Bengaluru Traffic: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಮಗ್ರ ನಗರ ಸಂಚಾರ ವ್ಯವಸ್ಥೆ; ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ
Urban Mobility Mission Committee for Bengaluru: ಪ್ರಯಾಣಿಕರ ಸುರಕ್ಷತೆ, ಸಂಪರ್ಕ ವ್ಯವಸ್ಥೆ ಸುಧಾರಣೆ, ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ, ORR, ಮಾನ್ಯತಾ ಟೆಕ್ ಪಾರ್ಕ್, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮುಂತಾದ ಪ್ರಮುಖ ಉದ್ಯೋಗ ಕೇಂದ್ರಗಳ ಸಂಚಾರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ರೂಪಿಸುವುದು ಬೆಂಗಳೂರು ನಗರ ಸಂಚಾರ ಮಿಷನ್ ಸಮಿತಿಯ ಉದ್ದೇಶವಾಗಿದೆ.
-
ಬೆಂಗಳೂರು, ಆಗಸ್ಟ್ 8, 2026: ಬೆಂಗಳೂರಿನ ನಗರ ಸಂಚಾರ (Bengaluru Traffic) ವ್ಯವಸ್ಥೆಯನ್ನು ಮತ್ತಷ್ಟು ಸಮಗ್ರ, ಪರಿಣಾಮಕಾರಿ, ಸುಸ್ಥಿರ ಹಾಗೂ ತಂತ್ರಜ್ಞಾನ ಆಧಾರಿತವಾಗಿ ರೂಪಿಸುವ ಉದ್ದೇಶದಿಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ‘ಬೆಂಗಳೂರು ನಗರ ಸಂಚಾರ ಮಿಷನ್ ಸಮಿತಿ’ (Urban Mobility Mission Committee for Bengaluru–UMMCB)ಯನ್ನು ಕರ್ನಾಟಕ ಸರ್ಕಾರ ರಚಿಸಿದ್ದು ಸರ್ಕಾರದ ಗೃಹ ಇಲಾಖೆ ಆದೇಶ ಹೊರಡಿಸಿದೆ.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ಪ್ರಯಾಣದ ಅವಧಿ, ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕದ ಕೊರತೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ನಡುವಿನ ಸಮನ್ವಯದ ಕೊರತೆ, ಪಾರ್ಕಿಂಗ್ ಸಮಸ್ಯೆ, ಸರಕು ಸಾಗಣೆ ಹಾಗೂ ರಸ್ತೆ ಸ್ಥಳದ ಮೇಲಿನ ಒತ್ತಡ ಸೇರಿದಂತೆ ಹಲವು ನಗರ ಸಂಚಾರ ಸವಾಲುಗಳು ಎದುರಾಗುತ್ತಿವೆ. ಇವು ನಗರದ ಉತ್ಪಾದಕತೆ, ಆರ್ಥಿಕ ದಕ್ಷತೆ ಹಾಗೂ ನಾಗರಿಕರ ಜೀವನಮಟ್ಟದ ಮೇಲೂ ಪರಿಣಾಮ ಬೀರುತ್ತಿವೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ನಗರ ಸಂಚಾರ ವ್ಯವಸ್ಥೆಯಲ್ಲಿ ಸಂಚಾರ ನಿರ್ವಹಣಾ ಸಂಸ್ಥೆಗಳು, ಸಾರ್ವಜನಿಕ ಸಾರಿಗೆ ಸಂಸ್ಥೆಗಳು, ನಗರ ಯೋಜನಾ ಸಂಸ್ಥೆಗಳು, ಮೂಲಸೌಕರ್ಯ ಸಂಸ್ಥೆಗಳು, ಖಾಸಗಿ ಸಂಚಾರ ವೇದಿಕೆಗಳು, ಲಾಜಿಸ್ಟಿಕ್ಸ್ ಸಂಸ್ಥೆಗಳು, ತಂತ್ರಜ್ಞಾನ ಸಂಸ್ಥೆಗಳು ಹಾಗೂ ನಾಗರಿಕ ಸಂಘಟನೆಗಳು ಸೇರಿದಂತೆ ಹಲವು ಪಾಲುದಾರರು ಭಾಗಿಯಾಗಿರುವ ಹಿನ್ನೆಲೆಯಲ್ಲಿ, ನಿಯಮಿತ ಸಮನ್ವಯ, ದತ್ತಾಂಶ ಹಂಚಿಕೆ, ಸಮಗ್ರ ಯೋಜನೆ ಹಾಗೂ ಕಾರ್ಯಕ್ಷಮತೆ ಮೇಲ್ವಿಚಾರಣೆಗೆ ಸಾಂಸ್ಥಿಕ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಗೃಹ ಸಚಿವರ ಅಧ್ಯಕ್ಷತೆ
ಸಮಿತಿಗೆ ಕರ್ನಾಟಕ ಸರ್ಕಾರದ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರು ಅಧ್ಯಕ್ಷರಾಗಿದ್ದು, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಉಪಾಧ್ಯಕ್ಷರಾಗಿರುತ್ತಾರೆ. ಗೃಹ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಬೆಂಗಳೂರು ನಗರ ಪೊಲೀಸ್, ನಗರಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಬಿಬಿಎಂಪಿ ಸಂಬಂಧಿತ ಸಂಸ್ಥೆಗಳು, ನಗರ ಭೂ ಸಾರಿಗೆ ನಿರ್ದೇಶನಾಲಯ (DULT), ಸಾರಿಗೆ ಇಲಾಖೆ, ಬಿಎಂಟಿಸಿ, ಮೆಟ್ರೋ, ಬೆಂಗಳೂರು ಜಲಮಂಡಲಿ, ಲೋಕೋಪಯೋಗಿ, ಕೆ-ರೈಡ್, ರಾಜ್ಯ ರಸ್ತೆ ಸಾರಿಗೆ, ಬೆಸ್ಕಾಂ, ಕೆಪಿಟಿಸಿಎಲ್, ರಾಷ್ಟ್ರೀಯ ಹೆದ್ದಾರಿ ಸಂಸ್ಥೆಗಳು ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ಇದರೊಂದಿಗೆ ನಮ್ಮಯಾತ್ರಿ, ಮೂವಲೆನ್ ಸಿಂಕ್, ಊಬರ್, ರ‍್ಯಾಪಿಡೊ, ಓಲಾ ಸೇರಿದಂತೆ ಖಾಸಗಿ ಸಂಚಾರ ವೇದಿಕೆಗಳು, ಹೋಟೆಲ್‌ಗಳು, ಶಾಲಾ-ಕಾಲೇಜು ಸಂಘಟನೆಗಳು, ಆಟೊ-ರಿಕ್ಷಾ ಮತ್ತು ಟ್ಯಾಕ್ಸಿ ಸಂಘಟನೆಗಳು, ಉದ್ಯೋಗಿಗಳ ಸಾರಿಗೆ ಸೇವೆ, ಪಾರ್ಕಿಂಗ್ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ವಿವಿಧ ಖಾಸಗಿ ವಲಯದ ಪ್ರತಿನಿಧಿಗಳನ್ನೂ ಸಮಿತಿಯಲ್ಲಿ ಒಳಗೊಳ್ಳಲಾಗಿದೆ. ಸ್ವಿಗ್ಗಿ, ಜೊಮೆಟೊ, ಅಮೆಜಾನ್ ಲಾಜಿಸ್ಟಿಕ್ಸ್, ಫ್ಲಿಪ್‌ಕಾರ್ಟ್ ಸೇರಿದಂತೆ ವಿತರಣಾ ಮತ್ತು ಲಾಜಿಸ್ಟಿಕ್ಸ್ ವಲಯದ ಪ್ರತಿನಿಧಿಗಳಿಗೂ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ.
ತಂತ್ರಜ್ಞಾನ ಸಂಸ್ಥೆಗಳು, ತಜ್ಞರು, ನಾಗರಿಕ ಪ್ರತಿನಿಧಿಗಳಿಗೂ ಅವಕಾಶ
ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ, ಮಾನ್ಯತಾ ಟೆಕ್ ಪಾರ್ಕ್, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್/ಐಟಿಪಿಬಿ, ಬಾಗ್ಮನೆ ಟೆಕ್ ಪಾರ್ಕ್, ಎಂಬೆಸಿ ಟೆಕ್ ವಿಲೇಜ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹಾಗೂ ಉದ್ಯೋಗ ಕೇಂದ್ರಗಳ ಪ್ರತಿನಿಧಿಗಳನ್ನೂ ಸಮಿತಿಗೆ ಸೇರಿಸಲಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಬೆಂಗಳೂರು (ಐಐಐಟಿ-ಬಿ), ಭಾರತೀಯ ನಿರ್ವಹಣಾ ಸಂಸ್ಥೆ, ಬೆಂಗಳೂರು (ಐಐಎಂ ಬೆಂಗಳೂರು) ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಸ್ತೆ ಸುರಕ್ಷತೆ ಮತ್ತು ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನಾಗರಿಕ ಸಮಾಜದ ಪ್ರತಿನಿಧಿಗಳೂ ಸಮಿತಿಯ ಭಾಗವಾಗಿರುತ್ತಾರೆ.
ದತ್ತಾಂಶ ಆಧಾರಿತ ಸಂಚಾರ ನಿರ್ವಹಣೆಗೆ ಆದ್ಯತೆ- ಪ್ರಿಯಾಂಕ್ ಖರ್ಗೆ
ಸಮಿತಿಯ ಪ್ರಮುಖ ಉದ್ದೇಶಗಳಲ್ಲಿ ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯ ಹೆಚ್ಚಿಸುವುದು, ಖಾಸಗಿ ಸಂಚಾರ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳನ್ನು ಅಧಿಕೃತ ಪಾಲುದಾರರನ್ನಾಗಿ ಮಾಡುವುದು, ಸಾರ್ವಜನಿಕ ಸಾರಿಗೆ–ಖಾಸಗಿ ಸಾರಿಗೆ–ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ–ಪಾದಚಾರಿ ಮೂಲಸೌಕರ್ಯಗಳನ್ನು ಸಮಗ್ರಗೊಳಿಸುವುದು ಹಾಗೂ ದತ್ತಾಂಶ ಆಧಾರಿತ ಕ್ರಮಗಳ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಸೇರಿವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರಯಾಣಿಕರ ಅನುಭವ, ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸಂಪರ್ಕ ವ್ಯವಸ್ಥೆ ಸುಧಾರಣೆ, ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ, ORR, ಮಾನ್ಯತಾ ಟೆಕ್ ಪಾರ್ಕ್, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮುಂತಾದ ಪ್ರಮುಖ ಉದ್ಯೋಗ ಕೇಂದ್ರಗಳ ಸಂಚಾರ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ರೂಪಿಸುವುದು ಹಾಗೂ ನೈಜ-ಸಮಯದ ದತ್ತಾಂಶ ಹಂಚಿಕೆ ಮತ್ತು ಡ್ಯಾಶ್‌ಬೋರ್ಡ್ ಆಧಾರಿತ ಮೇಲ್ವಿಚಾರಣೆಗೆ ಸಮಿತಿ ಒತ್ತು ನೀಡಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಏಳು ಕಾರ್ಯಪಡೆಗಳ ರಚನೆ
ಸಮಿತಿಯ ಅಡಿಯಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ, ಸಾರ್ವಜನಿಕ ಸಾರಿಗೆ ಸಮನ್ವಯ, ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ, ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಕ್ಲಸ್ಟರ್ ಸಂಚಾರ, ಡಿಜಿಟಲ್ ಸಂಚಾರ ಮತ್ತು ದತ್ತಾಂಶ, ನಗರ ಸರಕು ಮತ್ತು ವಿತರಣಾ ಸಂಚಾರ, ಮೂಲಸೌಕರ್ಯ ಮತ್ತು ರಸ್ತೆ ಕಾಮಗಾರಿಗಳ ಸಮನ್ವಯ ಸೇರಿದಂತೆ ಏಳು ಕಾರ್ಯಪಡೆಗಳನ್ನು ರಚಿಸಲಾಗಿದೆ. ಸಾಮಾನ್ಯ ಬೆಂಗಳೂರು ಸಂಚಾರ ಕ್ರಿಯಾ ಯೋಜನೆ ರೂಪಿಸುವುದು, ಪ್ರಮುಖ ಸಂಚಾರ ದಟ್ಟಣೆ ಉಂಟಾಗುವ ರಸ್ತೆಗಳು ಮತ್ತು ಜಂಕ್ಷನ್‌ಗಳನ್ನು ಗುರುತಿಸುವುದು, ಸಾರ್ವಜನಿಕ ಹಾಗೂ ಖಾಸಗಿ ಸಂಚಾರ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು, ಬೆಂಗಳೂರು ಮೊಬಿಲಿಟಿ ಡ್ಯಾಶ್‌ಬೋರ್ಡ್ ರೂಪಿಸುವುದು, ದತ್ತಾಂಶ ಹಂಚಿಕೆ ವ್ಯವಸ್ಥೆ ಸ್ಥಾಪಿಸುವುದು, ಮೆಟ್ರೋ–ಬಸ್–ಉಪನಗರ ರೈಲು ನಿಲ್ದಾಣಗಳ ಸುತ್ತ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ಸುಧಾರಿಸುವುದು, ಪಾದಚಾರಿ ಮತ್ತು ಸೈಕಲ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಕೈಗೊಂಡ ಕ್ರಮಗಳ ಪ್ರಗತಿಯನ್ನು ಅಳೆಯುವ ಮೂಲಕ ಮೇಲ್ವಿಚಾರಣೆ ನಡೆಸುವುದು ಸಮಿತಿಯ ಪ್ರಮುಖ ಕಾರ್ಯಗಳಾಗಿವೆ ಎಂದೂ ಸಚಿವರು ಹೇಳಿದ್ದಾರೆ.
ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದು, ಕಾರ್ಯಪಡೆಗಳೊಂದಿಗೆ ಕೂಡ ತ್ರೈಮಾಸಿಕ ಸಭೆ ನಡೆಯಲಿದೆ. ಪ್ರಗತಿ ವರದಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸಲ್ಲಿಸಲಾಗುವುದು ಮತ್ತು ವಾರ್ಷಿಕ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
![]()
ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪ್ರತ್ಯೇಕ ಕ್ರಮಗಳ ಬದಲಾಗಿ, ಎಲ್ಲ ಸಂಬಂಧಿತ ಸಂಸ್ಥೆಗಳು, ಖಾಸಗಿ ವಲಯ, ತಂತ್ರಜ್ಞಾನ ಸಂಸ್ಥೆಗಳು, ತಜ್ಞರು ಮತ್ತು ನಾಗರಿಕರನ್ನು ಒಂದೇ ವೇದಿಕೆಗೆ ತಂದು ಸಮಗ್ರ ಪರಿಹಾರ ರೂಪಿಸುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ.
ಪ್ರಿಯಾಂಕ್ ಖರ್ಗೆ, ಗೃಹ ಸಚಿವರು