Chinthamani News: ಕೋಮು ಸೌಹಾರ್ದತೆಗೆ ಮಾದರಿಯಾಗಲಿ ಮುರುಗಮಲ್ಲ ಉರುಸ್: ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ
ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆ ಒದಗಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಣೆ ಯಾದ ಮಕ್ಕಳು ಅಥವಾ ವಸ್ತುಗಳ ಕುರಿತು ಮಾಹಿತಿ ನೀಡಲು ಧ್ವನಿವರ್ಧಕಗಳ ಸೌಲಭ್ಯವನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು.
-
ಚಿಂತಾಮಣಿ: ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮುರುಗಮಲ್ಲ ಗ್ರಾಮದಲ್ಲಿ ಆ.26 ಮತ್ತು 27 ರಂದು ನಡೆಯಲಿರುವ ಹಜರತ್ ಅಮ್ಮಾಜಾನ್ ಬಾವಾಜಾನ್ ಅವರ ವಾರ್ಷಿಕ ಉರುಸ್ ಮಹೋತ್ಸವದ ಹಿನ್ನೆಲೆಯಲ್ಲಿ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಯ ವತಿಯಿಂದ ಉಭಯ ಧರ್ಮಗಳ ಪ್ರಮುಖ ಮುಖಂಡರು ಹಾಗೂ ದರ್ಗಾ ಕಮಿಟಿ ಪದಾಧಿಕಾರಿ ಗಳ ಜೊತೆ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉರುಸ್ ಸಂದರ್ಭದಲ್ಲಿ ಶಾಂತಿ,ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಪ್ರಮುಖ ಸೂಚನೆಗಳು ಹಾಗೂ ನಿರ್ದೇಶನಗಳನ್ನು ನೀಡಿದರು.
ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ, ಜನಸಂದಣಿ ಯನ್ನು ಸುಲಭವಾಗಿ ನಿರ್ವಹಿಸಲು ಹಾಗೂ ಗುರುತಿಸಲು ಕಮಿಟಿ ವತಿಯಿಂದ ಪರಿಚಿತ ಸ್ವಯಂ ಸೇವಕರನ್ನು ಚೆಕ್‌ಪೋಸ್ಟ್‌ಗಳು ಮತ್ತು ಮುಖ್ಯ ಸ್ಥಳಗಳಲ್ಲಿ ನಿಯೋಜಿಸಬೇಕು.
ಇದನ್ನೂ ಓದಿ: Chinthamani News: ಅಭಿಮಾನಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಯುವ ನಾಯಕ ಅಬ್ದುಲ್ ಸಮದ್ ಬರ್ತ್‌ಡೇ ಸಂಭ್ರಮ!
ಭಕ್ತಾದಿಗಳ ಭದ್ರತೆಗಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಬೇಕು ಮತ್ತು ಬೆಳಕಿನ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಬೇಕು.
ಬೆಂಕಿ ಅವಘಡಗಳನ್ನು ತಡೆಯಲು ಪಾರ್ಕಿಂಗ್ ಸ್ಥಳಗಳು ಸೇರಿದಂತೆ ಪ್ರಮುಖ ಜಾಗಗಳಲ್ಲಿ ಅಗ್ನಿಶಾಮಕ ವಾಹನ ಹಾಗೂ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು.
ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಸ್ಯುಕ್ತವಾಗಿ ಒದಗಿಸಬೇಕು.ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಣೆಯಾದ ಮಕ್ಕಳು ಅಥವಾ ವಸ್ತುಗಳ ಕುರಿತು ಮಾಹಿತಿ ನೀಡಲು ಧ್ವನಿವರ್ಧಕಗಳ ಸೌಲಭ್ಯವನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು.
ಸಭೆಯಲ್ಲಿ ಭಾಗವಹಿಸಿದ್ದ ಉಭಯ ಧರ್ಮಗಳ ಮುಖಂಡರು ಹಾಗೂ ಮುರುಗಮಲ್ಲ ಕಮಿಟಿಯ ಸದಸ್ಯರು, ಉರುಸ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಶಾಂತಿಯುತವಾಗಿ ನಡೆಸಿಕೊಡಲು ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗ್ರೇಟ್ -2 ತಹಸಿಲ್ದಾರ್ ರಾಜೇಂದ್ರ, ವಕ್ಫ್ ಬೋರ್ಡ್ ಅಧಿಕಾರಿ ಶಾಮ್ಸ್,ದರ್ಗಾ ಮೇಲ್ವಿಚಾರಕರಾದ ತಯೂಬ್ ನವಾಜ್, ವಕ್ಫ್ ಬೋರ್ಡ್ ಸಿಬ್ಬಂದಿ ನವಾಜ್,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್, ಟೊಮೇಟೊ ಗೌಸ್ ಪಾಷಾ, ಆರಿಫ್ ಖಾನ್,ವಕೀಲರಾದ ಅನ್ವರ್ ಖಾನ್, ಅಮೀರ್ ಜಾನ್, ಮುನಿರಾಜು, ಅಲ್ಲಬಕಾಶ್, ನಾಜಿರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಮೂರ್ತಿ, ಅಥಾವುಲ್ಲಾ, ವೆಂಕಟ್ರೋಣಪ್ಪ,ಜಬೀ ಉಲ್ಲಾ,ಬಾಬಾಜಾನ್ ಸೇರಿದಂತೆ ದರ್ಗಾ ಮುಜಾವರಗಳು ಗ್ರಾಮದ ಹಾಗೂ ಸುತ್ತಮುತ್ತಲಿನ ಹಿಂದೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.