Chinthamani News: ಕೃಷಿ ಇಲಾಖೆ ನೇಮಕಾತಿ ನಿಯಮ ಉಲ್ಲಂಘನೆ ಆರೋಪ: ಕೃಷಿ ಪದವೀಧರರಿಂದ ಬೃಹತ್ ಪ್ರತಿಭಟನೆ!
2024 ಹಾಗೂ 2026ರ ಕೆಪಿಎಸ್‌ಸಿ ಮತ್ತು ಕೆಇಎ ಅಧಿಸೂಚನೆಗಳಲ್ಲೂ ಯಾವುದೇ ಖಾಸಗಿ ಅಥವಾ ತಾಂತ್ರಿಕ ಪದವೀಧರರಿಗೆ ಅವಕಾಶವಿರಲಿಲ್ಲ.ಆದರೆ ಇತ್ತೀಚೆಗೆ ಹೊರಡಿಸಲಾದ ಜೂನ್ 2026ರ ಹೆಚ್ಚು ವರಿ ಸುತ್ತೋಲೆಗಳ ಮೂಲಕ ರೈಟೆಕ್ ಖಾಸಗಿ ವಿಶ್ವವಿದ್ಯಾಲಯದ ಕೃಷಿ ಪದವೀಧರರಿಗೆ ಹಾಗೂ ಬಿ.ಇ(ಬಯೋಟೆಕ್ನಾಲಜಿ) ಪದವೀಧರರಿಗೆ ನಿಯಮಬಾಹಿರವಾಗಿ ಅರ್ಹತೆ ವಿಸ್ತರಿಸಲಾಗಿದೆ
-
ಚಿಂತಾಮಣಿ: ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಎ ಓ ಹಾಗೂ ಸಹಾಯಕ ಕೃಷಿ ಅಧಿಕಾರಿ ಎ ಓ ಓ ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕ ಕೃಷಿ ಸೇವೆಗಳ ವೃಂದ ಮತ್ತು ನೇಮಕಾತಿ ಸಿ ಆರ್ ನಿಯಮಗಳನ್ನು ಗಾಳಿಗೆ ತೂರಿ, ನಿಯಮಬಾಹಿರವಾಗಿ ಇತರೆ ಪದವೀಧರರನ್ನು ಸೇರ್ಪಡೆ ಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಚಿಂತಾಮಣಿ ಕುರುಬೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗ್ರೇಡ್-2 ತಹಶೀಲ್ದಾರ್ ರಾಜೇಂದ್ರ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದಿನಾಂಕ 15-05-2021 ಮತ್ತು 21-12-2022ರ ಕರ್ನಾಟಕ ರಾಜ್ಯ ಗೆಜೆಟ್ ಪ್ರಕಾರ, ಈ ಹುದ್ದೆಗಳಿಗೆ ಕೇವಲ ICAR ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ AICTE ಮಾನ್ಯತೆ ಪಡೆದ ಸಂಸ್ಥೆ ಗಳ ಕೃಷಿ ಮತ್ತು ಕೃಷಿ ಸಂಬಂಧಿತ ಪದವೀಧರರು ಮಾತ್ರ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: Chinthamani News: ಮುರುಗಮಲ್ಲ ಹೋಬಳಿ ಮಟ್ಟದ ಜೆಡಿಎಸ್ ಮುಖಂಡರ ಸಭೆ
2024 ಹಾಗೂ 2026ರ ಕೆಪಿಎಸ್‌ಸಿ ಮತ್ತು ಕೆಇಎ ಅಧಿಸೂಚನೆಗಳಲ್ಲೂ ಯಾವುದೇ ಖಾಸಗಿ ಅಥವಾ ತಾಂತ್ರಿಕ ಪದವೀಧರರಿಗೆ ಅವಕಾಶವಿರಲಿಲ್ಲ.ಆದರೆ ಇತ್ತೀಚೆಗೆ ಹೊರಡಿಸಲಾದ ಜೂನ್ 2026ರ ಹೆಚ್ಚುವರಿ ಸುತ್ತೋಲೆಗಳ ಮೂಲಕ ರೈಟೆಕ್ ಖಾಸಗಿ ವಿಶ್ವವಿದ್ಯಾಲಯದ ಕೃಷಿ ಪದವೀಧರರಿಗೆ ಹಾಗೂ ಬಿ.ಇ(ಬಯೋಟೆಕ್ನಾಲಜಿ) ಪದವೀಧರರಿಗೆ ನಿಯಮಬಾಹಿರವಾಗಿ ಅರ್ಹತೆ ವಿಸ್ತರಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕೃತ ರಾಜ್ಯ ಗೆಜೆಟ್ ತಿದ್ದುಪಡಿ ಮಾಡದೆ ಕೇವಲ ಇಲಾಖಾ ಸುತ್ತೋಲೆಗಳ ಮೂಲಕ ಇಂತಹ ಮಹತ್ವದ ಬದಲಾವಣೆ ತಂದಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ.
ಕೃಷಿ ಅಧಿಕಾರಿಗಳ ನೇಮಕಾತಿಗೆ ಸೇರ್ಪಡೆಗೊಳಿಸಿರುವ ರೈಟೆಕ್'ಖಾಸಗಿ ವಿಶ್ವವಿದ್ಯಾಲಯ ಹಾಗೂ ಬಿ.ಇ ಬಯೋಟೆಕ್ನಾಲಜಿ ಪದವೀಧರರ ಅರ್ಹತೆಯನ್ನು ತಕ್ಷಣವೇ ಹಿಂಪಡೆಯಬೇಕು.ಕೇವಲ ICAR ಮಾನ್ಯತೆ ಹೊಂದಿರುವ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ಕೃಷಿ ಮತ್ತು ತತ್ಸಮಾನ ಪದವೀಧರ ರಿಗೆ ಮಾತ್ರ AO ಮತ್ತು AAO ಹುದ್ದೆಗಳಲ್ಲಿ ಅವಕಾಶ ನೀಡಬೇಕು.
ICAR ಮಾನ್ಯತೆ ಪಡೆದಿರುವ ಹಾಗೂ ಶೇ.75 ಕ್ಕಿಂತಲೂ ಹೆಚ್ಚು ಕೃಷಿ ವಿಷಯಗಳನ್ನೇ ಕಲಿಯುವ ರೇಷ್ಮೆ ಕೃಷಿ (ಸೆರಿಕಲ್ಚರ್)ಪದವೀಧರರಿಗೂ ಶೇ.15 ರ.ಅಲೈಡ್ ಸೆಕ್ಟರ್ ಕೋಟಾದಲ್ಲಿ ಅವಕಾಶ ಕಲ್ಪಿಸಬೇಕು.
ಕೃಷಿ ಪದವೀಧರರ ಉದ್ಯೋಗಾವಕಾಶಗಳನ್ನು ಕಸಿಯುತ್ತಿರುವ ವಾರಕ್ಕೊಮ್ಮೆ ಕ್ಲಾಸ್ ಪಡೆಯುವ 'ದೇಸಿ' (DESI)ಪ್ರೋ.ಗ್ರಾಂನಂತಹ ಅಲ್ಪಾವಧಿ ತರಬೇತಿ ಕೋರ್ಸ್‌ಗಳನ್ನು ತಕ್ಷಣ ನಿಲ್ಲಿಸಬೇಕು.
ಕೃಷಿ ಪದವಿ ಅವಧಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಾಧಕ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ಪ್ರತ್ಯೇಕ ಕೋಟಾ ಒದಗಿಸಬೇಕು.
ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಹುದ್ದೆಗಳು ರೈತರಿಗೆ ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕ ವಾಗಿ ತಾಂತ್ರಿಕ ಮಾರ್ಗದರ್ಶನ ನೀಡುವ ಅತ್ಯಂತ ಜವಾಬ್ದಾರಿಯುತ ಹುದ್ದೆಗಳಾಗಿವೆ. ಮಣ್ಣು,ಬೆಳೆ ಮತ್ತು ಕೃಷಿಯ ಪ್ರಾಯೋಗಿಕ ಜ್ಞಾನವೇ ಇಲ್ಲದ ಇಂಜಿನಿಯರಿಂಗ್ ಪದವೀಧರರಿಗೆ ಈ ಹುದ್ದೆ ಗಳನ್ನು ನೀಡುವುದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವಿದ್ಯಾರ್ಥಿನಿ ಯರಾದ ಚಿನ್ಮಯಿ,ಮಾಧುರ್ಯ ಮತ್ತು ಸ್ವಾತಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಿ, ಇಲಾಖೆಯ ನಿಯಮಬಾಹಿರ ಸುತ್ತೋಲೆಗಳನ್ನು ವಾಪಸ್ ಪಡೆಯದಿದ್ದರೆ ಇಡೀ ರಾಜ್ಯಾದ್ಯಂತ ಕೃಷಿ ಪದವೀಧರರು ಉಗ್ರ ಅನಿರ್ದಿಷ್ಟಾವಧಿ ಹೋರಾಟ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.