MLA KH Puttaswamy Gowda: ರಾಜ್ಯಕ್ಕೆ ಬೆಂಗಳೂರು ಅಕ್ಷಯ ಪಾತ್ರೆ ಇದ್ದಂತೆ : ಶಾಸಕ ಪುಟ್ಟಸ್ವಾಮಿ ಗೌಡ
ನಾಡಪ್ರಭು ಕೆಂಪೇಗೌಡರ ನಿರೀಕ್ಷೆಗೂ ಮೀರಿ ಇಂದು ಬೆಂಗಳೂರು ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿ ಯನ್ನು ಪಡೆದಿದೆ. ಸುಮಾರು ಒಂದೂವರೆ ಕೋಟಿ ಜನರು ಬೆಂಗಳೂರಿನಲ್ಲಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಬೆಂಗಳೂರಿನ ಅಪಾರ ಕೊಡುಗೆ ಇದೆ. ಬೆಂಗಳೂರಿನ ವಾತಾ ವರಣ. ಇಲ್ಲಿನ ಜನರ ಸಹಬಾಳ್ವೆಯಿಂದಾಗಿ ಬೆಂಗಳೂರಿನಲ್ಲಿ ಪ್ರಪಂಚದ ಇತರೆ ದೇಶಗಳ ದೊಡ್ಡ ದೊಡ್ಡ ಕಂಪನಿಗಳು ಬಂಡವಾಳ ಹೂಡುತ್ತಿವೆ.
-
ಗೌರಿಬಿದನೂರು: ಇಡೀ ರಾಜ್ಯಕ್ಕೆ ಬೆಂಗಳೂರು ಅಕ್ಷಯ ಪಾತ್ರೆ ಇದ್ದಂತೆ, ರಾಜ್ಯದಲ್ಲಿ ಸಂಗ್ರಹ ವಾಗುವ ತೆರಿಗೆಯಲ್ಲಿ ಶೇಕಡಾ 70% ತೆರಿಗೆ ಬೆಂಗಳೂರಿನಿಂದಲೆ ಸಂಗ್ರಹವಾಗುತ್ತದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA KH Puttaswamy Gowda)ರು ತಿಳಿಸಿದರು.
ಅವರು ನಗರದ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿದ ವತಿಯಿಂದ ಆಯೋಜಿಸಲಾಗಿದ್ದ ನಾಡ ಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಮ್ಮ ತಂದೆ ಕೆಂಪನಂಜೇಗೌಡ ನಂತರ ರಾಜ್ಯಭಾರ ವಹಿಸಿಕೊಂಡ ಯಲಹಂಕ ನಾಡ ಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಅಂದಿನಕಾಲದಲ್ಲಿಯೇ ಕರಾರುವಾಕ್ಕಾಗಿ ಎತ್ತರ ಪ್ರದೇಶದಲ್ಲಿ ವಾಣಿಜ್ಯ ನಗರವಾಗಿ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ, ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾದರು.
ಇದರ ಜೊತೆಗೆ ಪ್ರತಿ ಯೊಂದು ಸಮುದಾಯಕ್ಕೂ ಅವರದೇ ಸಮುದಾಯದ ಹೆಸರಿನಲ್ಲಿ ತಿಗಳರ ಪೇಟೆ, ಉಪ್ಪಾರಪೇಟೆ, ಗಾಣಿಗರಪೇಟೆ, ಕುಂಬಾರಪೇಟೆ, ಕುರುಬರಪೇಟೆ ಮುಂತಾದ ಸುಸಜ್ಜಿತಾವಾದ ವಸತಿ ಪ್ರದೇಶ ಗಳನ್ನು ನಿರ್ಮಿಸಿದರೆ ವಾಣಿಜ್ಯ ಉದ್ದೇಶಕ್ಕಾಗಿ ಅಕ್ಕಿಪೇಟೆ, ಬಳೇಪೇಟೆ, ತರಗುಪೇಟೆ, ಹರಳೇಪೇಟೆ ಮುಂತಾದ ಪೇಟೆಗಳನ್ನು ವ್ಯಾಪಾರಿ ಉದ್ದೇಶಕ್ಕಾಗಿಯೇ ನಿರ್ಮಿಸಿದರು. ವ್ಯವಸಾಯ ಹಾಗೂ ಜನರ ಬಳಕೆಗಾಗಿ ಬೆಂಗಳೂರಿನ ಸುತ್ತಮುತ್ತಲೂ ಹಲವಾರು ಕೆರೆಗಳನ್ನು ನಿರ್ಮಾಣ ಮಾಡಿಸಿದರು.
ನಾಡಪ್ರಭು ಕೆಂಪೇಗೌಡರ ನಿರೀಕ್ಷೆಗೂ ಮೀರಿ ಇಂದು ಬೆಂಗಳೂರು ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿ ಯನ್ನು ಪಡೆದಿದೆ. ಸುಮಾರು ಒಂದೂವರೆ ಕೋಟಿ ಜನರು ಬೆಂಗಳೂರಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಬೆಂಗಳೂರಿನ ಅಪಾರ ಕೊಡುಗೆ ಇದೆ. ಬೆಂಗಳೂರಿನ ವಾತಾವರಣ. ಇಲ್ಲಿನ ಜನರ ಸಹಬಾಳ್ವೆಯಿಂದಾಗಿ ಬೆಂಗಳೂರಿನಲ್ಲಿ ಪ್ರಪಂಚದ ಇತರೆ ದೇಶಗಳ ದೊಡ್ಡ ದೊಡ್ಡ ಕಂಪನಿಗಳು ಬಂಡವಾಳವನ್ನು ಹೂಡುತ್ತಿವೆ. ಇದರಿಂದಾಗಿ ಜನರಿಗೆ ಉದ್ಯೋಗ ,ವ್ಯಾಪಾರ ದೊರೆಯುತ್ತಿದೆ ಎಂದ ಅವರು ರಾಜ್ಯದ ಜನರ ಪಾಲಿಗೆ ನಾಡಪ್ರಭು ಕೆಂಪೇಗೌಡರು ಸದಾಕಾಲವೂ ಪ್ರಾತಃ ಸ್ಮರಣೀಯರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಅರವಿಂದ್, ತಾಲೂಕು ಪಂಚಾಯಿತಿ ಇಓ ಜಿಕೆ.ಹೊನ್ನಯ್ಯ, ನಗರಸಭೆ ಆಯುಕ್ತ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ಆರ್.ಮಂಜುನಾಥ್, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿಜಯರಾಘವ ಮುಖಂಡರಾದ ಬೊಮ್ಮಣ್ಣ, ರಾಮಚಂದ್ರರೆಡ್ಡಿ, ರಾಮಕೃಷ್ಣ ರೆಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.