವಕಾಶ ಇದೆʼʼ ಎನ್ನುವ ಮೂಲಕ ರಾಜ್ಯದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದರು. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ, ʼʼಇದನ್ನು ಹೈಕಮಾಂಡ್ ನಿರ್ಧರಿಸುತ್ತದೆʼʼ ಎಂದು ಹೇಳಿದರು. ಜತೆಗೆ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾಗಿ ಪುನರುಚ್ಚರಿಸಿದರು.
ಈ ವರ್ಷದ ಆರಂಭದಲ್ಲಿ ಸಿದ್ದರಾಮಯ್ಯ ರಾಜ್ಯದ ದೀರ್ಘ ಅವರದಿಯ ಮುಖ್ಯಮಂತ್ರಿ ಮತ್ತು ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ರಾಜದ ಜನಪ್ರತಿನಿಧಿ ಎನ್ನುವ ದಾಖಲೆ ಬರೆದಿದ್ದರು.