ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾನೂನು ಪಾಲಿಸಿದಾಗಲೇ ನ್ಯಾಯ ಸಿಗಲು ಸಾಧ್ಯ: ನ್ಯಾ. ಟಿ.ಪಿ.ರಾಮಲಿಂಗೇಗೌಡ

ಹಕ್ಕುಗಳಷ್ಟೇ ಕರ್ತವ್ಯಗಳ ಪಾಲನೆಯೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ನ್ಯಾಯಾಲಯ ದ ಹೊರಗೆ ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಸಮಯ, ಹಣ ಹಾಗೂ ಸಂಬಂಧಗಳು ಉಳಿಯುತ್ತವೆ. ಸಣ್ಣಪುಟ್ಟ ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿ ಕೊಳ್ಳಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ

ಕಾನೂನು ಪಾಲಿಸಿದಾಗಲೇ ನ್ಯಾಯ ಸಿಗಲು ಸಾಧ್ಯ

-

Profile
Ashok Nayak Jul 13, 2026 11:28 AM

ಚಿಕ್ಕಬಳ್ಳಾಪುರ: ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ಪಾಲಿಸಿದಾಗ ಮಾತ್ರ ನ್ಯಾಯಾಲಯದಿಂದ ನ್ಯಾಯ ಹಾಗೂ ನೆರವು ದೊರೆಯಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ನಡೆದ 2026ನೇ ಸಾಲಿನ ಎರಡನೇ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ ಗೆ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಿಷ್ಪಕ್ಷಪಾತ ನ್ಯಾಯದಾನಕ್ಕೆ ಅಡಿಪಾಯ ಹಾಕಿದ್ದರು. "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ಬಸವಣ್ಣನವರ ತತ್ವ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಹಕ್ಕುಗಳಷ್ಟೇ ಕರ್ತವ್ಯಗಳ ಪಾಲನೆಯೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ನ್ಯಾಯಾಲಯದ ಹೊರಗೆ ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಸಮಯ, ಹಣ ಹಾಗೂ ಸಂಬಂಧಗಳು ಉಳಿಯುತ್ತವೆ. ಸಣ್ಣಪುಟ್ಟ ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chinthamani News: ವಯೋನಿವೃತ್ತ ವೆಂಕಟಚಲಪತಿ ಎನ್.ದಂಪತಿಗೆ ಗಣ್ಯರಿಂದ ಆತ್ಮೀಯ ಸನ್ಮಾನ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಆಸ್ತಿ ಹಾಗೂ ಕುಟುಂಬ ಕಲಹಗಳನ್ನು ಆರಂಭದಲ್ಲೇ ಬಗೆಹರಿಸಿಕೊಂಡರೆ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ತಪ್ಪುತ್ತದೆ. ನ್ಯಾಯಾ ಲಯದ ವ್ಯಾಜ್ಯಗಳಿಂದ ಸಂಬಂಧಗಳು ಹದಗೆಡುವುದರ ಜತೆಗೆ ದ್ವೇಷ ಮತ್ತು ಅಸೂಯೆ ಹೆಚ್ಚಾಗು ತ್ತದೆ. ಪ್ರತಿಷ್ಠೆಗಿಂತ ಸಂಬಂಧಗಳಿಗೆ ಹೆಚ್ಚಿನ ಮೌಲ್ಯ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ನೀಡಿದ ಮಾಹಿತಿಯಂತೆ, ಜಿಲ್ಲೆಯ ವಿವಿಧ ನ್ಯಾಯಾ ಲಯಗಳಲ್ಲಿ ಬಾಕಿ ಇರುವ 54,292 ಪ್ರಕರಣಗಳ ಪೈಕಿ 10,731 ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ಗೆ ಗುರುತಿಸಲಾಗಿದ್ದು, ಅವುಗಳಲ್ಲಿ 8096 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.

ಇದೇ ರೀತಿ, ವ್ಯಾಜ್ಯಪೂರ್ವ ಹಂತದಲ್ಲಿದ್ದ 14,674 ಪ್ರಕರಣಗಳ ಪೈಕಿ 12,819 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಬ್ಯಾಂಕ್ ಸಾಲ ವಸೂಲಾತಿ, ಚೆಕ್ ಅಮಾನ್ಯ, ರಸ್ತೆ ಸಂಚಾರ ನಿಯಮ ಉಲ್ಲಂಘನೆ, ಮರಳು ಸಾಗಣೆ ಹಾಗೂ ರಾಜಿಯಾಗಬಹುದಾದ ಅಪರಾಧ ಪ್ರಕರಣಗಳು ಸೇರಿದಂತೆ ಒಟ್ಟು ರೂ.15.83 ಕೋಟಿ ಮೊತ್ತದ ಆರ್ಥಿಕ ವ್ಯವಹಾರಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

law 13

ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪ, ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜು, ಸಿದ್ದಣ್ಣ, ಉಮೇಶ್, ಭಾರತಿದೇವಿ, ಶ್ರೀಪ್ರೇಮ್, ಮಹಾಲಕ್ಷ್ಮಿ, ಹಿರಿಯ ವಕೀಲ ಪ್ರಕಾಶ್, ವಕೀಲರು ಹಾಗೂ ಕಕ್ಷಿದಾರರು ಉಪಸ್ಥಿತರಿದ್ದರು.

27 ಸಾವಿರ ಸಾಲಕ್ಕೆ 3.45 ಲಕ್ಷ ಪಾವತಿ ಸಂಕಷ್ಟ

ಸರ್ಕಾರಿ ಶಾಲಾ ಶಿಕ್ಷಕರೊಬ್ಬರು 27 ಸಾವಿರ ಸಾಲ ಪಡೆಯುವ ವೇಳೆ ನೀಡಿದ್ದ ಖಾಲಿ ಚೆಕ್ ಕಾರಣ ವಾಗಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು, 3.40 ಲಕ್ಷ ಪಾವತಿಸುವ ಪರಿಸ್ಥಿತಿ ಎದುರಿಸಿ ಬಂಧನದ ಬೀತಿಯಲ್ಲಿದ್ದರು. ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡ ಬಳಿಕ, "ಯಾರೂ ಖಾಲಿ ಚೆಕ್ ನೀಡಿ ಸಾಲ ಪಡೆಯಬೇಡಿ. ನನ್ನಂತೆ ನ್ಯಾಯಾಲಯ, ಪೊಲೀಸ್ ಠಾಣೆ ಅಲೆದಾಡುವ ಪರಿಸ್ಥಿತಿ ಬರಬಾರದು" ಎಂದು ನಿವೃತ್ತ ಶಿಕ್ಷಕ ಶೇಷಗಿರಿರಾವ್ ಸಾರ್ವಜನಿಕರಿಗೆ ಮನವಿ ಮಾಡಿದರು.

15 ವರ್ಷಗಳ ಬಳಿಕ ಸಿಕ್ಕಿತು ಅಪಘಾತ ಪರಿಹಾರ

15 ವರ್ಷಗಳ ಹಿಂದೆ ಟ್ರ‍್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟ ಮಂಡಿಕಲ್ ಗ್ರಾಮದ ನಯಾಜ್ ಪಾಷಾ ಕುಟುಂಬಕ್ಕೆ ಶನಿವಾರದ ಲೋಕ ಅದಾಲತ್‌ನಲ್ಲಿ ಕೊನೆಗೂ ನ್ಯಾಯ ದೊರೆಯಿತು. ವಿಮೆಯಿಲ್ಲದ ಟ್ರ‍್ಯಾಕ್ಟರ್ ಪ್ರಕರಣ 15 ವರ್ಷಗಳಿಂದ ನ್ಯಾಯಾಲಯದಲ್ಲಿದ್ದು, ರಾಜಿ ಸಂಧಾನದ ಮೂಲಕ 7 ಲಕ್ಷ ಪರಿಹಾರ ನೀಡಲು ಒಪ್ಪಂದವಾಗಿ ಕುಟುಂಬದ ದೀರ್ಘಕಾಲದ ಹೋರಾಟಕ್ಕೆ ತೆರೆ ಬಿದ್ದಿತು.

ನ್ಯಾಯಾಧೀಶರ ಕೊಠಡಿ ಬಳಿ ಮಾಟಮಂತ್ರ; ಮಹಿಳೆ ಬಂಧನ
ನ್ಯಾಯಾಧೀಶರು ತಮ್ಮ ಪರವಾಗಿ ತೀರ್ಪು ನೀಡಲಿ ಎಂಬ ಉದ್ದೇಶದಿಂದ ನ್ಯಾಯಾಧೀಶರ ಕೊಠಡಿ ಬಳಿ ಬಿಳಿ ಸಾಸಿವೆ ಸೇರಿದಂತೆ ಮಾಟಮಂತ್ರಕ್ಕೆ ಬಳಸುವ ವಸ್ತುಗಳನ್ನು ಎಸೆದ ಮಹಿಳೆಯನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ತಿಳಿಸಿದರು.

ಮೂಢನಂಬಿಕೆಗಳಿಗೆ ಒಳಗಾಗದೆ, ಸಾಕ್ಷ್ಯಾಧಾರಗಳ ಮೂಲಕವೇ ನ್ಯಾಯ ಪಡೆಯಬೇಕು. ತಪ್ಪು ಮಾಡಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.