Chikkaballapur News: ವಿದ್ಯಾರ್ಥಿ ಪರಿಷತ್ ಅಕಾಡೆಮಿಕ್ ಹಾಗೂ ಸೇವಾ ಪರಂಪರೆಯನ್ನು ಎತ್ತಿ ಹಿಡಿಯಲಿ: ಡಾ.ಕೋಡಿ ರಂಗಪ್ಪ
ಶಾಲೆ ಹಾಗೂ ಕಾಲೇಜು ಹಂತದಲ್ಲಿನ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಗಳನ್ನು ಬೆಳೆಸಲು ಅತ್ಯುತ್ತಮ ವೇದಿಕೆಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಟುಂಬ, ಶಾಲೆ, ಸಮಾಜ, ಕೈಗಾರಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಸಮರ್ಥ ನಾಯಕತ್ವ ಅಗತ್ಯವಿದ್ದು, ಅದರ ಅಡಿಪಾಯ ವಿದ್ಯಾರ್ಥಿ ಜೀವನದಲ್ಲೇ ನಿರ್ಮಾಣವಾಗಬೇಕು
-
ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಪ್ರತಿಯೊಬ್ಬ ವಿದ್ಯಾರ್ಥಿಯ ಆಶಯ ಗಳಿಗೆ ಸ್ಪಂದಿಸುವುದರ ಜೊತೆಗೆ ಸಂಸ್ಥೆಯ ಅಕಾಡೆಮಿಕ್ ಶ್ರೇಷ್ಠತೆ, ವ್ಯಕ್ತಿತ್ವ ವಿಕಸನ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿ ರಂಗಪ್ಪ ಹೇಳಿದರು.
ಶಾಂತ ಆರೋಗ್ಯ ವಿಜ್ಞಾನ ಕಾಲೇಜುಗಳಲ್ಲಿ ಡಿಜಿಟಲ್ ಚುನಾವಣೆಯ ಮೂಲಕ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಶಾಲೆ ಹಾಗೂ ಕಾಲೇಜು ಹಂತದಲ್ಲಿನ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಗಳನ್ನು ಬೆಳೆಸಲು ಅತ್ಯುತ್ತಮ ವೇದಿಕೆಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಟುಂಬ, ಶಾಲೆ, ಸಮಾಜ, ಕೈಗಾರಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಸಮರ್ಥ ನಾಯಕತ್ವ ಅಗತ್ಯವಿದ್ದು, ಅದರ ಅಡಿಪಾಯ ವಿದ್ಯಾರ್ಥಿ ಜೀವನದಲ್ಲೇ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಆತ್ಮವಿಶ್ವಾಸ, ಜವಾಬ್ದಾರಿತನ, ಸಮಯಪಾಲನೆ, ಸಂಘಟನಾ ಕೌಶಲ್ಯ, ಪರಿಣಾಮಕಾರಿ ಸಂವಹನ ಹಾಗೂ ಉತ್ತರದಾಯಿತ್ವದಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವೃತ್ತಿಪರ ಶಿಕ್ಷಣದಲ್ಲಿ ನಾಯಕತ್ವ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
"ನಾಳಿನ ನಾಯಕರು ಇಂದಿನ ಶಾಲೆ-ಕಾಲೇಜುಗಳಲ್ಲೇ ರೂಪುಗೊಳ್ಳುತ್ತಾರೆ" ಎಂಬ ಮಾತಿನಂತೆ, ಶಿಕ್ಷಣ ಸಂಸ್ಥೆಗಳು ಅಕಾಡೆಮಿಕ್ ಕಲಿಕೆಯೊಂದಿಗೆ ನಾಯಕತ್ವದ ಆದರ್ಶಗಳು ಮತ್ತು ಮೌಲ್ಯ ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಪರಿಕಲ್ಪನೆ, ಅದರ ಅಗತ್ಯತೆ ಹಾಗೂ ಉತ್ತಮ ನಾಯಕರಾಗಿ ರೂಪುಗೊಳ್ಳುವ ಬಗ್ಗೆ ಅರಿವು ಮೂಡುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ತಂತ್ರಜ್ಞಾನದ ನೆರವಿನಿಂದ ಡಿಜಿಟಲ್ ಸ್ವರೂಪದಲ್ಲಿ ಯಶಸ್ವಿಯಾಗಿ ಆಯೋಜಿಸಿದ ಸಹಾಯಕ ಪ್ರಾಧ್ಯಾಪಕರಾದ ಅನುಷ್, ವಿನಯ್ ಹಾಗೂ ಪ್ರಾರ್ಥನಾ ಅವರ ತಂಡವನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಚುನಾವಣೆಯಲ್ಲಿ ಒಟ್ಟು 1,164 ವಿದ್ಯಾರ್ಥಿಗಳು ಮತದಾನ ಮಾಡಿದ್ದು, ಪರಿಷತ್ತಿನ ಅಧ್ಯಕ್ಷರಾಗಿ ಡೆನಿಸ್ ಲಾಲು, ಉಪಾಧ್ಯಕ್ಷರಾಗಿ ಅಲ್ಫಿನ್, ಪ್ರಧಾನ ಕಾರ್ಯದರ್ಶಿಯಾಗಿ ದಿಯಾ ನಸ್ರೀನ್, ಖಜಾಂಚಿಯಾಗಿ ಕೀರ್ತನ ಕಿಶೋರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕುಶಲ್ ಗೌಡ ಸೇರಿದಂತೆ ವಿವಿಧ ವಿಭಾಗಗಳಿಗೆ ಒಟ್ಟು 19 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ.
ಶಾಂತ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ಪ್ರಾಧ್ಯಾಪಕ ಡಾ.ನವೀನ್ ಸೈಮನ್ ಮಾತನಾಡಿ, ಕಾಲೇಜು ಪರಿಷತ್ತಿನ ಪ್ರತಿನಿಧಿಗಳು ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡುವಂತೆ ಕರೆ ನೀಡಿದರು.
ಅಭಿನಂದನಾ ಸಮಾರಂಭದಲ್ಲಿ ಬೋಧಕ ವರ್ಗದ ಶ್ರೀಧರ್, ಓಎಸ್, ಸುರೇಶ್, ಸಂದೇಶ್, ವಿನಯ್, ಮುದಸೀರ್, ಸಚಿನ್, ಅನುಷ್, ಸುಭಾಷಿಣಿ, ಬೃಂದಾ, ಬ್ಯೂಟಿ, ಪ್ರಾರ್ಥನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.