ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokayukta News: ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯ ರೆಕಾರ್ಡ್‌ ರೂಂ, ಎಡಿಎಲ್‌ಆರ್‌ ಕಚೇರಿಗೆ ಲೋಕಾಯುಕ್ತ ಲಗ್ಗೆ

ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲದ ಜಮೀನುಗಳನ್ನು ದರಖಾಸ್ತು ಮೂಲಕ ಪ್ರಭಾವಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾ ಯುಕ್ತ(Lokayukta) ಅಧಿಕಾರಿಗಳು ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯ ರೆಕಾರ್ಡ್‌ ರೂಂ ಹಾಗೂ ಎಡಿಎಲ್‌ಆರ್‌ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದರು.

ಸರ್ಕಾರಿ ಕೆರೆ ಜಮೀನು ಖಾಸಗಿ ವ್ಯಕ್ತಿಗೆ ಮಂಜೂರು ಆರೋಪ

-

Profile
Ashok Nayak Sep 18, 2026 10:06 PM

ಚಿಕ್ಕಬಳ್ಳಾಪುರ: ಸರ್ಕಾರಿ ಕರಾಬು, ಕೆರೆ-ಕುಂಟೆ, ಅರಣ್ಯಭೂಮಿ, ಗೋಮಾಳ ಸೇರಿದಂತೆ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲದ ಜಮೀನುಗಳನ್ನು ದರಖಾಸ್ತು ಮೂಲಕ ಪ್ರಭಾವಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ(Lokayukta) ಅಧಿಕಾರಿಗಳು ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯ ರೆಕಾರ್ಡ್‌ ರೂಂ ಹಾಗೂ ಎಡಿಎಲ್‌ಆರ್‌ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಸರ್ವೆ ನಂ.67ರಲ್ಲಿ 17 ಗುಂಟೆ ಸರ್ಕಾರಿ ಖರಾಬು ಕೆರೆ-ಕುಂಟೆ ಜಮೀನನ್ನು 2002ರಲ್ಲಿ ಗ್ರಾಮದ ವೆಂಕಟರಾಯಪ್ಪ ಅವರ ಪುತ್ರ ನಾಗರಾಜ್ ಎಂಬವರಿಗೆ ದರಖಾಸ್ತು ಮೂಲಕ ಮಂಜೂರು ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು.

ನಾಗರಾಜ್ ಅವರ ಹೆಸರಿನಲ್ಲಿ ಈಗಾಗಲೇ 3 ಎಕರೆ 22 ಗುಂಟೆ ಜಮೀನು ಇದ್ದರೂ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೆರೆ ಜಮೀನು ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. 

ಇದನ್ನೂ ಓದಿ: Lokayukta Raid: ಎರಡೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ; ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್‌ಚಂದ್ರ ಲೋಕಾಯುಕ್ತ ಬಲೆಗೆ

ಇದರಿಂದ ಗ್ರಾಮದಲ್ಲಿ ಜಾನುವಾರುಗಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ ಮೂಲವಾಗಿದ್ದ ಕೆರೆ ಜಮೀನು ಇಲ್ಲದಂತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಿ ಕೆರೆ ಜಮೀನನ್ನು ಸಾರ್ವಜನಿಕ ಬಳಕೆಗೆ ಉಳಿಸಬೇಕು ಎಂದು ಗ್ರಾಮದ ಹಿರಿಯ ನಾಗರಿಕ ಎಸ್‌.ಸೂರ್ಯನಾರಾಯಣ ರಾವ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ, ಡಿವೈಎಸ್‌ಪಿ ಹಾಗೂ ಸಿಬ್ಬಂದಿ ಏಕಕಾಲದಲ್ಲಿ ಎರಡೂ ಕಚೇರಿಗಳಿಗೆ ತೆರಳಿ, ಜಮೀನು ಮಂಜೂರು ಮಾಡಿದ ಅಧಿಕಾರಿಗಳು, ಕಡತಗಳು ಹಾಗೂ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಸಿದರು.

ಸರ್ಕಾರಿ ಭೂಮಿಯ ಅಕ್ರಮ ಮಂಜೂರಾತಿ ಕುರಿತು ದೂರುಗಳು ಮುಂದುವರಿಯುತ್ತಿರುವುದು ಕಂದಾಯ ಇಲಾಖೆಯ ಮೇಲ್ವಿಚಾರಣೆ ಮತ್ತು ದಾಖಲೆ ನಿರ್ವಹಣೆ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.