ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಮೂರು ವರ್ಷಗಳ ಆಡಳಿತದಲ್ಲಿ ದಲಿತರಿಗೆ ನೆರವಾಗಿಲ್ಲ, ಇನ್ನಾದರೂ ಆ ಕೆಲಸವಾಗಲಿ : ರಾಜಾಕಾಂತ್ ಆಗ್ರಹ

ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಳ್ಳಬೇಕು. ಈ 3 ವರ್ಷಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಸಾವಿರಾರು ಬಡವರಿಗೆ ಮನೆ, ಭೂಮಿ ಹಕ್ಕಿನ ಮೂಲಕ ಸಾಗುವಳಿ ಚೀಟಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ಗಳನ್ನು ತಲುಪಿಸಬಹುದಿತ್ತು. ಆದರೆ ಇತ್ತ ಗಮನ ಹರಿಸಿತ್ತೀ ಪುಣ್ಯಾತ್ಮ ಒಂದೇ ಒಂದು ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಮೈಲಪನಹಳ್ಳಿ ನಿರ್ಗತಿಕರ ಅಹವಾಲು ಆಲಿಸಿಲ್ಲ

ಮೂರು ವರ್ಷಗಳ ಆಡಳಿತದಲ್ಲಿ ದಲಿತರಿಗೆ ನೆರವಾಗಿಲ್ಲ

-

Profile
Ashok Nayak Oct 5, 2026 12:33 AM

ಚಿಕ್ಕಬಳ್ಳಾಪುರ: ಕಳೆದ 3 ವರ್ಷಗಳಲ್ಲಿ ಬಡವರು, ದಲಿತರು ಹಾಗೂ ಸಾಮಾನ್ಯ ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಜನರ ಅಹವಾಲು ಆಲಿಸುವ ವ್ಯವಸ್ಥೆಯೇ ಇಲ್ಲದಂತಾಗಿದೆ. ಇನ್ನಾದರೂ ಸರಿಯೆ ಮತದಾರರ ಋಣ ತೀರಿಸುವ ಕೆಲಸವಾಗಲಿ ಎಂದು ದಸಂಸ ಮುಖಂಡ ಕೆ.ಸಿ. ರಾಜಾಕಾಂತ್ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಮುಂದಿನ ಜನ್ಮದಲ್ಲಿ ದಲಿತ ಸಮುದಾಯದಲ್ಲಿ ಹುಟ್ಟುತ್ತೇನೆ ಎಂದು ಹೇಳಿಕೆ ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ದಲಿತರನ್ನು ಪ್ರತ್ಯೇಕವಾಗಿ ನೋಡುವ ಬದಲು ಮನುಷ್ಯರಾಗಿ ಕಾಣಬೇಕು. ಜಾತಿ, ಸಮುದಾಯದ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುವುದು, ಅಸಹನೆ ಸೃಷ್ಟಿಸುವ ಕೆಲಸ ಮಾಡಬಾರದು. ಸಂವಿಧಾನದ ಆಶಯದಂತೆ ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಕಾಣುವುದು ಜನಪ್ರತಿನಿಧಿಯ ಜವಾಬ್ದಾರಿ ಎಂದರು.

ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಳ್ಳಬೇಕು. ಈ 3 ವರ್ಷಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಸಾವಿರಾರು ಬಡವರಿಗೆ ಮನೆ, ಭೂಮಿ ಹಕ್ಕಿನ ಮೂಲಕ ಸಾಗುವಳಿ ಚೀಟಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ಗಳನ್ನು ತಲುಪಿಸಬಹುದಿತ್ತು. ಆದರೆ ಇತ್ತ ಗಮನ ಹರಿಸಿತ್ತೀ ಪುಣ್ಯಾತ್ಮ ಒಂದೇ ಒಂದು ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಮೈಲಪನಹಳ್ಳಿ ನಿರ್ಗತಿಕರ ಅಹವಾಲು ಆಲಿಸಿಲ್ಲ. ಗುಡಿಸಲಿನಲ್ಲಿ ವಾಸಿಸುತ್ತಿದ್ದವರ ಮನೆಗಳನ್ನು ಜೆಸಿಬಿ ಮೂಲಕ ತಹಶೀಲ್ದಾರ್ ತೆರವುಗೊಳಿಸಿರುವ ವಿಚಾರ ದಲ್ಲಿಯೂ ಶಾಸಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Chikkaballapur News: ಭೂ ಮಾಪಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ: ಜಿಲ್ಲಾಧಿಕಾರಿ ಪರಿಶೀಲನೆ

ಗುವ್ವಲಕಾನಹಳ್ಳಿ ನಿರಾಶ್ರಿತರ ಸಮಸ್ಯೆ ಪರಿಹಾರಕ್ಕೆ ಈವರೆಗೆ ಆಶ್ರಯ ಸಮಿತಿ ರಚನೆಯಾಗಿಲ್ಲ. ಸಿಂಗಾಟಿ ಕದಿರೇನಹಳ್ಳಿ ಗ್ರಾಮಸ್ಥರು 90 ದಿನಗಳ ಕಾಲ ಹೋರಾಟ ನಡೆಸಿದರೂ ದಲಿತ ಪರಕಾಳಜಿ ಇದ್ದಿದ್ದೇ ಆದಲ್ಲಿ ಶಾಸಕರು ಪ್ರತಿಭಟನಾ ಸ್ಥಳಕ್ಕೆ ಯಾಕೆ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ತಮ್ಮದೇ ಸರ್ಕಾರದ ಯೋಜನೆ ಪ್ರಜಾ ಸೇವಾ ಕಾರ್ಯಕ್ರಮಕ್ಕೂ ಈವರೆಗೆ ಶಾಸಕರು ಬಂದಿಲ್ಲ, ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.ಹೀಗಿರುವಾಗ ಜನರು ತಮ್ಮ ಅಹವಾಲುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ನಗರದ ಗೋಪಾಲಕೃಷ್ಣ ಕೆರೆ ಅಚ್ಚುಕಟ್ಟು, ಅಣಕನೂರು ಗ್ರಾಮದ ಬಳಿಯ ಸಕಾರದ 24 ಎಕರೆ ಸರ್ಕಾರಿ ಭೂಮಿ ಬೇನಾಮಿ ವ್ಯಕ್ತಿಗಳ ಪಾಲಾಗಿರುವ ಆರೋಪದ ಬಗ್ಗೆ ನಗರಸಭೆ ವಿರುದ್ಧ ಏಕೆ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ರಾಜಾಕಾಂತ್, ವರದಹಳ್ಳಿ, ಪಿಡಿಚಲಹಳ್ಳಿ, ಮಂಚನಬೆಲೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ಬಗ್ಗೆ ಶಾಸಕರು ಗಮನ ಹರಿಸಿಲ್ಲ, ಬದಲಿಗೆ 26 ವರ್ಷಗಳ ಹಿಂದಿನ ಕಂಬಾಲಪಲ್ಲಿ ಘಟನೆಗೆಗೂ ತಮ್ಮ ರಾಜಕೀಯ ಗುರು ಮಾಜಿ ಸಚಿವ ಎಂ.ಸಿ.ಸುಧಾಕರ್ ಕುಟುಂಬಕ್ಕೂ ಸಂಬAಧಕಲ್ಪಿಸುವ ಮರ್ಮ ಏನು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಒಬ್ಬರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ ಮಾತ್ರಕ್ಕೆ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಕಂಬಾಲಪಲ್ಲಿ ಪ್ರಕರಣವನ್ನು 26 ವರ್ಷಗಳ ಬಳಿಕ ಮತ್ತೆ ಕೆದಕುವ ಅಗತ್ಯವೇನು ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು. ಸಮಾಜದಲ್ಲಿ ಮತ್ತಷ್ಟು ಅಸಹನೆ ಅಥವಾ ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಕಳೆದ 50 ವರ್ಷಗಳಿಂದ ದಸಂಸ ಹಾಗೂ ಅದರ ಮುಖಂಡರು ಬಡವರಿಗೆ ಮನೆ, ಶಿಕ್ಷಣ, ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಹೋರಾಟ ನಡೆಸಿದ್ದಾರೆ. ಕುಪ್ಪಳ್ಳಿಯಲ್ಲಿ ಸ್ಮಶಾನ ನಿರ್ಮಾಣ, ಬಡವರಿಗೆ ಮೀಸಲಾಗಿದ್ದ ಐದು ಎಕರೆ ಜಮೀನಿನ ರಕ್ಷಣೆ ಸೇರಿದಂತೆ ಹಲವು ಹೋರಾಟಗಳನ್ನು ನಡೆಸಲಾಗಿದೆ. ಹೀಗಿರುವಾಗ ತಮ್ಮ ಮೂರು ವರ್ಷದ ಸಾಧನೆಗಳ ಸಂಪೂರ್ಣ ದಾಖಲೆಗಳನ್ನು ಶಾಸಕರು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಕ್ಷೇತ್ರದ ಉದ್ದಕ್ಕೂ ನಾಲ್ಕು ರಸ್ತೆಗಳನ್ನು ನಿರ್ಮಿಸಿ ನಾಲ್ಕು ತಿಂಗಳ ಕಾಲ ಪ್ರಚಾರ ಪಡೆಯುವುದೇ ಅಭಿವೃದ್ಧಿಯಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಮುಖ್ಯ. ನಾವು ಶಾಸಕರನ್ನು ವೈಯಕ್ತಿಕವಾಗಿ ವಿರೋಧಿಸುತ್ತಿಲ್ಲ; ಮೂರು ವರ್ಷಗಳ ಆಡಳಿತದ ವೈಫಲ್ಯ ಮತ್ತು ದುರಾಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ, ಇನ್ನಾದರೂ ನಿಮ್ಮ ವರ್ತನೆ ತಿದ್ದಿಕೊಳ್ಳಿ ಎಂದು ಎಚ್ಚರಿಸುತ್ತಿದ್ದೇವೆ ಎಂದರು.

ಇವರು ಒಂದುವರೆ ವರ್ಷದಲ್ಲಿ ಆದರೂ ಕೂಡ ಬಡವರ ಪರ ಶಾಸಕರು ನಿಲ್ಲದಿದ್ದರೆ ಅವರನ್ನು ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಗಲಿದೆ. ಮತದಾರರು ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಬಿ.ಫಾರಂ ನೀಡಿ ಚುನಾವಣೆಗೆ ಅವಕಾಶ ಕಲ್ಪಿಸಿದ ಗುರುವಿಗೂ ನ್ಯಾಯ ನೀಡದ ನೀವು ಕ್ಷೇತ್ರದ ಜನತೆಗೆ ಮುಂದೆ ಮೋಸ ಮಾಡುವುದಿಲ್ಲ ಎಂದು ಹೇಗೆ ನಂಬಬೇಕು ಎಂದು ರಾಜಾಕಾಂತ್ ಪ್ರಶ್ನಿಸಿದರು.

ಶಾಸಕರು ಅಧಿಕಾರದ ಸ್ಥಾನದಲ್ಲಿದ್ದು ಜನರಿಂದ ದೂರ ಉಳಿಯದೆ ಬಡವರು, ದಲಿತರು ಹಾಗೂ ಸಾಮಾನ್ಯ ಜನರ ಅಹವಾಲುಗಳನ್ನು ನೇರವಾಗಿ ಆಲಿಸಿ ಪರಿಹಾರ ಕಲ್ಪಿಸಬೇಕು. ದಲಿತರ ಹೆಸರನ್ನು ಬಳಸಿಕೊಂಡು ಇದೇ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳಿಂದ ವಂಚಿಸುವ ಕೆಲಸ ಮಾಡಬಾರದು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎನ್. ಪರಮೇಶ್, ಮೈಲಪನಹಳ್ಳಿ ರಾಜಶೇಖರ, ಕುಪ್ಪಳ್ಳಿ ಪುಟ್ಟ ನರಸಿಂಹ ಯ್ಯ, ವೆಂಕಟೇಶ್, ರಾಮಪ್ಪ, ಲಕ್ಷ್ಮಣ್ , ಕಣಿತಹಳ್ಳಿ ಮುನಿಯಪ್ಪ, ಸಿಂಗಾಟಿ ಕದಿರೇನಹಳ್ಳಿ ರಾಮಕೃಷ್ಣ,ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.