ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

ದಲಿತರು ಸಚಿವರೇ ಆಗಬಾರದು, ಅವರು ಉನ್ನತ ಸ್ಥಾನಗಳಿಗೆ ಹೋದರೆ ಆಗಬಾರದ್ದು ಆಗಿ ಬಿಡುತ್ತದೆ ಎಂದು ಸುಖಾಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಬೊಬ್ಬೆ ಹಾಕುವುದು ನಿಲ್ಲಿಸಬೇಕು. ಅಬಕಾರಿಯಂತಹ ಸರಕಾರಕ್ಕೆ ಆದಾಯ ತಂದುಕೊಡುವ ಖಾತೆಯನ್ನು ನಿಭಾಯಿಸುವುದು ಹಾದಿ ಬೀದಿ ಪುಂಡರು ಮಾತನಾಡಿದಷ್ಟು ಸುಲಭವಲ್ಲ

ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

-

Ashok Nayak
Ashok Nayak Jan 26, 2026 12:01 AM

ಚಿಕ್ಕಬಳ್ಳಾಪುರ: ಶೋಷಿತ ಸಮುದಾಯದ ಸ್ವಾಭಿಮಾನಿ ಕ್ರಿಯಾಶೀಲ ರಾಜಕೀಯ ಹಿನ್ನೆಲೆಯುಳ್ಳ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ದಲಿತ ಸಚಿವರು ಶಾಸಕರ ಮೇಲಿನ ರಾಜಕೀಯ ಪ್ರೇರಿತ ತೇಜೋವಧೆಯ ದಾಳಿ ನಿಲ್ಲಬೇಕು. ಇಲ್ಲದಿದ್ದರೆ ರಾಜ್ಯಾ ದ್ಯಂತ ಕರ್ನಾಟಕ ರಾಜ್ಯ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಸಾದಲಿ ಮಂಜುನಾಥ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಒಳಮೀಸಲಾತಿ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಮುಖ ನಾಯಕ ರಲ್ಲಿ ಒಬ್ಬರಾಗಿರುವ ಗೃಹ ಸಚಿವ ಜಿ.ಪರಮೇಶ್ವರ್(Home Minister G. Parameshwar), ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ(Excise Minister R.B. Thimmapura), ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ(Social Welfare Minister H.C. Mahadevappa), ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ(Rural Development Minister Priyank Kharge), ಆಹಾರ ಮತ್ತು ನಾಗರೀಕ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ(Food and Civil Affairs Minister K.H. Muniyappa) ಮೊದಲಾದ ದಲಿತ ಸಮಾಜದ ಸಚಿವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಸೇರಿ ಇತರೆ ವಿರೋಧ ಪಕ್ಷಗಳ ಮುಖಂಡರು ವ್ಯವಸ್ಥಿತ ದಾಳಿ ನಡೆಸಿ ಇವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಡೆಯನ್ನು ಯಾವ ದಲಿತ ಸಮುದಾಯವೂ ಸಹಿಸಿ ಸುಮ್ಮನೆ ಕೂರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ

ದಲಿತರು ಸಚಿವರೇ ಆಗಬಾರದು, ಅವರು ಉನ್ನತ ಸ್ಥಾನಗಳಿಗೆ ಹೋದರೆ ಆಗಬಾರದ್ದು ಆಗಿ ಬಿಡುತ್ತದೆ ಎಂದು ಸುಖಾಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಬೊಬ್ಬೆ ಹಾಕುವುದು ನಿಲ್ಲಿಸಬೇಕು. ಅಬಕಾರಿಯಂತಹ ಸರಕಾರಕ್ಕೆ ಆದಾಯ ತಂದುಕೊಡುವ ಖಾತೆಯನ್ನು ನಿಭಾಯಿಸುವುದು ಹಾದಿ ಬೀದಿ ಪುಂಡರು ಮಾತನಾಡಿದಷ್ಟು ಸುಲಭವಲ್ಲ. ಇದೇ ನಂಬಿಕೆಯಿಂದಲೇ ಮುಖ್ಯಮಂತ್ರಿಗಳು ತಿಮ್ಮಾಪುರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡು ಈ ಖಾತೆ ನೀಡಿದ್ದಾರೆ ಎಂದರು.

ತಿಮ್ಮಾಪುರ ಅವರು ಅಬಕಾರಿ ಸಚಿವರಾದ ಕೂಡಲೇ ಇಲಾಖೆಯಲ್ಲಿನ ಸಾಂಪ್ರದಾಯಿಕ ನಿಯಮಗಳಿಗೆ ಆಧುನಿಕ ಸ್ಪರ್ಷ ನೀಡಿ ಸಾಮಾನ್ಯರೂ ಸಹ ಸುಲಭವಾಗಿ ಇಲಾಖಾ ನಿಯಮಗಳನ್ನು ಅರ್ಥ ಮಾಡಿಕೊಂಡು ಟೆಂಡರ್ ಮತ್ತಿತರೆ ಪ್ರಕ್ರಿಯೆಯಲ್ಲಿ ಭಾಗಿ ಯಾಗಲು ಸಹಾಯ ಮಾಡಿದ್ದಾರೆ.ಇದನ್ನು ಸಹಿಸದೆ ಸಚಿವರನ್ನು ತೇಜೋವಧೆ ಮಾಡಲು, ಅವರ ಹೆಸರಿಗೆ ಕಳಂಕ ತರಲು ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ತಿಮ್ಮಾಪುರ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಇಲ್ಲ. ಮುಖ್ಯವಾಗಿ ಇವರ ವಿರುದ್ಧ ಸುಳ್ಳು ಆರೋಪ ಮಾಡಿರುವ ಲಕ್ಷ್ಮೀನಾರಾಯಣ ಎನ್ನು ವವರು ಹುಳಿಮಾವು ಪೊಲೀಸ್‌ಠಾಣೆಯಲ್ಲಿನ ರೌಡಿ ಶೀಟರ್ ಆಗಿದ್ದಾರೆ. ಸರಕಾರಿ ಭೂ ಕಬಳಿಕೆ ಈತನ ಹವ್ಯಾಸವಾಗಿದೆ.

ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವುದೇ ಈತನ ಉದ್ಯೋಗ.ಈತನ ಮಾತುಕೇಳದ ಅಧಿಕಾರಿಗಳ ಮೇಲೆ ನಿರಂತರವಾಗಿ ಲೋಕಾಯುಕ್ತ ದಾಳಿ, ಸಿಬಿಐ ಸಂಸ್ಥೆಗಳ ಮೂಲಕ ತನಿಖೆ ಆಗುವಂತೆ ನೀಡಿಕೊಂಡು ದಕ್ಷ ಪ್ರಮಾಣಿಕ ಅಧಿಕಾರಿಗಳ ಭವಿಷ್ಯ ಮತ್ತು ಕುಟುಂಬ ಗಳನ್ನು ನಾಶ ಮಾಡಿದ್ದಾರೆ. ಇಂತಹ ಹಿನ್ನೆಲೆ ಇರುವ ಈತನ ವಿರುದ್ದ ಸರಕಾರ ಕೂಡಲೇ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಂಘಟನೆ ಈತನ ವಿರುದ್ದ ಧರಣಿ ಪ್ರತಿಭಟನೆ ನಡೆಸ ಲಾಗುವುದು. ಆದ್ದರಿಂದ ಕೂಡಲೇ ಈತನ ಬಂಧವಾಗಲಿ, ಸಚಿವ ವಿರುದ್ಧ ದಾಳಿ ಮಾಡಿರುವ ಈತನ ಮೇಲೆ ಕಾನೂನು ರೀತಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ದಲಿತ ಸೇನೆ ಪಾಸ್ವಾನ್ ಬಣದ ಸುರೇಶ್‌ ಮಾತನಾಡಿ, ದಲಿತರನ್ನು ರಾಜಕೀಯವಾಗಿ ಬೆಳೆಯಲು ಬಿಡಬಾರದು ಎಂಬುದೇ ಕೆಲವರ ಉದ್ದೇಶವಾಗಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ದಲಿತರಿಗೆ ಸಾಮಾಜಿಕ ಸ್ವಾತಂತ್ರ್ಯ ಬಂದಿಲ್ಲ. ಸುಧಾರಣೆ ನೆಪದಲ್ಲಿ ಬರುವವರು ಬಾಯಲ್ಲಿ ಒಳ್ಳೆಯ ಮಾತು ಹೇಳುತ್ತಾರೆ. ಆದರೆ ಅವರ ಮನಸ್ಸಲ್ಲಿ ಏಳು ಕಂಡುಗ ವಿಷ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದೇನೆಂದರೆ ದಲಿತರ ಮೇಲೆ ದಾಳಿ ಮಾಡುವವರಿಗೆ ಕಠಿಣವಾದ ಶಿಕ್ಷೆ ನೀಡಬೇಕು. ತಿಮ್ಮಾಪುರ ಅವರ ಮೇಲೆ ಸುಖಾಸುಮ್ಮನೆ ಆರೋಪ ಮಾಡಿರುವ ಲಕ್ಷ್ಮೀ ನಾರಾಯಣ ಎಂಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸೇನೆಯ ಗಂಗಪ್ಪ ಮಾತನಾಡಿ, ದಲಿತ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಸಹಿಸಲಾರದವರು ಹಳ್ಳಿಯ ಸಾಮಾನ್ಯ ವ್ಯಕ್ತಿಯಿಂದ ಮೊದಲಾಗಿ ಶಾಸಕ ಸಚಿವರ ತನಕ ಬೆಳೆದರೂ ಅವರ ಕಾಲೆಳೆಯುವ ಕೆಲಸ ನಿರಂತರವಾಗಿ ನಡೆದಿವೆ.ಆದ್ದರಿಂದ ತಿಮ್ಮಾಪುರ ಅಂತಹ ಕಪ್ಪುಚುಕ್ಕೆಯಿಲ್ಲದ ಸಚಿವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಹೊರಟಿರುವುದು ಸರಿಯಲ್ಲ. ಮುಂಬರುವ ಸಂಪುಟ ಪುನಾರಚನೆಯಲ್ಲಿ ಈಗಿರುವ ಯಾವ ದಲಿತ ಸಚಿವರೂ ಇರಬಾರದು ಎಂಬ ಒಂದೇ ಒಂದು ಉದ್ದೇಶ ಆರೋಪ ಮಾಡುತ್ತಿರುವ ಲಕ್ಷ್ಮೀನಾರಾಯಣ ಮತ್ತು ಅವರ ತಂಡದ್ದಿದೆ.ಈತನ ಆರೋಪದ ಬಗ್ಗೆ ತನಿಖೆ ಆಗಲಿ, ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಮುಖ್ಯಮಂತ್ರಿಗಳು ಬೇಕಾದ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ತೇಜೋವಧೆ ಮಾಡುವುದು ತಪ್ಪು, ಇದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಮಂಜುನಾಥ್ ಮೂರ್ತಿ, ಬಾಬಾಜಾನ್, ನಾಗೇಶ್, ಗಂಗಪ್ಪ ಮತ್ತಿತರರು ಇದ್ದರು.