ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುದ್ದಿಯ ಜಂಜಾಟ ಮರೆತು ಕ್ರೀಡಾಂಗಣದಲ್ಲಿ ಸಂಭ್ರಮಿಸಿದ ಪತ್ರಕರ್ತರು: ಹಿರಿಯ-ಕಿರಿಯರ ಒಗ್ಗಟ್ಟಿಗೆ ಸಾಕ್ಷಿಯಾದ ಅಪರೂಪದ ಕ್ಷಣಗಳು

ನಗರ ಹೊರವಲಯ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ 30ನೇ ದತ್ತಿ ದಿನಾಚರಣೆ ಹಾಗೂ ಶಿಕ್ಷಣ ದಾರ್ಶನಿಕ ದಿವಂಗತ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಮಂಗಳ ವಾರ ಸಿವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಪತ್ರಕರ್ತರ ಸೌಹಾರ್ದ ಕ್ರೀಡಾಕೂಟವು ಕೇವಲ ಆಟೋಟಗಳಿಗೆ ಸೀಮಿತವಾಗದೆ, ಮಾನವೀಯ ಸಂಬಂಧಗಳ ಬೆಸುಗೆಯಾಗಿ ರೂಪು ಗೊಂಡಿತು.

ಕೆವಿ–ಪಂಚಗಿರಿ ಶಿಕ್ಷಣ ದತ್ತಿಗಳ 30ನೇ ದತ್ತಿ ದಿನಾಚರಣೆ

-

Profile
Ashok Nayak Jul 15, 2026 9:54 AM

ಚಿಕ್ಕಬಳ್ಳಾಪುರ: ದಿನವಿಡೀ ಸುದ್ದಿಯ ಬೆನ್ನುಹತ್ತಿ ಓಡಾಡುವ ಪತ್ರಕರ್ತರು ಒಂದು ದಿನ ಸುದ್ದಿ ಯನ್ನೇ ಮರೆತು ಕ್ರೀಡಾಂಗಣದಲ್ಲಿ ಮಕ್ಕಳಂತೆ ಓಡಿದರು... ಗೆದ್ದಾಗ ಸಂಭ್ರಮದಿಂದ ಕೇಕೆ ಹಾಕಿದರು... ಸೋತಾಗ ಪರಸ್ಪರ ಚುಟುಕಿನ ಮಾತುಗಳ ಮೂಲಕ ನಗುನಗುತ್ತ ಕೈಕುಲುಕಿದರು... ವೃತ್ತಿ ಬದುಕಿನ ಒತ್ತಡ, ಸ್ಪರ್ಧೆ, ದಾವಂತಗಳನ್ನೆಲ್ಲ ಕ್ಷಣಮಾತ್ರಕ್ಕೆ ಬದಿಗಿಟ್ಟು ಕ್ರೀಡಾ ಸ್ಫೂರ್ತಿ ಯಲ್ಲಿ ಬೆರೆತ ಈ ಅಪರೂಪದ ದೃಶ್ಯಗಳು ನೋಡುಗರ ಮನಸ್ಸಿಗೆ ಹಬ್ಬದ ಸಂಭ್ರಮ ಮೂಡಿಸಿದವು.

ನಗರ ಹೊರವಲಯ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ 30ನೇ ದತ್ತಿ ದಿನಾಚರಣೆ ಹಾಗೂ ಶಿಕ್ಷಣ ದಾರ್ಶನಿಕ ದಿವಂಗತ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರ ಸಿವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಪತ್ರಕರ್ತರ ಸೌಹಾರ್ದ ಕ್ರೀಡಾಕೂಟವು ಕೇವಲ ಆಟೋಟಗಳಿಗೆ ಸೀಮಿತವಾಗದೆ, ಮಾನವೀಯ ಸಂಬಂಧಗಳ ಬೆಸುಗೆಯಾಗಿ ರೂಪು ಗೊಂಡಿತು.

ಇದನ್ನೂ ಓದಿ: Chikkaballapur News: 30 ದಿನಗಳ ಧರಣಿಗೂ ಸ್ಪಂದಿಸದ ಆಡಳಿತದ ವಿರುದ್ಧ ದಸಂಸ ಆಕ್ರೋಶ; 10 ದಿನಗಳಲ್ಲಿ ಪರಿಹಾರ, ಇಲ್ಲದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಇತ್ತೀಚೆಗೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ 20 ವರ್ಷದ ಯುವಕರಿಂದ ಹಿಡಿದು 75 ವರ್ಷದ ಹಿರಿಯ ಪತ್ರಕರ್ತರವರೆಗೆ ಎಲ್ಲರೂ ಕೂಡಿ ಆಟವಾಡಿದ್ದು "ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬ ಕವಿವಾಣಿಯನ್ನು ಅಕ್ಷರಶಃ ಸಾಕ್ಷೀಕರಿಸಿತು.

ಸಾಮಾನ್ಯವಾಗಿ ನಮ್ಮ ವಾಹಿನಿಯಲ್ಲೇ ಸುದ್ದಿ ಮೊದಲು ಪ್ರಸಾರವಾಗಬೇಕು, ನಮ್ಮ ಪತ್ರಿಕೆಯಲ್ಲೇ ಮೊದಲು ಪ್ರಕಟವಾಗಬೇಕು ಎಂಬ ವೃತ್ತಿಪರ ಸ್ಪರ್ಧೆಯಲ್ಲಿ ತೊಡಗಿರುವ ಪತ್ರಕರ್ತರು, ಈ ಬಾರಿ ಗೆಲುವು-ಸೋಲಿನ ಲೆಕ್ಕಾಚಾರವನ್ನೂ ಮರೆತು ಪರಸ್ಪರ ಪ್ರೋತ್ಸಾಹಿಸುತ್ತಾ ಆಟಗಳಲ್ಲಿ ತೊಡಗಿಸಿ ಕೊಂಡಿದ್ದು ವಿಶೇಷವಾಗಿತ್ತು.

45 ವರ್ಷ ಮೇಲ್ಪಟ್ಟ ಪತ್ರಕರ್ತರಿಗಾಗಿ 100 ಮೀಟರ್ ಓಟ, ಬ್ಯಾಸ್ಕೆಟಿಂಗ್ ದಿ ಬಾಲ್, ಬಕೆಟಿಂಗ್ ದಿ ಬಾಲ್, ಗಾಲ್ಫ್ ಹಾಕಿ, ಶಾಟ್‌ಪುಟ್ ಹಾಗೂ ಅನ್‌ಲಕ್ಕಿ ಸ್ಟಾಬ್ ಸ್ಪರ್ಧೆಗಳು ನಡೆದರೆ, ಕಿರಿಯರಿಗಾಗಿ ೧೦೦ ಮೀಟರ್ ಓಟ, ಚೀಲದ ಓಟ, ಉದ್ದಜಿಗಿತ, ಶಾಟ್‌ಪುಟ್, ಗಾಲ್ಫ್ ಹಾಕಿ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ಪ್ರತಿಯೊಂದು ಸ್ಪರ್ಧೆಯಲ್ಲೂ ವಯಸ್ಸನ್ನು ಮರೆತು ಎಲ್ಲರೂ ಉತ್ಸಾಹ ದಿಂದ ಪಾಲ್ಗೊಂಡರು.

cbpm3kvnkiran

ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿದ್ದ ಅಥ್ಲೆಟಿಕ್ಸ್ನಲ್ಲಿ ವೃತ್ತಿಪರ ಅಟಗಾರರಂತೆ ನಾಮುಂದು ತಾಮುಂದು ಎಂಬಂತೆ ಓಡುತ್ತಿದ್ದ ದೃಶ್ಯಗಳು ಮನಸ್ಸಿಗೆ ಮುದ ನೀಡಿದವು. ಈ ವೇಳೆಯೂ ವೃತ್ತಿಯನ್ನು ಮರೆಯದ ಪತ್ರಕರ್ತರು ತಮ್ಮವರ ಚಿತ್ರಗಳನ್ನು ತಾವೇ ಸೆರೆ ಹಿಡಿಯುವ ಮೂಲಕ ತಾವು ಎಲ್ಲೇ ಇದ್ದರೂ ಸುದ್ದಿಸಂಗ್ರಹವನ್ನು ಮರೆಯುವುದಿಲ್ಲ ಎಂಬುದನ್ನು ಸಾರಿದರು.

ಅಂತಿಮವಾಗಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಸುಧಾಕರ್ ನೇತೃತ್ವದ ತಂಡ 6 ಓವರ್‌ಗಳಲ್ಲಿ 74 ರನ್ ಗಳಿಸಿದರೆ, ರಮೇಶ್ ನೇತೃತ್ವದ ತಂಡ 75 ರನ್ ಗಳಿಸಿ ರೋಚಕ ಜಯ ದಾಖಲಿಸಿತು. ಪಂದ್ಯ ದುದ್ದಕ್ಕೂ ಆಟಗಾರರ ಉತ್ಸಾಹ ಮತ್ತು ಪ್ರೇಕ್ಷಕರ ಚಪ್ಪಾಳೆಗಳು,ಪತ್ರಕರ್ತರೇ ಮಾಡಿದ ಕಾಮೆಂಟರಿ ಮೈದಾನಕ್ಕೆ ಜೀವ ತುಂಬಿದವು.

ಕ್ರೀಡಾಕೂಟದ ಬಳಿಕ ಪತ್ರಕರ್ತರಿಗೆ ಆಯೋಜಿಸಿದ್ದ ಭರ್ಜರಿ ಭೋಜನವು ಮತ್ತಷ್ಟು ಆತ್ಮೀಯತೆ ಯ ವಾತಾವರಣ ಸೃಷ್ಟಿಸಿತು.

cbpm3k

30 ವರ್ಷಗಳ ವಿಶಿಷ್ಟ ಪರಂಪರೆ

ಕರ್ನಾಟಕದ ಇತಿಹಾಸದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊAದು ತನ್ನ ದತ್ತಿ ದಿನಾಚರಣೆಯ ಅಂಗ ವಾಗಿ ಸತತ 30 ವರ್ಷಗಳಿಂದ ತನ್ನ ಸಂಸ್ಥೆಯ ಉದ್ಯೋಗಿಗಳು ನೌಕರರು ಸಿಬ್ಬಂದಿಯ ಜತೆಗೆ ಪತ್ರಕರ್ತರಿಗಾಗಿಯೇ ವಿಶೇಷ ಕ್ರೀಡಾಕೂಟ ಆಯೋಜಿಸುತ್ತಿರುವುದು ಅಪರೂಪದ ಸಾಮಾಜಿಕ ಬಾಂಧವ್ಯದ ಮಾದರಿಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್, 3 ಬಾರಿ ಶಾಸರಾಗಿ ಜನಾನುರಾಗಿ ನಾಯಕರಾಗಿದ್ದ ಸಿವಿ.ವೆಂಕಟರಾಯಪ್ಪ ಅವರು 1960ರ ದಶಕದಲ್ಲೇ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮುನ್ಸಿಮಪಾಲಿಟಿ ಮೂಲಕ ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳೇ ಇಲ್ಲದ ಕಾಲದಲ್ಲಿ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಬರಡು ನೆಲದಲ್ಲೇ ಅಕ್ಷರದ ಬೀಜ ಬಿತ್ತಿದರು.ಪರಿಣಾಮವಾಗಿ ಇಂದು ಚಿಕ್ಕಬಳ್ಳಾಪುರ "ಶಿಕ್ಷಣ ಕಾಶಿ"ಯಾಗಿ ಗುರುತಿಸಿಕೊಂಡಿದೆ ಎಂಬುದನ್ನು ಸ್ಮರಿಸಿದರು.

ದತ್ತಿ ದಿನಾಚರಣೆಯನ್ನು ಒಂದು ತಿಂಗಳ ಕಾಲ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾಕ ಸೌಂದರ್ಯ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದ್ದು, ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ಒಂದೇ ಕುಟುಂಬದಂತೆ ಭಾಗವಹಿಸುತ್ತಿರುವುದು ವಿಶೇಷ ಎಂದರು.

ದತ್ತಿ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗುವ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಂಸ್ಥೆಯ ಅತ್ಯಂತ ಹೆಮ್ಮೆಯ ಸೇವಾ ಕಾರ್ಯಕ್ರಮವಾಗಿದೆ ಎಂದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದರು.

"ನಮ್ಮ ಸಂಸ್ಥೆಯ 400ಕ್ಕೂ ಹೆಚ್ಚು ಬೋಧಕ, ಬೋಧಕೇತರ ಸಿಬ್ಬಂದಿಯ ಮುತುವರ್ಜಿಯಲ್ಲಿ ಮಾನವೀಯ ನೆಲೆಗಟ್ಟಿನ ಮೇಲೆ ನಡೆಯುತ್ತಿರುವ ರಕ್ತದಾನ ಶಿಬಿರ ನನಗೆ ಅತ್ಯಂತ ಸಂತೋಷ ಮತ್ತು ಆತ್ಮತೃಪ್ತಿ ನೀಡುವ ಕಾರ್ಯಕ್ರಮವಾಗಿದೆ. 2016ರಿಂದ ಈ ಶಿಬಿರ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪರವಾಗುತ್ತಾ ಬೆಳೆಯುತ್ತಿದೆ. ಪ್ರತಿ ವರ್ಷ ರಕ್ತದಾನಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿರುವುದು ದತ್ತಿ ದಿನಾಚರಣೆಯ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ" ಎಂದು ಹೇಳಿದರು.

"2024ರಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ರೈನ್‌ಕೋಟ್ ಧರಿಸಿಕೊಂಡೇ ನೂರಾರು ದಾನಿಗಳು ಬಂದು ರಕ್ತದಾನ ಮಾಡಿದ್ದು ನಮ್ಮ ಸೇವಾ ಕಾರ್ಯಕ್ಕೆ ಜನರಿರುವ ಬದ್ಧತೆ ಯನ್ನು ತೋರಿಸಿತು. 2025ರಲ್ಲಿ 2850 ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿತ್ತು. ಈ ಬಾರಿ ಅದನ್ನೂ ಮೀರಿ ಇನ್ನಷ್ಟು ರಕ್ತ ಸಂಗ್ರಹಿಸುವ ಗುರಿಯೊಂದಿಗೆ ಸಿದ್ಧತೆ ನಡೆಸಿದ್ದೇವೆ" ಎಂದು ನವೀನ್ ಕಿರಣ್ ತಿಳಿಸಿದರು.

2004ರಿಂದ ನಿರಂತರವಾಗಿ ಆಯೋಜಿಸಲಾಗುತ್ತಿರುವ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಂಸ್ಥೆಯ ಹೆಮ್ಮೆಯ ಸೇವಾ ಕಾರ್ಯಕ್ರಮವಾಗಿದ್ದು, ಈ ಬಾರಿಯೂ 4 ಸಾವಿರಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ವೇಳೆ, ಸಾರ್ವಜನಿಕ ಸಂಪರ್ಕಾಧಿಕಾರಿ ಎನ್.ವೆಂಕಟೇಶ್, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವೆಂಕಟೇಶ್ ಮತ್ತಿತರರು ಇದ್ದರು.