Chikkaballapur News: ಹವಾಮಾನ ವೈಪರಿತ್ಯಕ್ಕೆ ಬೆಳೆ ವಿಮೆಯೇ ರಕ್ಷಾಕವಚ: ರೈತರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಿ: ಜಿಲ್ಲಾಧಿಕಾರಿ ಜಿ. ಪ್ರಭು
ಖಾರೀಪ್ ಹಂಗಾಮಿನಲ್ಲಿ ತಾಲ್ಲೂಕುವಾರು ಬೆಳೆ ವಿಮೆ ನೋಂದಣಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 12000, ಗೌರಿಬಿದನೂರು (ಮಂಚೇನಹಳ್ಳಿ) 18000, ಚಿಂತಾಮಣಿ 12000, ಬಾಗೇಪಲ್ಲಿ ಮತ್ತು ಚೇಳೂರು 18000, ಶಿಡ್ಲಘಟ್ಟ 15000 ಹಾಗೂ ಗುಡಿಬಂಡೆ ತಾಲ್ಲೂಕಿನಲ್ಲಿ 80000 ರೈತರನ್ನು ಯೋಜನೆಯಡಿ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಸಂಭವನೀಯ ಬೆಳೆ ನಷ್ಟದಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಮನವಿ ಮಾಡಿದರು. -
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಸಂಭವನೀಯ ಬೆಳೆ ನಷ್ಟದಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(Karnataka Farmer Safety Prime Minister Crop Insurance Scheme)ಯ ರೈತರ ನೋಂದಣಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹವಾಮಾನ ವೈಪರಿತ್ಯದಿಂದ ಬೆಳೆ ವೈಫಲ್ಯ ಸಂಭವಿಸಿದರೆ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗು ತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬೆಳೆ ವಿಮೆ ಯೋಜನೆ ರೈತರ ನೆರವಿಗೆ ಬರುವ ಪ್ರಮುಖ ಭದ್ರತಾ ವ್ಯವಸ್ಥೆಯಾಗಿದ್ದು, ಪ್ರತಿಯೊಬ್ಬ ಅರ್ಹ ರೈತರೂ ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಖಾರೀಪ್ ಹಂಗಾಮಿನಲ್ಲಿ ತಾಲ್ಲೂಕುವಾರು ಬೆಳೆ ವಿಮೆ ನೋಂದಣಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 12000, ಗೌರಿಬಿದನೂರು (ಮಂಚೇನಹಳ್ಳಿ) 18000, ಚಿಂತಾಮಣಿ 12000, ಬಾಗೇಪಲ್ಲಿ ಮತ್ತು ಚೇಳೂರು 18000, ಶಿಡ್ಲಘಟ್ಟ 15000 ಹಾಗೂ ಗುಡಿಬಂಡೆ ತಾಲ್ಲೂಕಿನಲ್ಲಿ 80000 ರೈತರನ್ನು ಯೋಜನೆಯಡಿ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸಹಾಯಕ ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಧರ್ಮಸ್ಥಳ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ರೈತ ಸಂಪರ್ಕ ಸಿಬ್ಬಂದಿ ಹಾಗೂ ಗ್ರಾಮ ಒನ್(Grama One) ಕೇಂದ್ರಗಳ ಸಹಕಾರದೊಂದಿಗೆ ದಾಖಲೆಯ ಮಟ್ಟದಲ್ಲಿ ನೋಂದಣಿ ಕಾರ್ಯ ಕೈಗೊಳ್ಳಬೇಕು. ಜಿಲ್ಲೆಯ ಪ್ರತಿಯೊಂದು ರೈತ ಕುಟುಂಬಕ್ಕೂ ಯೋಜನೆಯ ಲಾಭ ತಲುಪುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ, ಕಳಪೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಪೀಡನಾಶಕಗಳನ್ನು ಮಾರಾಟ ಮಾಡು ವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಂತಹ ಅಕ್ರಮಗಳಲ್ಲಿ ತೊಡಗಿರುವವರ ಪರವಾನಗಿಯನ್ನು ರದ್ದುಪಡಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹೇಳಿದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಪ್ರಮುಖ ಮೂರು ಕೃಷಿ ಬೆಳೆಗಳನ್ನು ಆಯ್ಕೆ ಮಾಡಿ, ಅವುಗಳಲ್ಲಿ ಯಶಸ್ಸು ಸಾಧಿಸಿರುವ ಪ್ರಗತಿಪರ ರೈತರನ್ನು ಗುರುತಿಸಿ ಅವರ ಕೃಷಿ ಪದ್ಧತಿ ಮತ್ತು ಅನುಭವ ಗಳನ್ನು ಇತರ ಯುವ ರೈತರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಪ್ರತಿ ತಾಲ್ಲೂಕಿನಿಂದ ಸುಮಾರು ೨೦೦ ಯುವ ರೈತರನ್ನು ಪ್ರಾತ್ಯಕ್ಷಿಕೆ ಆಧಾರಿತ ತರಬೇತಿಗೆ ಕರೆದೊಯ್ದು ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಬೇಕು. ಈ ಸಂಬಂಧ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿ ಜಿಲ್ಲೆಯಾದ್ಯಂತ ರೈತರಿಗೆ ತಲುಪಿಸುವ ಕಾರ್ಯಕ್ಕೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಈ ಸಾಲಿನ ಬೆಳೆ ವಿಮೆ ಯೋಜನೆಯ ಅನುಷ್ಠಾನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅನ್ನು ವಿಮಾ ನಿರ್ವಹಣಾ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಜಿಲ್ಲಾ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 8655952073 ಅಥವಾ ಟೋಲ್-ಫ್ರೀ ಸಂಖ್ಯೆ 1800 209 4980 ಅನ್ನು ಸಂಪರ್ಕಿಸಿ ಯೋಜನೆ ಕುರಿತು ಸಲಹೆ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.
ರೈತರ ಆದಾಯ ರಕ್ಷಿಸುವ ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಈ ಯೋಜನೆಯಲ್ಲಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬೆಳೆಗಳಿಗೆ ವಿಮಾ ಭದ್ರತೆ ಕಲ್ಪಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಅಬಿದ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.