Gauribidanur News: 6.5 ಕೋಟಿ ರೂ. ವಿಶೇಷ ಅನುದಾನದಲ್ಲಿ ನಿರ್ಮಾಣ: ನಿಷ್ಕ್ರಿಯವಾಗಿರುವ ಸುಸಜ್ಜಿತ ನೂತನ ಕಟ್ಟಡ
ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಶಿಥಿಲಗೊಂಡಿದ್ದ ಹಳೆ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ತೆರವುಗೊಳಿಸಿದ್ದರು. ನಂತರ ರಾಜ್ಯ ಸರ್ಕಾರವು ಸುಮಾರು 6.5 ಕೋಟಿ ರೂಗಳ ವಿಶೇಷ ಅನುದಾನದಲ್ಲಿ ಮೂರು ಅಂತಸ್ತಿನ ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿತ್ತು
-
ಗೌರಿಬಿದನೂರು: ನಗರದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು 6.5 ಕೋಟಿ ರೂಗಳ ವಿಶೇಷ ಅನುದಾನ(Special grant of Rs. 6.5 crore)ದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿ ಉದ್ಘಾಟನೆಯಾಗಿರುವ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಕ್ ಪೂರ್ವ ಬಾಲಕಿಯ ವಿದ್ಯಾರ್ಥಿ ನಿಲಯವು ಉದ್ಘಾಟನೆಯಾಗಿ ತಿಂಗಳು ಸಮೀಪಿಸಿದರೂ ಬಳಕೆಯಾಗದೆ ನಿಷ್ಕ್ರಿಯವಾಗಿರುವುದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಜೊತೆಗೆ ಸ್ಥಳೀಯ ಕಾರ್ಯಾಂಗದ ದಕ್ಷತೆ ಮತ್ತು ಬದ್ಧತೆಗೆ ಕೈಗನ್ನಡಿ ಯಾಗಿದೆ.
ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಶಿಥಿಲಗೊಂಡಿದ್ದ ಹಳೆ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ತೆರವುಗೊಳಿಸಿದ್ದರು. ನಂತರ ರಾಜ್ಯ ಸರ್ಕಾರವು ಸುಮಾರು 6.5 ಕೋಟಿ ರೂಗಳ ವಿಶೇಷ ಅನುದಾನದಲ್ಲಿ ಮೂರು ಅಂತಸ್ತಿನ ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿತ್ತು.
ಸ್ಥಳೀಯ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ (MLA KH Puttaswamy Gowda) ತಾವು ಶಾಸಕರಾದ ಮೇಲೆ ಮೊದಲ ಬಾರಿಗೆ ಭೂಮಿ ಪೂಜೆ ಮಾಡಿದ ಅಭಿವೃದ್ದಿ ಕಾರ್ಯಗಳಲ್ಲಿ ಈ ಕಾಮಗಾರಿಯೇ ಪ್ರಥಮವಾಗಿತ್ತು. ಒಂದೂವರೆ ವರ್ಷದ ಕಾಲಮಿತಿಯಲ್ಲಿ ನಿರ್ಮಾಣವಾಗಬೇಕಿದ್ದ ಕಾಮಗಾರಿ ಯನ್ನು ಗುತ್ತಿಗೆದಾರ ನಾಗಭೂಷಣ್ ಎರಡೂವರೆ ವರ್ಷಕ್ಕೆ ಕೊಂಡೊಯ್ದರು. ಇದರಿಂದಾಗಿ, ಇಲ್ಲಿನ ವಿದ್ಯಾರ್ಥಿಗಳು ಪರ್ಯಾಯವಾಗಿ ವಿ.ವಿ.ಪುರಂ ನಲ್ಲಿನ ಮತ್ತೊಂದು ವಸತಿ ಶಾಲೆಯಲ್ಲಿ ಆಸರೆ ಪಡೆಯುವಂತಾ ಯಿತು. ಇದೇ ನೆಪದಲ್ಲಿ ಅಧಿಕಾರಿಗಳು ಕಟ್ಟಡ ಕಾಮಗಾರಿಯ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದರು.
ಇದನ್ನೂ ಓದಿ: Gauribidanur News: ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳೇ ಬುನಾದಿ
ಡಿಸೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ನವರು ಶಿಡ್ಲಘಟ್ಟ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಸತಿ ನಿಲಯ ಕಟ್ಟಡದ ಉದ್ಘಾಟನೆ ಯನ್ನು ಸಾಂಕೇತಿಕವಾಗಿ ಮುಗಿಸಿ ದ್ದಾರೆ. ಇದೇ ಬಿಸಿಯಲ್ಲಿ ಗುತ್ತಿಗೆದಾರ ತನ್ನ ಜವಾಬ್ದಾರಿಯನ್ನು ಮುಗಿಸಿ ನಾಜೂಕಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ವಸತಿ ನಿಲಯ ಕಟ್ಟಡವನ್ನು ಹಸ್ತಾಂತರ ಮಾಡ ಲಾಗಿದೆ.
ಆದರೆ ಇದನ್ನು ಬೀಗ ತೆಗೆದು ಬಳಕೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸಮಯ ಸಿಗುತ್ತಿಲ್ಲ, ಈ ವಸತಿ ನಿಲಯಕ್ಕೆ ಸ್ಥಳಾಂತರವಾಗಬೇಕಿರುವ ವಿದ್ಯಾರ್ಥಿನಿಯರು ಮತ್ತೊಂದು ನಿಲಯದಲ್ಲೇ ಉಳಿದಿ ದ್ದಾರೆ. ಇದರಿಂದಾಗಿ ಸ್ಥಳೀಯ ನಾಗರೀಕರು ಮತ್ತು ಪೋಷಕರಲ್ಲಿ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾಹಿತಿ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್ 2 ಸಹಾಯಕ ನಿರ್ದೇ ಶಕರಾದ ಚನ್ನಪ್ಪ ಗೌಡ ನಾಯ್ಕರ್ ರನ್ನು ಸಂಪರ್ಕಿಸಲು ಮೊಬೈಲ್ ಕರೆ ಮೂಲಕ ಪ್ರಯತ್ನಿಸಿ ದರೂ ಸಂಪರ್ಕಕ್ಕೆ ಸಿಗಲಿಲ್ಲ.
ಅನೈತಿಕ ಚಟುವಟಿಕೆಗಳ ತಾಣವಾದ ಹಳೆ ಕಚೇರಿ
ಇಲ್ಲಿನ ವಸತಿ ನಿಲಯದ ಸಮೀಪದಲ್ಲಿನ ಇಲಾಖೆಯ ಹಳೆ ಕಚೇರಿಯು ದಶಕಗಳಿಂದಲೂ ನಿಷ್ಕ್ರಿಯಗೊಂಡಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಈ ಸರ್ಕಾರಿ ಕಟ್ಟಡವು ಬಳಕೆಗೆ ಯೋಗ್ಯವಿಲ್ಲದ ಕಾರಣ ದಶಕದಿಂದಲೂ ಕಚೇರಿಯು ಮಾದನಗಹಳ್ಳಿ ಕೆರೆಯಂಗಳದಲ್ಲಿನ ವಸತಿ ನಿಲಯವೊಂದರಲ್ಲಿತ್ತು. ಬಳಿಕ ಸಮಾನತಾ ಸೌಧದಲ್ಲಿನ ಕುಬೇರ ಮೂಲೆಯಲ್ಲಿ ಹೈಟೆಕ್ ಕಚೇರಿ ನಿರ್ಮಾಣ ಮಾಡಿದ್ದು, ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರವು ಪುನಃ ಮಾದನಹಳ್ಳಿ ಕೆರೆಯಂಗಳದಲ್ಲಿನ ವಸತಿ ಶಾಲೆಯ ಆವರಣದಲ್ಲಿ ಸುಮಾರು 1.5 ಕೋಟಿ ಅನುದಾಮದಲ್ಲಿ ಹೊಸ ಕಚೇರಿ ನಿರ್ಮಾಣಕ್ಕೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಹಳೆಯ ಕಟ್ಟಡವನ್ನು ಮರೆತಿರುವ ಇಲಾಖೆಯ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾದರೇ ಎಂಬ ಮಾತುಗಳು ನಾಗರೀಕ ವಲಯದಲ್ಲಿ ಹರಿದಾಡುತ್ತಿವೆ.