ಕರ್ನಾಟಕದೊಂದಿಗೆ ಪಾಲುದಾರಿಕೆ ವಿಸ್ತರಿಸಲು ಅಮೆರಿಕ ಬದ್ಧ: ರಾಯಭಾರಿ ಸೆರ್ಗಿಯೊ ಗೋರ್ ಮಹತ್ವದ ಹೇಳಿಕೆ
US Ambassador Sergio Gor: ಕರ್ನಾಟಕದೊಂದಿಗೆ ತನ್ನ ಪಾಲುದಾರಿಕೆಯನ್ನು ವಿಸ್ತರಿಸಲು ಅಮೆರಿಕ ಬದ್ಧವಾಗಿದೆ ಎಂದು ಭಾರತದಲ್ಲಿರುವ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದರು. ಕರ್ನಾಟಕದಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳಿದ್ದು, ಅವು ಸ್ಥಿರವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಜತೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ -
ಬೆಂಗಳೂರು, ಆ. 8: ಭಾರತದೊಂದಿಗೆ ವಿಶೇಷವಾಗಿ ಕರ್ನಾಟಕದೊಂದಿಗೆ (Karnataka) ತನ್ನ ಪಾಲುದಾರಿಕೆಯನ್ನು ವಿಸ್ತರಿಸಲು ಅಮೆರಿಕ ಬದ್ಧವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ (Sergio Gor) ಹೇಳಿದರು. ರಾಜ್ಯದಲ್ಲಿ ಅಮೆರಿಕದ ಕಂಪನಿಗಳ ಉಪಸ್ಥಿತಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಕೃತಕ ಬುದ್ಧಿಮತ್ತೆ (AI), ಡೇಟಾ ಸೆಂಟರ್‌ಗಳು, ಔಷಧೀಯ ಕ್ಷೇತ್ರ, ರಕ್ಷಣಾ ವಲಯ, ಇಂಧನ ಮತ್ತು ಪ್ರಮುಖ ಪೂರೈಕೆ ಸರಪಳಿಗಳಲ್ಲಿ ಸಹಕಾರ ಮುಂದುವರಿದಿದೆ ಎಂದು ತಿಳಿಸಿದರು.
ಬೆಂಗಳೂರಿನ ಸೈನ್ಸ್ ಗ್ಯಾಲರಿಯಲ್ಲಿ ನಡೆದ ಕ್ವಾಂಟಮ್‌ನ ವಿಶೇಷ ಪೂರ್ವವೀಕ್ಷಣೆಯಲ್ಲಿ ಮಾತನಾಡಿದ ಗೋರ್, ಕರ್ನಾಟಕದಲ್ಲಿ 1,000ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳಿದ್ದು, ಅವು ಸ್ಥಿರವಾಗಿ ಬೆಳೆಯುತ್ತಿವೆ. ಅಮೆರಿಕನ್ ಸಂಸ್ಥೆಗಳು ಪಾಲುದಾರಿಕೆ ಮತ್ತು ಹೂಡಿಕೆಗಾಗಿ ಭಾರತದತ್ತ ಹೆಚ್ಚು ಗಮನಹರಿಸುತ್ತಿದೆ ಎಂದು ಹೇಳಿದರು.
“ಹತ್ತು ವರ್ಷಗಳ ಹಿಂದೆ, ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ 20 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿತ್ತು. ಇಂದು ಅದು 240 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಮೀರಿದೆ” ಎಂದು ಅವರು ಹೇಳಿದರು.
ಇಲ್ಲಿದೆ ಪೋಸ್ಟ್:
Great visit to @SciGalleryBLR to explore the QUANTUM exhibition alongside @CMofKarnataka @kiranshaw and @JahnaviPhalkey. Critical and emerging technologies remain central to the U.S.-India partnership. Our countries are committed to expanding scientific collaboration and… pic.twitter.com/qmNo8qM5lr
— Ambassador Sergio Gor (@USAmbIndia) August 7, 2026
ಅಮೆರಿಕ-ಭಾರತದ ನಡುವಿನ ಸಂಬಂಧವು ನಂಬಿಕೆಯ ಆಧಾರದ ಮೇಲೆ ಸ್ಥಾಪಿತವಾಗಿದೆ ಎಂದು ಅವರು ಹೇಳಿದರು. ಭಾರತವು ಇತರ ಯಾವುದೇ ದೇಶಕ್ಕಿಂತಲೂ ಅಮೆರಿಕದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಮರಾಭ್ಯಾಸಗಳನ್ನು ನಡೆಸುತ್ತಿದೆ. ಅಲ್ಲದೆ, ಅಮೆರಿಕ ಬಳಸುವ ಜೆನೆರಿಕ್ ಔಷಧಗಳಲ್ಲಿ ಶೇ. 40ರಷ್ಟು ಔಷಧಿಗಳನ್ನು ಭಾರತ ಪೂರೈಸುತ್ತಿದೆ ಎಂದು ಅವರು ತಿಳಿಸಿದರು.
ಭಾರತೀಯ ಉದ್ಯಮಗಳಲ್ಲಿ ಎಐ ಕ್ರಾಂತಿ: 73% ಕಂಪನಿಗಳಿಗೆ ಸಿಗುತ್ತಿದೆ ಲಾಭ
ಭಾರತಕ್ಕೆ ಆಗಮಿಸಿದ ತಮ್ಮ ಪ್ರಮುಖ ಆದ್ಯತೆಗಳಲ್ಲಿ ಭಾರತವನ್ನು ಪ್ಯಾಕ್ಸ್ ಸಿಲಿಕಾಗೆ ಸೇರಿಸುವುದಾಗಿತ್ತು ಎಂದು ಅವರು ಹೇಳಿದರು. ನಿರ್ಣಾಯಕ ಪೂರೈಕೆ ಸರಪಳಿಗಳಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿರುವ, ಪರಸ್ಪರ ನಂಬಿಕೆಯ ಆಧಾರದ ಪೂರೈಕೆ ಸರಪಳಿ ಉಪಕ್ರಮವೇ ಪ್ಯಾಕ್ಸ್ ಸಿಲಿಕಾ ಎಂದು ಅವರು ವಿವರಿಸಿದರು.
ಪ್ಯಾಕ್ಸ್ ಸಿಲಿಕಾಗೆ ಸೇರುವ ಮೊದಲ 10 ದೇಶಗಳಲ್ಲಿ ಭಾರತವೂ ಒಂದು ಎಂದು ಅಮೆರಿಕ ಹೇಳಿದೆ. ಜರ್ಮನಿ ಮತ್ತು ಜಪಾನ್ ಸೇರಿ ಇತರ ದೇಶಗಳು ಭಾರತವನ್ನು ಆಹ್ವಾನಿಸಿವೆ ಎಂದು ಗೋರ್ ಹೇಳಿದರು. ಭಾರತದಲ್ಲಿ ಅಮೆರಿಕದ ಕಂಪನಿಗಳ ಹೆಚ್ಚುತ್ತಿರುವ ಆಸಕ್ತಿಯನ್ನು ಅವರು ಎತ್ತಿ ತೋರಿಸಿದರು. ಕಾರ್ಯಕ್ರಮಕ್ಕೆ 24 ಗಂಟೆಗಳ ಮೊದಲು ಮೆಟಾ, ರೋಲ್ಸ್ ರಾಯ್ಸ್ ಮತ್ತು ನೆಟ್‌ಫ್ಲಿಕ್ಸ್ ಪ್ರತಿನಿಧಿಗಳನ್ನು ಭೇಟಿಯಾಗಿದ್ದಾಗಿ ಹೇಳಿದರು.
ಇಂಧನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸಹಕಾರದ ಬಗ್ಗೆಯೂ ಅವರು ಗಮನಸೆಳೆದರು. ಈ ಕ್ಷೇತ್ರದಲ್ಲಿ ಅಮೆರಿಕ-ಭಾರತದ ತೊಡಗಿಸಿಕೊಳ್ಳುವಿಕೆ ಹಿಂದಿನ ವರ್ಷಕ್ಕಿಂತ ಶೇ. 30ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.