ರಾಹುಲ್, ಮಿಲ್ಲರ್ ಹೋರಾಟ ವ್ಯರ್ಥ; ಗುಜರಾತ್‌ಗೆ ರೋಚಕ ಒಂದು ರನ್ ಗೆಲುವು
ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯ ಮತ್ತು ಒಂದು ರನ್ ಗಳಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿ ಕ್ಲಾಸ್ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಎಲ್ಲ ಟೀಕೆಗೆ ಉತ್ತರ ನೀಡಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಆ ಬಳಿಕ ಬಿರುಸಿನ ಬ್ಯಾಟಿಂಗ್‌ಗೆ ಒಗ್ಗಿಕೊಂಡರು. 17 ಓವರ್ ತನಕ ಬ್ಯಾಟಿಂಗ್ ನಡೆಸಿ 92 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು.
Mohammed Siraj -
ನವದೆಹಲಿ, ಎ.8: ಕನ್ನಡಿಗ ಕೆ.ಎಲ್ ರಾಹುಲ್(92) ಹಾಗೂ ಡೇವಿಡ್ ಮಿಲ್ಲರ್(41*) ಬ್ಯಾಟಿಂಗ್ ಸಾಹಸದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬುಧವಾರದ ಐಪಿಎಲ್ ಪಂದ್ಯದಲ್ಲಿ ಒಂದು ರನ್ ಅಂತರದ ವಿರೋಚಿತ ಸೋಲು ಕಂಡಿತು. ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್ ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲಿಗೆ ತುತ್ತಾಯಿತು.
ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್, ಬಿರುಸಿನ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 210 ರನ್ ಬಾರಿಸಿತು. ಜಬಾಬಿತ್ತ ಡೆಲ್ಲಿ ತಂಡ ಕೊನೆಯ ಎಸೆತದ ತನಕ ಹೋರಾಡಿ 8 ವಿಕೆಟ್‌ಗೆ 209 ರನ್ ಗಳಿಸಿ ವಿರೋಚಿತ ಸೋಲು ಕಂಡಿತು.
ಚೇಸಿಂಗ್ ವೇಳೆ ಡೆಲ್ಲಿ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಕೆ.ಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಂಕ 10ರ ಸರಾಸರಿಯಲ್ಲಿ ರನ್ ಕಲೆಹಾಕಿ ಭದ್ರಬುನಾದಿ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 76 ಒಟ್ಟುಗೂಡಿಸಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯನ್ನು ಪ್ರಸಿದ್ಧ್ ಕೃಷ್ಣ ಬೇರ್ಪಡಿಸಿದರು. 41 ರನ್ ಗಳಿಸಿದ ನಿಸ್ಸಂಕ ರಾಹುಲ್ ತೆವಾಟಿಯಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಈ ವಿಕೆಟ್ ಬೀಳುತ್ತಿದ್ದಂತೆ ಡೆಲ್ಲಿ ದಿಢೀರ್ ಕುಸಿತ ಕಂಡಿತು. ನಿತೀಶ್ ರಾಣ(5) ಮತ್ತು ಕಳೆದೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಸಮೀರ್ ರಿಝ್ವಿ ಈ ಪಂದ್ಯದಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಒಂದೇ ಓವರ್‌ನಲ್ಲಿ ರಶೀದ್ ಖಾನ್ ಉಭಯ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿಸಿದರು.
ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯ ಮತ್ತು ಒಂದು ರನ್ ಗಳಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿ ಕ್ಲಾಸ್ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಎಲ್ಲ ಟೀಕೆಗೆ ಉತ್ತರ ನೀಡಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಆ ಬಳಿಕ ಬಿರುಸಿನ ಬ್ಯಾಟಿಂಗ್‌ಗೆ ಒಗ್ಗಿಕೊಂಡರು. 17 ಓವರ್ ತನಕ ಬ್ಯಾಟಿಂಗ್ ನಡೆಸಿ 92 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು.
ಟರ್ನಿಂಗ್ ಪಾಯಿಂಟ್
ರಿಟರ್ಡ್ ಹರ್ಟ್ ಆಗಿದ್ದ ಡೇಮಿಡ್ ಮಿಲ್ಲರ್ ಮತ್ತೆ ಬ್ಯಾಟಿಂಗ್‌ಗೆ ಬಂದು ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದರು. ಸಿರಾಜ್ ಎಸೆದ 19ನೇ ಓವರ್‌ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದರು. ವಿಪ್ರಜ್ ನಿಗಮ್ ಒಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ 23 ರನ್ ದೋಚಿದ ಡೆಲ್ಲಿ ಗೆಲುವಿನ ಆಸೆಯನ್ನು ಮತ್ತೆ ಜೀವಂತವಿರಿಸಿತು. ಆದರೆ ಅಂತಿಮ ಓವರ್‌ನಲ್ಲಿ 13 ರನ್ ತೆಗೆಯುವ ಸವಾಲಿನಲ್ಲಿ ಎಡವಿತು. ಡೆಲ್ಲಿಗೆ ಗೆಲುವಿನ ಆಸೆ ಹುಟ್ಟಿಸಿದ ಮಿಲ್ಲರ್ ಕೊನೆಗೆ ಕಿಲ್ಲರ್ ಆಗಿ ಪರಿಣಮಿಸಿದರು. 2 ಎಸೆತದಲ್ಲಿ 2 ರನ್ ಬೇಕಿದ್ದಾಗ ಒಂದು ರನ್ ಓಡದೆ ಇದದ್ದು ಸೋಲಿಗೆ ಕಾರಣವಾಯಿತು. ಅವರು ಒಂದು ರನ್ ಓಡಿದ್ದರೆ ಪಂದ್ಯ ಟೈ ಆಗುತ್ತಿತ್ತು. ಒಂದು ರನ್ ಉಳಿಸಿದ ಪ್ರಸಿದ್ಧ್ ಕೃಷ್ಣ, ಗುಜರಾತ್ ಪಾಲಿಗೆ ಗೆಲುವಿನ ಹೀರೋ ಎನಿಸಿದರು. ಗುಜರಾತ್ ಪರ ರಶೀದ್ ಖಾನ್ ಮೂರು ವಿಕೆಟ್ ಕಿತ್ತು ಪಂದ್ಯದ ಗತಿಯನ್ನೇ ಬದಲಿಸಿದರು. ಟ್ರಿಸ್ಟನ್ ಸ್ಟಬ್ ರನೌಟ್ ಕೂಡ ಡೆಲ್ಲಿಗೆ ಹಿನ್ನಡೆಯಾಗಿ ಪರಿಣಮಿಸಿತು. ಮಿಲ್ಲರ್ 20 ಎಸೆತದಲ್ಲಿ ಅಜೇಯ 41 ರನ್ ಬಾರಿಸಿದರು.
ಗಿಲ್, ಸುಂದರ್, ಬಟ್ಲರ್ ಅರ್ಧಶತಕ
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಪರ ಬಟ್ಲರ್, ಗಿಲ್ ಮತ್ತು ಸುಂದರ್ ಅರ್ಧಶತಕ ಬಾರಿಸಿ ಮಿಂಚಿದರು. ಜೋಶ್‌ನಿಂದಲೇ ಬ್ಯಾಟಿಂಗ್ ನಡೆಸಿದ ಜಾಸ್ ಬಟ್ಲರ್ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ನಡೆಸಿ 24 ಎಸೆತದಲ್ಲಿ ಅರ್ಧಶತಕ ಬಾರಿಸಿದರು. ಒಟ್ಟು 27 ಎಸೆತಗಳಿಂದ 5 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 52 ರನ್ ಗಳಿಸಿ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಗಾಯದ ಕಾರಣ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಶುಭಮನ್ ಗಿಲ್ ತಂಡಕ್ಕೆ ಮರಳುವ ಮೂಲಕ ನಾಯಕತ್ವ ವಹಿಸಿಕೊಂಡರು. ಬಟ್ಲರ್ ವಿಕೆಟ್ ಪತನದ ಬಳಿಕ ಜತೆಯಾದ ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಮೂರನೇ ವಿಕೆಟ್‌ಗೆ 104 ರನ್‌ಗಳ ಜತೆಯಾಟ ನಡೆಸಿದರು. ಉಭಯ ಆಟಗಾರರ ಅರ್ಧಶತಕ ಬಾರಿಸಿದರು. ಗಿಲ್ 4 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿ 70 ರನ್ ಚಚ್ಚಿದರು. ವಾಷಿಂಗ್ಟನ್ ಸುಂದರ್ 55 ರನ್ ಗಳಿಸಿದರು. ಇದು ಅವರ ಚೊಚ್ಚಲ ಐಪಿಎಲ್ ಅರ್ಧಶತಕ. ಅಂತಿಮ ಹಂತದಲ್ಲಿ ಗ್ಲೆನ್ ಫಿಲಿಪ್ಸ್ ಅಜೇಯ 14 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆರಂಭಕಾರ ಸಾಯಿ ಸುದರ್ಶನ್(12) ಈ ಪಂದ್ಯದಲ್ಲಿಯೂ ವಿಫಲರಾದರು. ಡೆಲ್ಲಿ ಪರ ಲುಂಗಿ ಎನ್‌ಗಿಡಿ 24ಕ್ಕೆ 1, ಮುಕೇಶ್ ಕುಮಾರ್ 55ಕ್ಕೆ 2 ವಿಕೆಟ್ ಕಿತ್ತರು.