ಲಾಕ್‌ಡೌನ್ ವೇಳೆ ಹರಸಾಹಸಪಟ್ಟು ನೀಟ್ ಬರೆದಿದ್ದ ತನುಜಾ ಈಗ ಡಾ. ತನುಜಾ!
ಮನಸ್ಸಿದ್ದರೆ ಮಾರ್ಗ ಎಂಬಂತೆ, ನೀಟ್ ಪರೀಕ್ಷೆ ಬರೆಯಲು ಕೊನೇ ಕ್ಷಣದಲ್ಲಿ ಅನುಮತಿ ಸಿಕ್ಕಾಗ, ಶಿಕಾರಿಪುರದಿಂದ ಬೆಂಗಳೂರಿಗೆ 350 ಕಿಲೋಮೀಟರ್ ಕಾರಿನಲ್ಲಿ ಪ್ರಯಾಣಿಸಿ, ತೀವ್ರ ಜ್ವರದ ನಡುವೆಯೂ ಯಶಸ್ವಿಯಾಗಿ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಪ್ರವೇಶ ಪಡೆದಿದ್ದ ಛಲಗಾತಿ ತನುಜಾ ಇದೀಗ ಯಶಸ್ವಿಯಾಗಿ ಎಂಬಿಬಿಎಸ್ ಮುಗಿಸಿ ವೈದ್ಯೆಯಾಗಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಮನಸ್ಸಿದ್ದರೆ ಮಾರ್ಗ ಎಂಬಂತೆ, ನೀಟ್ (NEET) ಪರೀಕ್ಷೆ ಬರೆಯಲು ಕೊನೇ ಕ್ಷಣದಲ್ಲಿ ಅನುಮತಿ ಸಿಕ್ಕಾಗ, ಶಿಕಾರಿಪುರದಿಂದ ಬೆಂಗಳೂರಿಗೆ 350 ಕಿಲೋಮೀಟರ್ ಕಾರಿನಲ್ಲಿ ಪ್ರಯಾಣಿಸಿ, ತೀವ್ರ ಜ್ವರದ ನಡುವೆಯೂ ಯಶಸ್ವಿಯಾಗಿ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಪ್ರವೇಶ (Dr Tanuja) ಪಡೆದಿದ್ದ ಛಲಗಾತಿ ತನುಜಾ ಇದೀಗ ಯಶಸ್ವಿಯಾಗಿ ಎಂಬಿಬಿಎಸ್ ಮುಗಿಸಿ ವೈದ್ಯೆಯಾಗಿದ್ದಾರೆ. ತನುಜಾ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕೃಷಿ ಕುಟುಂಬದಿಂದ ಬಂದವರು. ವೈದ್ಯೆ ಆಗಬೇಕೆಂಬ ಕನಸು ಕಂಡಿದ್ದರು. ಆದರೆ ಆಗ ಕೋವಿಡ್ ಲಾಕ್‌ಡೌನ್ ಸಮಯ ಆಗಿದ್ದರಿಂದ ಪರೀಕ್ಷೆಗೆ ಹಾಜರಾಗಲು ತೊಡಕಾಗಿತ್ತು.
ಅವರ ಸಂಕಷ್ಟ ತಿಳಿದ ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಚಿಕ್ಕಬಳ್ಳಾಪುರ ಶಾಸಕರಾಗಿರುವ ಪ್ರದೀಪ್ ಈಶ್ವರ್ ಅವರು ಕೂಡ ನೆರವು ನೀಡಿದ್ದರು. ಬಳಿಕ ತನುಜಾ, ಬೆಳಗಾವಿಯ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (BIMS) ಮೆಡಿಕಲ್ ಸೀಟ್ ಪಡೆದುಕೊಂಡಿದ್ದರು. ತನುಜಾ ಅವರ ಈ ಸಾಹಸಮಯ ಮತ್ತು ಸ್ಫೂರ್ತಿದಾಯಕ ಕತೆ ಆಧರಿಸಿ ಕನ್ನಡದಲ್ಲಿ 'ತನುಜಾ' ಹೆಸರಿನಲ್ಲೇ ಸಿನಿಮಾ ಮಾಡಲಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ವಿಶ್ವೇಶ್ವರ್ ಭಟ್
ತನುಜಾ ಅವರು ಈಗ ಡಾ. ತನುಜಾ ಆಗಿರುವ ಬಗ್ಗೆ ವಿಶ್ವೇಶ್ವರ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಸಾಧ್ಯವನ್ನು ಸಾಧ್ಯವಾಗಿಸಿದ ಹಠದ ಛಲಗಾರ್ತಿಯ ವಿಜಯಯಾತ್ರೆ. ಬದುಕಿನಲ್ಲಿ ಕೆಲವು ಕ್ಷಣಗಳು ನಮ್ಮ ಯಶಸ್ಸಿಗಿಂತಲೂ ಹೆಚ್ಚು ಆನಂದವನ್ನು, ನಿರಾಳತೆಯನ್ನು ತಂದುಕೊಡುತ್ತವೆ. ಅಂಥ ಒಂದು ಅಪರೂಪದ, ಭಾವನಾತ್ಮಕ ಮತ್ತು ಹೆಮ್ಮೆಯ ಕ್ಷಣಕ್ಕೆ ಇಂದು ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಐದು ವರ್ಷಗಳ ಹಿಂದೆ, ಇಡೀ ಜಗತ್ತೇ ಕೋವಿಡ್ ಮಹಾಮಾರಿಯ ಕಪಿಮುಷ್ಟಿಯಲ್ಲಿ ಸಿಲುಕಿ ತತ್ತರಿಸುತ್ತಿದ್ದಾಗ, ಭವಿಷ್ಯದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ವ್ಯವಸ್ಥೆಯ ವಿರುದ್ಧ, ಸಮಯದ ವಿರುದ್ಧ ಹೋರಾಡಿದ ಒಬ್ಬ ಅಜ್ಞಾತ ಹೆಣ್ಣುಮಗಳು ಇಂದು ತನ್ನ ಹೆಸರಿನ ಮುಂದೆ ‘ಡಾಕ್ಟರ್’ ಎಂಬ ಹೆಮ್ಮೆಯ ಪದವಿಯನ್ನು ಧರಿಸಿದ್ದಾಳೆ ಎಂದು ಹೇಳಿದ್ದಾರೆ.
ತನುಜಾ ಈಗ ಕೇವಲ ಒಬ್ಬ ಸಾಮಾನ್ಯ ಹುಡುಗಿಯಲ್ಲ, ಅವಳು ಸಮಾಜಕ್ಕೆ ಪ್ರೇರಣೆಯಾದ ‘ಡಾ. ತನುಜಾ’. ಈ ಸುದ್ದಿ ಕೇಳಿದಾಗ ಉಂಟಾದ ಆನಂದಕ್ಕೆ ಪಾರವೇ ಇಲ್ಲ, ಎದೆಯಾಳದಿಂದ ಮೂಡಿದ ಸಮಾಧಾನಕ್ಕೆ ಮಿತಿಯೇ ಇಲ್ಲ. ಹಿಂತಿರುಗಿ ನೋಡಿದರೆ ಐದು ವರ್ಷಗಳ ಹಿಂದಿನ ಆ ದಿನಗಳು ಕಣ್ಣಮುಂದೆ ಕಡುಗತ್ತಲೆಯಂತೆ ಬಂದು ನಿಲ್ಲುತ್ತವೆ. ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಸಮಯವದು. ಆ ಕಠಿಣ ಪರಿಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಒಂದು ಸಣ್ಣ ಹಳ್ಳಿಯ ಬಡ ಕುಟುಂಬದ ಹೆಣ್ಣುಮಗಳು ತನುಜಾ, ತಾನು ವೈದ್ಯೆಯಾಗಬೇಕೆಂಬ ಅದಮ್ಯ ಕನಸಿನೊಂದಿಗೆ ನೀಟ್ (NEET) ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಆದರೆ, ದುರದೃಷ್ಟವಶಾತ್ ಪರೀಕ್ಷೆಯ ಹೊತ್ತಿಗೆ ಅವಳಿಗೆ ಕೋವಿಡ್ ಕಾರಣದಿಂದ ಇಡೀ ಊರಿಗೆ ಲಾಕ್ ಡೌನ್ ಆಗಿತ್ತು. ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಸಿಗದ ಅಸಹಾಯಕ ಸ್ಥಿತಿ. ಅಲ್ಲಿ ತನಕ ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟು ಓದಿದ್ದೆಲ್ಲ ವ್ಯರ್ಥವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಕೋವಿಡ್ ಕಾಲದಲ್ಲಿ ಇದ್ದ ಕಠಿಣ ನಿಯಮಗಳು, ಸಾರಿಗೆ ಸಂಪರ್ಕದ ಕೊರತೆ ಮತ್ತು ಸಮಯದ ಅಭಾವ ಆಕೆಯ ಕನಸನ್ನು ನುಚ್ಚುನೂರು ಮಾಡುವ ಹಂತಕ್ಕೆ ತಲುಪಿಸಿದ್ದವು.
ಒಬ್ಬ ಅಜ್ಞಾತ ಹುಡುಗಿ ತನಗೊದಗಿದ ಸಂಕಷ್ಟದಿಂದ ಕಣ್ಣೀರು ಹಾಕುತ್ತಿದ್ದಾಗ, ಆಕೆಯ ನೆರವಿಗೆ ನಿಂತಿದ್ದು ಮಾನವೀಯತೆ ಮತ್ತು ಆಕೆಯ ಅಪ್ರತಿಮ ಹಠ. ಪರೀಕ್ಷೆ ಬರೆಯಲು ಆಕೆ ಪಟ್ಟ ಶ್ರಮ, ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ತಲುಪಬೇಕಾದ ಅನಿವಾರ್ಯತೆ ಇತ್ತು. ವ್ಯವಸ್ಥೆಯ ಕೆಂಪುಪಟ್ಟಿ ಆಡಳಿತದ ನಡುವೆ, ಸಮಯದ ವಿರುದ್ಧದ ಓಟದಲ್ಲಿ ಆಕೆ ತೋರಿದ ಧೈರ್ಯ ಸಾಮಾನ್ಯವಾದದ್ದಲ್ಲ. ಅಂತಿಮವಾಗಿ ಆಕೆ ಪರೀಕ್ಷಾ ಕೇಂದ್ರದೊಳಗೆ ಹೆಜ್ಜೆ ಇಟ್ಟು, ಪರೀಕ್ಷೆ ಬರೆದು, ಅದ್ಭುತ ಅಂಕಗಳೊಂದಿಗೆ ಮೆಡಿಕಲ್ ಸೀಟು ಗಿಟ್ಟಿಸಿಕೊಂಡಾಗ ಇಡೀ ನಾಡೇ ಹರ್ಷಿಸಿತ್ತು.
Vishweshwar Bhat: ನೂತನ ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಶುಭ ಕೋರಿದ ವಿಶ್ವೇಶ್ವರ ಭಟ್
ತನುಜಾಳ ಈ ಹೋರಾಟ ಕೇವಲ ಒಬ್ಬಳ ಹೋರಾಟವಾಗಿ ಉಳಿಯಲಿಲ್ಲ. ಆಕೆಗೆ ಪರೀಕ್ಷೆ ಬರೆಯಲು ಬೆನ್ನೆಲುಬಾಗಿ ನಿಂತು, ಕುಸಿಯುತ್ತಿದ್ದ ಆತ್ಮವಿಶ್ವಾಸವನ್ನು ಮರುಕಳಿಸುವಂತೆ ಮಾಡಿ, “ನಿನಗೆ ಒಳ್ಳೆಯದಾಗುತ್ತದೆ, ನೀನು ಪರೀಕ್ಷೆ ಬರೆಯಲೇಬೇಕು” ಎಂದು ಧೈರ್ಯ ತುಂಬಿದ ಪ್ರದೀಪ ಈಶ್ವರ್ ಅವರ ಪಾತ್ರ ಈ ಕಥೆಯಲ್ಲಿ ಅತ್ಯಂತ ಮಹತ್ವದ್ದು. ಅಂದು ಒಬ್ಬ ಸಾಮಾನ್ಯ ಯುವಕನಾಗಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಅದೇ ಪ್ರದೀಪ ಈಶ್ವರ್, ಇಂದು ಜನಪ್ರಿಯ ಶಾಸಕರಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಕಾಲದ ಸುಂದರ ನ್ಯಾಯ.
ಈ ಅದ್ಭುತ ಜೈತ್ರಯಾತ್ರೆಯನ್ನು ನಾಡಿಗೆ ತಲುಪಿಸಬೇಕು, ಬಡತನ ಮತ್ತು ಸಂಕಷ್ಟಗಳ ನಡುವೆ ನರಳುವ ಕೋಟ್ಯಂತರ ವಿದ್ಯಾರ್ಥಿಗಳಿಗೆ ಇದೊಂದು ದಾರಿದೀಪವಾಗಬೇಕು ಎಂದು ನನ್ನ ಆತ್ಮೀಯ ಸ್ನೇಹಿತರಾದ ಎಂ.ಡಿ.ಹಳ್ಳಿ ಹರೀಶ್ ಅವರು ಶ್ರಮವಹಿಸಿ "ತನುಜಾʼ ಎಂಬ ಹೆಸರಿನಲ್ಲೇ ಸಿನಿಮಾ ಮಾಡಿದರು. ಒಬ್ಬ ಪತ್ರಕರ್ತನಾಗಿ, ಸಂಪಾದಕನಾಗಿ ವ್ಯವಸ್ಥೆಯ ಗಮನ ಸೆಳೆಯುವಲ್ಲಿ ಮತ್ತು ತನುಜಾಳಿಗೆ ನ್ಯಾಯ ಒದಗಿಸುವಲ್ಲಿ ನಾನು ವಹಿಸಿದ ಪಾತ್ರವನ್ನು ಅದೇ ಸಿನಿಮಾದಲ್ಲಿ ನಾನೇ (ಸಂಪಾದಕ ವಿಶ್ವೇಶ್ವರ ಭಟ್) ಪರದೆಯ ಮೇಲೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಬದುಕಿನ ಅತ್ಯಂತ ಸುಂದರ ಮತ್ತು ಸಾರ್ಥಕ ನೆನಪಿನ ಬುತ್ತಿ ಎಂದು ಅವರು ಬರೆದುಕೊಂಡಿದ್ದಾರೆ.
ರಿಯಲ್ ಲೈಫ್ ಘಟನೆಯನ್ನು ರೀಲ್ ಲೈಫ್‌ನಲ್ಲಿ ಮರುಸೃಷ್ಟಿಸುವಾಗ ಅನುಭವಿಸಿದ ರೋಮಾಂಚನ ಇಂದಿಗೂ ಹಸಿರಾಗಿದೆ. ಅಂದು ಬಿತ್ತಿದ ಛಲದ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ತನುಜಾ ವೈದ್ಯಕೀಯ ಶಿಕ್ಷಣವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿ, ಎಂಬಿಬಿಎಸ್ ಪದವಿ ಪಡೆದು ಇಂದು ಅಧಿಕೃತವಾಗಿ ವೈದ್ಯೆಯಾಗಿದ್ದಾಳೆ. ಬಡತನ, ರೋಗ, ಸಾರಿಗೆ ಸಂಪರ್ಕದ ಕೊರತೆ, ನಿಯಮಗಳ ಬೇಲಿ– ಇವೆಲ್ಲವನ್ನೂ ತನ್ನ ಇಚ್ಛಾಶಕ್ತಿಯಿಂದ ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾಳೆ. ಛಲವೊಂದಿದ್ದರೆ ವಿಧಿಯ ಬರಹವನ್ನೂ ಬದಲಾಯಿಸಬಹುದು ಎಂಬುದಕ್ಕೆ ಡಾ. ತನುಜಾ ಅತ್ಯುತ್ತಮ ಉದಾಹರಣೆ. ಈ ಯಶಸ್ಸು ಕೇವಲ ತನುಜಾ ಎಂಬ ವ್ಯಕ್ತಿಯದ್ದಲ್ಲ; ಇದು ಶ್ರಮಕ್ಕೆ ಸಿಕ್ಕ ಜಯ, ಸತ್ಯಕ್ಕೆ ಸಿಕ್ಕ ಪ್ರತಿಫಲ ಮತ್ತು ಮಾನವೀಯತೆಯ ಗೆಲುವು. ಒಬ್ಬ ಪತ್ರಕರ್ತನಾಗಿ, ಆಕೆಯ ಹೋರಾಟವನ್ನು ಹತ್ತಿರದಿಂದ ನೋಡಿದವನಾಗಿ ನನಗೆ, ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸಂತೋಷ, ನೆಮ್ಮದಿ ಮತ್ತು ಸಮಾಧಾನ ಇನ್ನೇನಿದೆ?
ಡಾ. ತನುಜಾ ಅವರ ಮುಂದಿನ ವೃತ್ತಿಜೀವನ ಅತ್ಯಂತ ಯಶಸ್ವಿಯಾಗಲಿ. ಬಡವರ, ನೊಂದವರ ಪಾಲಿಗೆ ಆಕೆ ಕರುಣಾಮಯಿ ಧನ್ವಂತರಿಯಾಗಲಿ. ಸಮಾಜದಲ್ಲಿ ಆಕೆ ನೂರಾರು ತನುಜಾರಿಗೆ ಸ್ಫೂರ್ತಿಯಾಗಿಲಿ ಎಂಬುದೇ ಈ ಕ್ಷಣದ ಹಾರೈಕೆ ಮತ್ತು ಹೆಮ್ಮೆ ಎಂದು ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾರೈಸಿದ್ದಾರೆ.