Dr K Sudhakar: ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಪಕ್ಷ ಬಿಜೆಪಿ: ಡಾ.ಕೆ.ಸುಧಾಕರ್
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಕೆ.ಎಂ.ಸುರೇಶ್ ಅವರನ್ನು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಉದ್ಯಮಿ ಶಿಕ್ಷಣ ತಜ್ಞ ಆಗಿರುವ ಇವರು ಪಕ್ಷಕ್ಕಾಗಿ ಸುದೀರ್ಘ ಕಾಲ ಶಿಸ್ತಿನಿಂದ ದುಡಿದಿರುವುದು ಅವರ ವಿಶೇಷತೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
-
ಚಿಕ್ಕಬಳ್ಳಾಪುರ: ಬಿಜೆಪಿ(Bharatiy Janatha Party) ಮತ್ತು ಜೆಡಿಎಸ್(JDS) ಎರಡೂ ಕಾರ್ಯಕರ್ತರ ಪಕ್ಷಗಳಾಗಿದ್ದು, ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿವೆ ಎಂದು ಸಂಸದ ಸುಧಾಕರ್ ಹೇಳಿದರು .
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಕೆ.ಎಂ.ಸುರೇಶ್(K M Suresh) ಅವರನ್ನು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಉದ್ಯಮಿ ಶಿಕ್ಷಣ ತಜ್ಞ ಆಗಿರುವ ಇವರು ಪಕ್ಷಕ್ಕಾಗಿ ಸುದೀರ್ಘ ಕಾಲ ಶಿಸ್ತಿನಿಂದ ದುಡಿದಿರುವುದು ಅವರ ವಿಶೇಷತೆ ಎಂದು ಸಂಸದ ಡಾ.ಕೆ.ಸುಧಾಕರ್(Dr K Sudhakar) ಹೇಳಿದರು.
ನಗರದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಸಂತೋಷವಾಗುತ್ತಿದೆ. ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಪವಿತ್ರ ವೃತ್ತಿಯಲ್ಲಿರುವ ವಕೀಲರ ಮತ ಕೇಳುವುದು ಗೌರವದ ಸಂಗತಿ. ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರಿಗೆ ಪ್ರಥಮ ಆದ್ಯತೆಯ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: ಜೈನ್ ಮಿಷನ್ ಆಸ್ಪತ್ರೆಯಲ್ಲಿ ಜಿಲ್ಲೆಯ ಮೊದಲ ಸರ್ಜಿಕಲ್ ತೀವ್ರ ನಿಗಾ ಘಟಕ ಆರಂಭ
ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸುವ ಪಕ್ಷವಾಗಿದೆ. ಇತರ ಪಕ್ಷಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಕುಟುಂಬದ ಹಿನ್ನೆಲೆಯನ್ನು ಗಮನಿಸಿ ಅವಕಾಶ ನೀಡುವ ಪ್ರವೃತ್ತಿ ಯಿದೆ. ಜೆಡಿಎಸ್ ಕೂಡ ಕಾರ್ಯಕರ್ತರಿಗೆ ಗೌರವ ನೀಡುತ್ತದೆ. ಕಾರ್ಯಕರ್ತರ ಸಮಸ್ಯೆಗಳಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿರುವುದು ಕಾರ್ಯಕರ್ತರ ಮೇಲಿನ ಅವರ ಪ್ರೀತಿಗೆ ಸಾಕ್ಷಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂತ್ರಜ್ಞಾನಕ್ಕೆ ಆದ್ಯತೆ ನೀಡಿದ್ದು, ನ್ಯಾಯಾಲಯದ ಕಲಾಪಗಳನ್ನು ಮೊಬೈಲ್ ಮೂಲಕ ವೀಕ್ಷಿಸುವ ವ್ಯವಸ್ಥೆ ಸೇರಿದಂತೆ ನ್ಯಾಯಾಂಗದ ಡಿಜಿಟಲೀಕರಣಕ್ಕೆ ಉತ್ತೇಜನ ನೀಡಿದೆ. ವಕೀಲರಿಗೆ ಇಂಟರ್ನ್ಶಿಪ್ ಅವಕಾಶ ಕಲ್ಪಿಸುವುದು, ಉದ್ಯೋಗದಾತರಿಗೆ ತರಬೇತಿ ಮತ್ತು ಪ್ರೋತ್ಸಾಹಧನ ನೀಡುವುದು, ಶೂರಿಟಿ ಇಲ್ಲದೆ ಸಾಲ ಸೌಲಭ್ಯ ಒದಗಿಸುವುದು ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವಂತಹ ಕ್ರಮಗಳ ಮೂಲಕ ಉದ್ಯೋಗ ಮತ್ತು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಭಾರತದ ಆರ್ಥಿಕ ಬೆಳವಣಿಗೆಗೆ ಕೇಂದ್ರ ಸರ್ಕಾರದ ನೀತಿಗಳು ಸಹಕಾರಿಯಾಗಿವೆ. ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಿಸಿರುವುದರಿಂದ ದೇಶದಲ್ಲಿ ಹೂಡಿಕೆ ಹೆಚ್ಚುತ್ತಿದೆ. ಕರ್ನಾಟಕವೂ ಹೂಡಿಕೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ದೊಡ್ಡಬಳ್ಳಾಪುರದ ಐಫೋನ್ ಉತ್ಪಾದನಾ ಘಟಕದಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.
ಯುವಜನರಿಗೆ ಕೇವಲ ತಾತ್ಕಾಲಿಕ ಆರ್ಥಿಕ ನೆರವು ನೀಡುವುದಕ್ಕಿಂತ ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವುದು ಮುಖ್ಯ. ದುಡಿಯುವ ಕೈಗಳಿಗೆ ಕೌಶಲ್ಯ ಒದಗಿಸುವುದು ದೀರ್ಘಕಾಲೀನ ಅಭಿವೃದ್ಧಿಗೆ ನೆರವಾಗುತ್ತದೆ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ತಾತ್ಕಾಲಿಕ ಆಮಿಷಗಳಿಗೆ ಒಳಗಾಗದೆ, ಅಭ್ಯರ್ಥಿಯ ಸೇವೆ ಮತ್ತು ಅಭಿವೃದ್ಧಿಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು ಎಂದು ಹೇಳಿದರು.
ವಕೀಲರು ಮನಸ್ಸು ಮಾಡಿದರೆ ಪ್ರತಿಯೊಬ್ಬರೂ ನೂರು ಮತಗಳನ್ನು ಅಭ್ಯರ್ಥಿಯ ಪರವಾಗಿ ಸೆಳೆಯಲು ಶ್ರಮಿಸಬಹುದು. ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕೆ.ಎಂ.ಸುರೇಶ್ ಅವರಿಗೆ ಪ್ರಥಮ ಆದ್ಯತೆಯ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವಕೀಲರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುವುದಾಗಿ ಭರವಸೆ ನೀಡಿದ ಡಾ.ಕೆ.ಸುಧಾಕರ್, ವಕೀಲರು ಸಮಾಜದ ನ್ಯಾಯ ಮತ್ತು ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಇದೇ ವೇಳೆ ವಕೀಲರ ಸಂಘದ ಮೇಲಂತಸ್ತಿ ಕಟ್ಟಡ ಕಾಮಗಾರಿಗೆ 50ಲಕ್ಷ ಅನುದಾನ ಕೊಟ್ಟ ನೆನಪನ್ನು ಇದೇ ವೇಳೆ ಸಂಸದರು ನೆನಪಿಸಿಕೊಂಡರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ವಕೀಲರು ಭಾಗವಹಿಸಿ ದ್ದರು.