Chinthamani News: ರಾಜೀವ್ ನಗರದಲ್ಲಿ ಮಧ್ಯರಾತ್ರಿ ಮಾರಕಾಯುಧಧಾರಿ ಕಳ್ಳರ ಅಟ್ಟಹಾಸ: ಭೀತಿಯ ನೆರಳಿನಲ್ಲಿ ಬಡಾವಣೆಯ ನಿವಾಸಿಗಳು
ಮುಖಕ್ಕೆ ಮಾಸ್ಕ್ ಧರಿಸಿ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಓಡಾಡುತ್ತಿರುವ ಕಳ್ಳರ ಗುಂಪು ಇಡೀ ಬಡಾವಣೆಯನ್ನು ಭಯದ ಕೂಪಕ್ಕೆ ದೂಡಿದೆ. ಪ್ರಸ್ತುತ ಈ ಕಳ್ಳರು ಮಧ್ಯರಾತ್ರಿ ಮಾರಕಾಯುಧಗಳನ್ನು ಹಿಡಿದು ಬೀದಿಗಳಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟಿಸಿವೆ.
-
ಚಿಂತಾಮಣಿ: ನಗರದ ಬಡಾವಣೆಗಳಲ್ಲೊಂದಾದ ಪ್ರತಿಷ್ಠಿತ ರಾಜೀವ್ ನಗರದಲ್ಲಿ ಈಗ ಕಳ್ಳರ ಹಾವಳಿ ಮಿತಿ ಮೀರಿದ್ದು. ಸಾರ್ವಜನಿಕರು ನೆಮ್ಮದಿಯ ನಿದ್ರೆ ಇಲ್ಲದೆ ಆತಂಕದಲ್ಲಿ ಕಾಲ ಕಳೆಯು ವಂತಾಗಿದೆ.
ಮುಖಕ್ಕೆ ಮಾಸ್ಕ್ ಧರಿಸಿ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಓಡಾಡುತ್ತಿರುವ ಕಳ್ಳರ ಗುಂಪು ಇಡೀ ಬಡಾವಣೆಯನ್ನು ಭಯದ ಕೂಪಕ್ಕೆ ದೂಡಿದೆ. ಪ್ರಸ್ತುತ ಈ ಕಳ್ಳರು ಮಧ್ಯರಾತ್ರಿ ಮಾರಕಾಯುಧಗಳನ್ನು ಹಿಡಿದು ಬೀದಿಗಳಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟಿಸಿವೆ.
ವಿಪರ್ಯಾಸವೆಂದರೆ, ಇದೇ ವರ್ಷದ ಫೆಬ್ರವರಿ 21ರಂದೂ ಕೂಡ ಇಂತಹದ್ದೇ ಮಾರಕಾಯುಧ ಗಳೊಂದಿಗೆ ಬಂದಿದ್ದ ಕಳ್ಳರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು. ಆ ಸಂದರ್ಭದಲ್ಲೂ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದರೂ, ಇದುವರೆಗೂ ಪೊಲೀಸರು ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಭೀಕರ ಅತ್ಯಾಚಾರ ದಂಧೆ, ಡ್ರಗ್ಸ್ ನೀಡಿ 19 ಕಾಲೇಜು ಯುವತಿಯರ ಮೇಲೆ ದೌರ್ಜನ್ಯ
ರಾಜೀವ್ ನಗರ, ಪ್ರಭಾಕರ್ ಬಡಾವಣೆ ಹಾಗೂ ಗುಂಡಪ್ಪ ಬಡಾವಣೆಗಳು ಸುರಕ್ಷಿತವೆಂಬ ನಂಬಿಕೆ ಯಿಂದ ತಾಲ್ಲೂಕಿನ ವಿವಿಧ ಗ್ರಾಮಸ್ಥರು ಹಾಗೂ ನೆರೆಹೊರೆಯ ತಾಲ್ಲೂಕಿನ ಜನರು ಇಲ್ಲಿ ವಾಸ ವಾಗಿದ್ದರು. ಆದರೆ ಈಗ ಪದೇ ಪದೇ ಸಶಸ್ತ್ರ ಕಳ್ಳರು ಕಾಣಿಸಿಕೊಳ್ಳುತ್ತಿರುವುದರಿಂದ,ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರು ಹಾಗೂ ವೃದ್ಧರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ.
ಈ ಬಡಾವಣೆಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು ನೆಲೆಸಿದ್ದರೂ ಸಹ ಕಳ್ಳರ ಈ ಹಾವಳಿ ನಿಂತಿಲ್ಲದಿರುವುದು ಆಶ್ಚರ್ಯಕರವಾಗಿದೆ.
ಅಧಿಕಾರಿಗಳೇ ವಾಸವಾಗಿರುವ ಜಾಗದಲ್ಲೇ ರಕ್ಷಣೆ ಇಲ್ಲವೆಂದಾದಲ್ಲಿ ಸಾಮಾನ್ಯ ಜನರ ಗತಿ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಹಿಂದೆ ನಡೆದ ಕಳ್ಳತನ ಪ್ರಕರಣಗಳ ಬಗ್ಗೆ ಪೊಲೀಸರು ಯಾವುದೇ ಸೂಕ್ತ ಕ್ರಮ ಜರುಗಿಸದ ಕಾರಣ ಅಟ್ಟಹಾಸ ಸ್ಥಳೀಯ ಕಳ್ಳರು ಮತ್ತಷ್ಟು ಬಲವಾಗಿ ಮೆರೆಯುತ್ತಿದ್ದಾರೆ ಎಂದು ನಿವಾಸಿಗಳು ಗಂಭೀರವಾಗಿ ಆರೋಪಿಸಿದ್ದು,ಇನ್ನಾದರೂ ಪೊಲೀಸ್ ಎಚ್ಚೆತ್ತುಕೊಂಡು ರಾತ್ರಿ ಗಸ್ತನ್ನು ಹೆಚ್ಚಿಸಿ. ಈ ಸಶಸ್ತ್ರ ಕಳ್ಳರನ್ನು ಸೆರೆ ಹಿಡಿದು ಬಡಾವಣೆಯ ಜನರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ ಎಂಬ ಒತ್ತಾಯ ಕೇಳಿ ಬಂದಿದೆ.