ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

E-account movement: ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

ಜಿಲ್ಲೆಯ ನಗರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ 70 ರಿಂದ 80 ಸಾವಿರ ಮನೆ/ನಿವೇಶನ ಗಳಿಗೆ ಇ-ಆಸ್ತಿಗಳನ್ನು ವಿತರಿಸುವುದು ಬಾಕಿ ಇದೆ. ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಕೆಲವು ಬಡಾವಣೆಗಳ ನಿವೇಶನಗಳಿಗೆ ಬಿ-ಖಾತೆ ಮಾಡಿಕೊಳ್ಳಲು ಹಾಗೂ ಈಗಾಗಲೇ ಬಿ-ಖಾತೆ ಹೊಂದಿರು ವವರು ಎ-ಖಾತೆಯ ಇ-ಸ್ವತ್ತುಗಳನ್ನು ಹೊಂದಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ

ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ

ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ 3 ರಿಂದ 4 ತಿಂಗಳಲ್ಲಿ 70 ರಿಂದ 80 ಸಾವಿರ ಇ-ಖಾತೆಗಳನ್ನು ವಿತರಿಸಲು ಯೋಜಿಸಿ ಇ-ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು. -

Profile
Ashok Nayak Apr 7, 2026 8:54 PM

ಚಿಕ್ಕಬಳ್ಳಾಪುರ : ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ 3 ರಿಂದ 4 ತಿಂಗಳಲ್ಲಿ 70 ರಿಂದ 80 ಸಾವಿರ ಇ-ಖಾತೆಗಳನ್ನು ವಿತರಿಸಲು ಯೋಜಿಸಿ ಇ-ಖಾತೆ ಆಂದೋಲನ(E-account movement)ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು(District Collector G. Prabhu) ತಿಳಿಸಿದರು.

ಚಿಕ್ಕಬಳ್ಳಾಪುರ ನಗರಸಭೆಯ ಆರವಣದಲ್ಲಿ ಹಮ್ಮಿಕೊಂಡಿದ್ದ ಇ-ಆಸ್ತಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ಗ್ರಾಮಾಂತರ ಪ್ರದೇಶದ ವ್ಯಾಪ್ತಿ ಯಲ್ಲಿ ವಿಶೇಷ ಕಂದಾಯ ಗ್ರಾಮ ಅಭಿಯಾನ 2 ಕಾರ್ಯಕ್ರಮದಡಿ 86,652 ಕುಟುಂಬಗಳಿಗೆ ಮಾಲಿಕತ್ವದ ಹಕ್ಕುಪತ್ರಗಳನ್ನು ನೀಡುವ ಕಾರ್ಯದ ಪ್ರಕ್ರಿಯೆ ಚಾಲನೆಯಲ್ಲಿದೆ.

ಅದೇ ರೀತಿ, ಜಿಲ್ಲೆಯ ನಗರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ 70 ರಿಂದ 80 ಸಾವಿರ ಮನೆ/ನಿವೇಶನ ಗಳಿಗೆ ಇ-ಆಸ್ತಿಗಳನ್ನು ವಿತರಿಸುವುದು ಬಾಕಿ ಇದೆ. ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಕೆಲವು ಬಡಾವಣೆಗಳ ನಿವೇಶನಗಳಿಗೆ ಬಿ-ಖಾತೆ ಮಾಡಿಕೊಳ್ಳಲು ಹಾಗೂ ಈಗಾಗಲೇ ಬಿ-ಖಾತೆ ಹೊಂದಿರುವವರು ಎ-ಖಾತೆಯ ಇ-ಸ್ವತ್ತುಗಳನ್ನು ಹೊಂದಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ.

ಇದನ್ನೂ ಓದಿ: Chikkamagaluru News: ಎನ್.ಆರ್.ಪುರದಲ್ಲಿ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್‌ ಆತ್ಮಹತ್ಯೆ

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 23,535 ಆಸ್ತಿಗಳಿದ್ದು, ಈ ಪೈಕಿ 14,918 ಅಧಿಕೃತ ಹಾಗೂ 8,617 ಅನಧಿಕೃತ ಆಸ್ತಿಗಳು ಇರುತ್ತವೆ. ಒಟ್ಟು ಲಭ್ಯವಿರುವ ಆಸ್ತಿಗಳ ಪೈಕಿ 11,391 ಆಸ್ತಿಗಳಿಗೆ ಈಗಾಗಲೇ ಇ-ಆಸ್ತಿಯನ್ನು ನೀಡಲಾಗಿದೆ. ಉಳಿದ 12,144 ಆಸ್ತಿಗಳಿಗೆ ಇ-ಖಾತೆಗಳನ್ನು ನೀಡುವುದು ಜಿಲ್ಲಾ ಕೇಂದ್ರ ಒಂದರಲ್ಲೇ ಬಾಕಿ ಇರುತ್ತದೆ. ಬಾಕಿ ಇರುವ ಆಸ್ತಿಗಳ ಪ್ರತಿ ಮಾಲೀಕರ ಮನೆ ಬಾಗಿಲಿಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿ ಇ-ಖಾತೆ ಮಾಡಿಕೊಡಲು ಏನೆಲ್ಲ ದಾಖಲೆ ಪತ್ರಗಳನ್ನು ನೀಡಬೇಕೆಂದು ಮನವರಿಕೆ ಮಾಡಿ ತಿಳುವಳಿಕೆ ಪತ್ರ ವಿತರಿಸುವ ಕಾರ್ಯ ಇಂದಿನಿಂದ ಕೆಲವು ದಿನಗಳವರೆಗೆ ನಡೆಯಲಿದೆ.

ಸಾರ್ವಜನಿಕರಿಂದ ಸಂಬಂಧಪಟ್ಟ ದಾಖಲೆಗಳನ್ನು ಸ್ವೀಕರಿಸಿ ಮುಂದಿನ 3 ರಿಂದ 4 ತಿಂಗಳಲ್ಲಿ ಶೇ. 80 ರಷ್ಟು ಇ-ಖಾತೆಗಳನ್ನು ವಿತರಿಸಲು ಗುರಿಯನ್ನು ಈ ಅಭಿಯಾನದಡಿ ಹೊಂದಲಾಗಿದೆ. ಇ-ಸ್ವತ್ತು ಅಭಿಯಾನವನ್ನು ಇಂದು ಜಿಲ್ಲಾ ಕೇಂದ್ರದಲ್ಲಿ ಚಾಲನೆ  ನೀಡಲಾಗಿದ್ದು,  ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿಯಾನವನ್ನು ಹಮ್ಮಿ ಕೊಳ್ಳಲು ಈಗಾಗಲೇ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಸೌಲತ್ತುಗಳನ್ನು ಪಡೆಯಲು ಅರ್ಜಿ ಸಲ್ಲಿಸುವಾಗ ಸಾರ್ವಜನಿಕರು ವಿಶೇಷ ಗಮನ ಹರಿಸುವುದು ಮುಖ್ಯವಾಗಿರುತ್ತದೆ. ಏಕೆಂದರೆ ಸ್ವೀಕೃತಿ ವಿಭಾಗ ದಲ್ಲಿ ಅರ್ಜಿಗಳನ್ನು ನೀಡಿ ಸ್ವೀಕೃತಿ ಪಡೆಯದೆ ಸಂಬಂಧ ಪಡದ ಯಾವುದೋ ಅನಧಿಕೃತ ವ್ಯಕ್ತಿಗಳ ಬಳಿ ಅರ್ಜಿಗಳನ್ನು ಸಲ್ಲಿಸಿದರೆ ಕಚೇರಿಗಳಿಗೆ ಅಲೆಯುವುದು ತಪ್ಪುವುದಿಲ್ಲ. ಆದ್ದರಿಂದ ಆಡಳಿತ ದಲ್ಲಿ ಪಾರದರ್ಶಕತೆ ಹಾಗೂ ಶಿಸ್ತನ್ನು ತರಲು ಎಲ್ಲ ಕಚೇರಿಗಳಲ್ಲಿ ಸ್ವೀಕೃತಿ ಶಾಖೆಯನ್ನು ತೆರೆಯಲಾಗಿದೆ ಎಂದರು.

E khata 2

ಅಲ್ಲದೆ ಸಾರ್ವಜನಿಕರು ಸಲ್ಲಿಸುವ ಅಹವಾಲು ಹಾಗೂ ಅರ್ಜಿಗಳ ವಿಲೆವಾರಿಯ ಸ್ಥಿತಿಗತಿಯನ್ನು ಕರಾರುವಕ್ಕಾಗಿ ತಿಳಿದುಕೊಳ್ಳಲು ಜಿಲ್ಲಾಡಳಿತ ಎಲ್ಲ ಇಲಾಖೆಗಳಲ್ಲಿ ಇ-ಕಚೇರಿ  ಆಡಳಿತ ವ್ಯವಸ್ಥೆ ಯನ್ನು ಇದೇ ಏ.15 ರಿಂದ ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ. ಇಲಾಖೆಗಳ ಮುಖ್ಯಸ್ಥರು ನಿಗಾ ವಹಿಸಿ ಇ-ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲು ಸೂಚಿಸಲಾಗಿದೆ.

ಯಾವುದೇ ಅರ್ಜಿಯನ್ನು ಯಾವುದೇ ನಾಗರಿಕರು ಸಲ್ಲಿಸಿದಾಗ ಅದರ ಮೇಲೆ ಕರಾರುವಕ್ಕಾಗಿ ಯಾವ ವಿಲೆಕ್ರಮ ಆಗಿದೆ ಎಂಬುದನ್ನು ಮೇಲುಸ್ತುವಾರಿ ಮಾಡಿ ಸೂಚನೆ ನೀಡಲು ಈ ತಂತ್ರಜ್ಞಾನ ಬಹಳ ಸಹಕಾರಿಯಾಗಿದೆ. ಒಂದು ವೇಳೆ ಅರ್ಜಿ ವಿಲೆಮಾಡಲು ವಿಳಂಬ ಧೋರಣೆ ತೋರಿದಲ್ಲಿ ಯಾರಿಂದ ವಿಳಂಬವಾಗಿದೆ, ಎಷ್ಟು ದಿನ, ಎಷ್ಟು ಸಮಯ ವಿಳಂಬವಾಗಿದೆ ಎಂಬುದನ್ನು ಸ್ಪಷ್ಟ ವಾಗಿ ತಿಳಿಯಬಹುದು.

ಪ್ರತಿ ವಿಷಯ ನಿರ್ವಾಹಕರಿಂದ ಅವರು ನಿರ್ವಹಿಸುವ ಕಡತಗಳ ಬಾಕಿ ಪಟ್ಟಿಯನ್ನು ಪ್ರತಿ ವಾರ  ಮೇಲಾಧಿಕಾರಿಗಳು ಪರಿಶೀಲಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ. ಆದ್ದರಿಂದ ಆಡಳಿತದ ಕಾರ್ಯವೈಖರಿಯು ಇನ್ನುಮುಂದೆ ಹೆಚ್ಚಿನ ವೇಗ ಪಡೆಯುವುದಲ್ಲದೆ ಪಾರದರ್ಶಕ ಆಡಳಿತ ಜನರಿಗೆ ದೊರಕಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ಪೌರಾಯುಕ್ತ ಮನ್ಸೂರ್ ಅಲಿ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಜಿಲ್ಲಾಧಿಕಾರಿಗಳು ಇ-ಖಾತೆ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಪ್ರಾತ್ಯೆಕ್ಷಿಕೆ ಮೂಲಕ ಮಾಹಿತಿ ನೀಡಿ ಅರ್ಜಿಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದು, ಗಮನ ಸೆಳೆಯಿತು.