BESCOM Privatization: ಬೆಸ್ಕಾಂ ಖಾಸಗೀಕರಣದ ವಿರುದ್ದ ಬೃಹತ್ ಪ್ರತಿಭಟನೆ
ರಾಜ್ಯ ಸರ್ಕಾರವು ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಗೊಳಿಸಲು ಮುಂದಾಗಿರುವ ನಿರ್ಧಾರವನ್ನು ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಇನ್ನಿತರೆ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಂದಿ ರೈತರು, ಬೆಸ್ಕಾಂ ಇಲಾಖೆ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು
-
ಗೌರಿಬಿದನೂರು: ರಾಜ್ಯ ಸರ್ಕಾರವು ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಗೊಳಿಸಲು ಮುಂದಾಗಿರುವ ನಿರ್ಧಾರವನ್ನು ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಇನ್ನಿತರೆ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಂದಿ ರೈತರು, ಬೆಸ್ಕಾಂ ಇಲಾಖೆ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಬೆಸ್ಕಾಂ ಉಪ ವಿಭಾಗದ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ, ಖಾಸಗೀಕರಣದಿಂದ ರೈತರಿಗೆ ದ್ವಿಗುಣ ಹೊರೆ ಯಾಗಲಿದೆ. ಕೇವಲ 10 ಹೆಚ್.ಪಿ ವಿದ್ಯುತ್ ಅಗತ್ಯವಿರುವ ಕಡೆ 15-20 ಹೆಚ್.ಪಿ ವಿದ್ಯುತ್ ಪೂರೈಕೆಯಾಗುತ್ತಿದ್ದು, ಇದರಿಂದ ರೈತರಿಗೆ ಅನಗತ್ಯ ವಿದ್ಯುತ್ ಬಿಲ್ ಪಾವತಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದನ್ನೂ ಓದಿ: BESCOM privatization: ವಿದ್ಯುತ್ ಖಾಸಗೀಕರಣವಾದಲ್ಲಿ ಸಾಮಾಜಿಕ ನ್ಯಾಯ ಅರಣ್ಯರೋಧವಾಗಲಿದೆ: AEE ವೇಣುಗೋಪಾಲ್ ಎಚ್ಚರಿಕೆ
ಅಲ್ಲದೆ, ವಿದ್ಯುತ್ ಸೋರಿಕೆ ಮತ್ತು ಹೆಚ್ಚುವರಿ ಯೂನಿಟ್ ಶುಲ್ಕದ ಹೊಣೆಯನ್ನು ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿದರು. ಈ ವಿಷಯದಲ್ಲಿ ರಾಜ್ಯದ ಯಾವುದೇ ರಾಜಕೀಯ ಪಕ್ಷಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸ್ಪಷ್ಟ ನಿಲುವು ತಾಳುತ್ತಿಲ್ಲ ಎಂದು ದೂರಿದರು.
ಬೆಸ್ಕಾಂ ಎಇಇ ಪರಮೇಶ್ವರಪ್ಪ ಮಾತನಾಡಿ, ಖಾಸಗೀಕರಣವಾದರೆ ಆರಂಭದಲ್ಲಿ ಆಕರ್ಷಕ ದರಗಳ ಆಮಿಷ ತೋರಿಸಬಹುದು, ಆದರೆ ದೀರ್ಘಾವಧಿಯಲ್ಲಿ ಇದು ಗ್ರಾಹಕರಿಗೆ ಮಾರಕವಾಗ ಲಿದೆ. ಖಾಸಗಿ ಕಂಪನಿಗಳ ಲಾಭದ ಉದ್ದೇಶ ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಸವಲತ್ತುಗಳಿಗೆ ಕುತ್ತು ತರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ, ರೈತ ಸಂಘಟನೆಗಳು ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಸೀಲ್ದಾರ್ ಅರವಿಂದ್ ಕೆ.ಎಂ. ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರರು, ಕೂಡಲೇ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರವಿಚಂದ್ರರೆಡ್ಡಿ, ಮುದ್ದುರಂಗಪ್ಪ, ರಮಣಾರೆಡ್ಡಿ, ರಾಮಚಂದ್ರ ರೆಡ್ಡಿ, ಸನತ್ ಕುಮಾರ್, ಸುರೇಶ್, ಗೋವಿಂದ ರಾಜು, ನರಸರೆಡ್ಡಿ, ಗೋಪಿ, ಕಾಂತಪ್ಪ, ಜಿ.ಸಿ. ನಾರಾಯಣಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ನರೇಂದ್ರ ರೆಡ್ಡಿ, ಹಾಗೂ ಬೆಸ್ಕಾಂ ಇಲಾಖೆಯ ಎಲ್ಲಾ ಶ್ರೇಣಿಯ ನೌಕರರು ಭಾಗವಹಿಸಿದ್ದರು.