ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ರೈತರ ಭೂ ಪ್ರವೇಶಕ್ಕೆ ಬ್ರೇಕ್‌: ಪೊಲೀಸರ ಬಲಪ್ರಯೋಗ; ಸಿಂಗಾಡಿಕದಿರೇನಹಳ್ಳಿ ಹೋರಾಟ ಮೊಟಕು

ಮುದ್ದೇನಹಳ್ಳಿ ಕ್ರಾಸ್‌ನಿಂದ ವಿಟಿಯು ಹೆಬ್ಬಾಗಿಲಿನವರೆಗೆ ಮೆರವಣಿಗೆಯಲ್ಲಿ ಸಾಗಿದ ಐಕ್ಯ ಹೋರಾಟ ಸಮಿತಿ ಮುಖಂಡರು, ರೈತರು ಹಾಗೂ ಪದಾಧಿಕಾರಿಗಳು ತಾವು ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಗೆ ಪ್ರವೇಶಿಸಲು ಮುಂದಾದಾಗ, ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಅವರನ್ನು ತಡೆದು ಬಂಧಿಸಿದರು.

ರೈತರ ಭೂ ಪ್ರವೇಶಕ್ಕೆ ಬ್ರೇಕ್‌: ಪೊಲೀಸರ ಬಲಪ್ರಯೋಗ

ಸಿಂಗಾಡಿಕದಿರೇನಹಳ್ಳಿ ರೈತರ ಭೂ ಪ್ರವೇಶ ಹೋರಾಟದ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ ದೃಶ್ಯ. -

Profile
Ashok Nayak Aug 27, 2026 11:20 PM

ಭೂಮಿ ಪ್ರವೇಶಕ್ಕೆ ಮುಂದಾದ ಹೋರಾಟಗಾರರ ಬಂಧನ

3 ತಿಂಗಳಲ್ಲಿ ದಾಖಲೆ ಪರಿಶೀಲನೆ, ಸಮಸ್ಯೆ ಇತ್ಯರ್ಥದ ಭರವಸೆ

ಚಿಕ್ಕಬಳ್ಳಾಪುರ: ಸಿಂಗಾಡಿಕದಿರೇನಹಳ್ಳಿ ಗ್ರಾಮದ ರೈತರ ಭೂಮಿ ಹಕ್ಕಿನ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸುವಂತೆ ಒತ್ತಾಯಿಸಿ ಭೂಮಿ ಪ್ರವೇಶಕ್ಕೆ ಮುಂದಾದ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಹೋರಾಟವನ್ನು ಜಿಲ್ಲಾಡಳಿತ ಪೊಲೀಸರು ಬಲಪ್ರಯೋಗದ ಮೂಲಕ ಹತ್ತಿಕ್ಕಿದ ಘಟನೆ ಬುಧವಾರ ನಡೆಯಿತು.

ಮುದ್ದೇನಹಳ್ಳಿ ಕ್ರಾಸ್‌ನಿಂದ ವಿಟಿಯು ಹೆಬ್ಬಾಗಿಲಿನವರೆಗೆ ಮೆರವಣಿಗೆಯಲ್ಲಿ ಸಾಗಿದ ಐಕ್ಯ ಹೋರಾಟ ಸಮಿತಿ ಮುಖಂಡರು, ರೈತರು ಹಾಗೂ ಪದಾಧಿಕಾರಿಗಳು ತಾವು ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಗೆ ಪ್ರವೇಶಿಸಲು ಮುಂದಾದಾಗ, ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಅವರನ್ನು ತಡೆದು ಬಂಧಿಸಿದರು.

ಭೂಮಿ ಪ್ರವೇಶಕ್ಕೆ ಮುಂದಾದ ಸಂದರ್ಭದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಹೋರಾಟಗಾರರು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿತು. ಬಳಿಕ ಪೊಲೀಸರು ಬಲಪ್ರಯೋಗ ನಡೆಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ಗಳಿಗೆ ಹತ್ತಿಸಿದರು.

ಇದನ್ನೂ ಓದಿ: Chikkaballapur News: ಸೆ.6ರಂದು 12ನೇ ವರ್ಷದ ಸಾಮೂಹಿಕ ಸೀಮಂತ: ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

74 ದಿನಗಳ ಹೋರಾಟಕ್ಕೂ ಅಂತ್ಯ ಕಾಣದ ಅಸಮಾಧಾನ
ದಲಿತ ಸಂಘರ್ಷ ಸಮಿತಿ ಮಾಜಿ ಸಂಘಟನಾ ಸಂಚಾಲಕ ಮುನಿಸ್ವಾಮಿ ಮಾತನಾಡಿ, ಐದು ದಶಕಗಳಿಂದ ನೊಂದವರ ಪರ ಹೋರಾಟ ನಡೆಸಿಕೊಂಡು ಬಂದಿದ್ದು, ಸಿಂಗಾಡಿಕದಿರೇನಹಳ್ಳಿ ಹೋರಾಟವೂ ನ್ಯಾಯಕ್ಕಾಗಿ ನಡೆಯುತ್ತಿದೆ. ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ, 74 ದಿನಗಳಿಂದ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡದ ಜಿಲ್ಲಾಡಳಿತ ಹಾಗೂ ಗೊಂದಲಕ್ಕೆ ಕಾರಣವಾಗಿ ರುವ ಕಂದಾಯ ಇಲಾಖೆ ವಿರುದ್ಧ ನಮ್ಮ ಹೋರಾಟವೇ ಹೊರತು ಪೊಲೀಸರ ವಿರುದ್ಧವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

1972–73ರಲ್ಲಿ ಸಾಗುವಳಿ ಚೀಟಿ ಪಡೆದಿರುವ ರೈತರು ಸರ್ವೆ ನಂಬರ್‌ 67ಕ್ಕೆ ಸಂಬಂಧಿಸಿದ ದಾಖಲೆ ಗಳನ್ನು ಹೊಂದಿದ್ದು, 2015ರವರೆಗೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಇಂತಹ ರೈತರನ್ನು ಡೀಮ್ಡ್‌ ಫಾರೆಸ್ಟ್‌ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಿರುವ ಅಧಿಕಾರಿಗಳು, ಇದೇ ಪ್ರದೇಶ ದಲ್ಲಿನ 200 ಎಕರೆ ಭೂಮಿಯನ್ನು ವಿಟಿಯು ಕಾಲೇಜಿಗೆ ಹೇಗೆ ಪರಭಾರೆ ಮಾಡಲಾಗಿದೆ ಎಂದು ಪ್ರಶ್ನಿಸಿದರು.

27cbpm1p (1)_ok

‘ರೈತರಿಗೆ ಒಂದು ನ್ಯಾಯ, ಹಣವಂತರಿಗೆ ಮತ್ತೊಂದು ನ್ಯಾಯವೇ?’
ಎರಡು–ಮೂರು ಎಕರೆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರಿಗೆ ಒಂದು ನ್ಯಾಯ, ಹಣವಂತರಿಗೆ ಮತ್ತೊಂದು ನ್ಯಾಯ ಏಕೆ ಎಂದು ಪ್ರಶ್ನಿಸಿದ ಅವರು, ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಸರಕಾರವೇ ನೀಡಿರುವ ಎಲ್ಲ ದಾಖಲೆಗಳನ್ನು ಹೊಂದಿರುವ ಏಳು ಮಂದಿ ರೈತರನ್ನಾದರೂ ಅವರ ಭೂಮಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮೂರು ತಿಂಗಳಲ್ಲಿ ದಾಖಲೆ ಪರಿಶೀಲನೆ: ಉಪವಿಭಾಗಾಧಿಕಾರಿ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಆರ್.ಅಶ್ವಿನ್, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅರಣ್ಯ ಇತ್ಯರ್ಥಾಧಿಕಾರಿಯಾಗಿ ಮಂಗಳವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಶೀಘ್ರವೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಂಗಾಡಿಕದಿರೇನಹಳ್ಳಿ ರೈತರಿಗೆ ನೋಟಿಸ್‌ ನೀಡಿ, ಮತ್ತೊಮ್ಮೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ಬೇಕಿದ್ದು, ಹೋರಾಟ ಕೈಬಿಟ್ಟು ಸಹಕರಿಸು ವಂತೆ ಮನವಿ ಮಾಡಿದರು.

ಆದರೆ, ಉಪವಿಭಾಗಾಧಿಕಾರಿಗಳ ಮನವಿಗೆ ಕೆಲ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿ, ವಿಚಾರಣೆಯನ್ನು ಸ್ಥಳದಲ್ಲಿಯೇ ನಡೆಸಬೇಕು ಎಂದು ಪಟ್ಟು ಹಿಡಿದರು. ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರೂ ವಿವಾದದ ಭಾಗವಾಗಿರುವುದರಿಂದ ಇಬ್ಬರಿಗೂ ಸಮಾನ ನಿಯಮ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

‘ಭೂಮಿ ಪ್ರವೇಶ ಮಾಡಿಯೇ ತೀರುತ್ತೇವೆ’—ಹೋರಾಟಗಾರರ ಪಟ್ಟು
ದಸಂಸ ಹಿರಿಯ ಮುಖಂಡ ಗಡ್ಡ ವೆಂಕಟೇಶ್ ನೇತೃತ್ವದಲ್ಲಿ ಹೋರಾಟಗಾರರು ಭೂಮಿ ಪ್ರವೇಶಕ್ಕೆ ಮುಂದಾದಾಗ ಪೊಲೀಸರು ತಡೆದರು. ಬಳಿಕ ಎಸ್ಪಿ ಕುಶಾಲ್ ಚೌಕ್ಸೆ ಹಾಗೂ ಎಎಸ್ಪಿ ಜಗನ್ನಾಥ್ ರೈ ಅವರ ಸಮ್ಮುಖದಲ್ಲಿ ಪ್ರತಿಭಟನಾಕಾರರನ್ನು ಒಬ್ಬೊಬ್ಬರನ್ನಾಗಿ ಬಸ್‌ಗೆ ಹತ್ತಿಸಿ ಬಂಧಿಸಲಾಯಿತು. ಪ್ರತಿಭಟನಾಕಾರರಿಗಾಗಿ ಸ್ಥಳಕ್ಕೆ ತರಲಾಗಿದ್ದ ಊಟವನ್ನೂ ಮಾಡಲು ಅವಕಾಶ ನೀಡದೆ ಬಂಧಿಸಿರು ವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು.

ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ
ಕೆಆರ್‌ಎಸ್‌ ಪಕ್ಷದ ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಸಿಪಿಐಎಂನ ಮುನಿವೆಂಕಟಪ್ಪ, ದಸಂಸ ಮುಖಂಡ ಕೆ.ಸಿ.ರಾಜಾಕಾಂತ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ರೈತರ ಭೂಮಿ ಹಕ್ಕಿನ ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ  ವಿವಿಧ ರೈತ ಹಾಗೂ ದಲಿತ ಸಂಘಟನೆಗಳ ಮುಖಂಡರು, ರೈತರು, ಪದಾಧಿಕಾರಿ ಗಳು ಕರ್ನಾಟಕ ರಾಜ್ಯ ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಪುಟ್ಟಣ್ಣಯ್ಯ ಬಣದ ಲಕ್ಷ್ಮೀ ನಾರಾಯಣರೆಡ್ಡಿ, ಕೆ.ಆರ್.ಎಸ್ ಪಕ್ಷದ ರವಿಕೃಷ್ಣಾರೆಡ್ಡಿ,ಸಿಪಿಐಎಂ ಪಕ್ಷದ ಮುನಿವೆಂಕಟಪ್ಪ, ಸಿದ್ಧಗಂಗಪ್ಪ, ಮುನಿಕೃಷ್ಣಪ್ಪ,ದಸಂಸ ಮುಖಂಡರಾದ ಗಡ್ಡಂ ವೆಂಕಟೇಶ್, ಮುನಿಸ್ವಾಮಿ, ಕೆ.ಸಿ.ರಾಜಾಕಾಂತ್, ಸಿ.ಜಿ.ಗಂಗಪ್ಪ, ಬಿ.ವಿ.ವೆಂಕರಮಣ, ಪೈಪಾಳ್ಯ ರವಿ, ನರಸಿಂಹಪ್ಪ, ದೊಡ್ಡ ತಿರುಮಳಪ್ಪ,ಸಿ.ನರಸಸಿಂಹಪ್ಪ,ತಾಲೂಕು ಸಂಚಾಲಕ ಪರಮೇಶ್, ಎಸ್.ಸಿ.ನಾರಾಯಣಸ್ವಾಮಿ ಮತ್ತಿತರರು ಇದ್ದರು.