ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಗಲಾಟೆ ಗದ್ದಲ ನಡುವೆ ಕೈಕೈ ಮಿಲಾಯಿಸಿದ ಕಾರ್ಯಕರ್ತರು; ಪರಿಸ್ಥಿತಿ ನಿಯಂತ್ರಿಸಲು ಹಿರಿಯ ನಾಯಕರ ಹರಸಾಹಸ ಪೊಲೀಸರ ಮಧ್ಯ ಪ್ರವೇಶ

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ. ಎಂ.ಸಿ.ಸುಧಾಕರ್(Dr M C Sudhakar) ಹಾಗೂ ಶಿಡ್ಲಘಟ್ಟದ ಮುಖಂಡ ರಾಜೀವ್ ಗೌಡ ಅವರ ಬೆಂಬಲಿಗರ ನಡುವೆ ಪಕ್ಷದ ಸಂಘಟನೆ ಹಾಗೂ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಕುರಿತು ಪ್ರಾರಂಭ ವಾದ ಮಾತಿನ ಚಕಮಕಿ ಕೊನೆಗೆ ತಳ್ಳಾಟ ನೂಕಾಟದ ಜೊತೆಗೆ ಕೈ ಕೈ ಮಿಲಾಯಿಸುವ ಹಂತ ಮುಟ್ಟಿರುವುದು ವಿಪರ್ಯಾಸ.

ಎಐಸಿಸಿ ವೀಕ್ಷಕರ ಎದುರೇ ಕಾಂಗ್ರೆಸ್ ಕಿತ್ತಾಟ ಬಹಿರಂಗ

-

Profile
Ashok Nayak Jul 26, 2026 1:19 PM

ಚಿಕ್ಕಬಳ್ಳಾಪುರ: ಎಐಸಿಸಿ(AICC) ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ  'ಸಂಘಟನ್ ಸೃಜನ್' ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ  ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್ ಪುಟ್ಟು ಅಂಜಿನಪ್ಪ, ಮತ್ತು ರಾಜೀವ್ ಗೌಡ 
 ಬೆಂಬಲಿಗರ ನಡುವೆ ಬಾರೀ  ಮಾತಿನ ಚಕಮಕಿ ನಡೆದಿದೆ. ಈ  ಗದ್ದಲ ತಾರಕಕ್ಕೇರಿ ತಳ್ಳಾಟ ನೂಕಾಟ ದ ಜತೆಗೆ, ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ. ಎಂ.ಸಿ.ಸುಧಾಕರ್(Dr M C Sudhakar) ಹಾಗೂ ಶಿಡ್ಲಘಟ್ಟದ ಮುಖಂಡ ರಾಜೀವ್ ಗೌಡ ಅವರ ಬೆಂಬಲಿಗರ ನಡುವೆ ಪಕ್ಷದ ಸಂಘಟನೆ ಹಾಗೂ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಕುರಿತು ಪ್ರಾರಂಭವಾದ ಮಾತಿನ ಚಕಮಕಿ ಕೊನೆಗೆ ತಳ್ಳಾಟ ನೂಕಾಟದ ಜೊತೆಗೆ ಕೈ ಕೈ ಮಿಲಾಯಿಸುವ ಹಂತ ಮುಟ್ಟಿರುವುದು ವಿಪರ್ಯಾಸ.

ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಕಾರ್ಯಕರ್ತರ ನಡುವೆ ಪರಸ್ಪರ ಆರೋಪ–ಪ್ರತ್ಯಾರೋಪಗಳು ಬೈಗುಳಗಳು ಮುಂದುವರಿದವು.

ಇದನ್ನೂ ಓದಿ: MP Dr K Sudhakar: 'ಪಕ್ಷ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಅವರನ್ನೇ ನನ್ನ ಪ್ರತಿನಿಧಿ ಎಂದು ಭಾವಿಸಿ ಗೆಲ್ಲಿಸಿ'; ಕಾರ್ಯಕರ್ತರಿಗೆ ಕರೆ

ವಾಗ್ವಾದ ತೀವ್ರಗೊಂಡಂತೆ ಕೆಲವರು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು, ಬೆದರಿಕೆ ಹಾಕಿರುವ ಆರೋಪವೂ ಕೇಳಿ ಬಂದಿದೆ. ಬಹಳ ವಚನ ತನಕ  ತಳ್ಳಾಟ, ಎಳೆದಾಟ ನಡೆಯುತ್ತಾ ಕೆಲಕಾಲ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. 

ಘಟನೆಯಿಂದ ಕಾರ್ಯಕ್ರಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹಿರಿಯ ನಾಯಕರು ಹಾಗೂ ಸಂಘಟಕರು ಕಾರ್ಯಕರ್ತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಪಕ್ಷ ಸಂಘಟನೆ ಚರ್ಚೆ ಮಧ್ಯೆ ಗೊಂದಲ
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಕುರಿತು ನಾಯಕರು ಕಾರ್ಯಕರ್ತರಿಗೆ ಕರೆ ನೀಡಿದರು. 

ಇದೇ ವೇಳೆ, ಕೆಲವು ಕಾರ್ಯಕರ್ತರು ಕ್ಷೇತ್ರಗಳಲ್ಲಿ ಸ್ವಪಕ್ಷೀಯರ ನಡುವಿನ ಭಿನ್ನಾಭಿಪ್ರಾಯ ಗಳಿಂದ ಸಂಘಟನೆಗೆ ಹಾನಿಯಾಗುತ್ತಿದೆ ಎಂದು ಪ್ರಸ್ತಾಪಿಸಿದರು. ಈ ವಿಚಾರವಾಗಿ ನಡೆದ ಚರ್ಚೆ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು. ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಸಭಾಂಗಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ವಾಯಿತು.

ಶಿಡ್ಲಘಟ್ಟ ರಾಜಕೀಯ ಬೆಳವಣಿಗೆ ಹಿನ್ನೆಲೆ?
ಸಭೆಯಲ್ಲಿ ನಡೆದ ಗಲಾಟೆಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಗಳೇ ಕಾರಣ ಎನ್ನಲಾಗುತ್ತಿದೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರಾದ ಪುಟ್ಟು ಆಂಜಿನಪ್ಪ ಹಾಗೂ ರಾಜೀವ್ ಗೌಡ ಅವರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. 

ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್(Dr M C Sudhakar) ಅವರು ಪರೋಕ್ಷವಾಗಿ ಪುಟ್ಟು ಆಂಜಿನಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರೋಪದ ನಡುವೆಯೇ ಈ ವಿಷಯ ಪ್ರಸ್ತಾಪಗೊಂಡು ಗಲಾಟೆಗೆ ಕಾರಣವಾಯಿತು ಎಂದು ಕೆಲವು ಪ್ರತ್ಯಕ್ಷ ದರ್ಶಿ ಕಾರ್ಯಕರ್ತರು ಹೇಳಿದ್ದರೂ, ಈ ಕುರಿತು ಅಧಿಕೃತವಾಗಿ ಯಾವುದೇ ನಾಯಕರು ಪ್ರತಿಕ್ರಿಯೆ ನೀಡಿಲ್ಲ.

ಗಲಾಟೆಯ ಬಳಿಕ ಕಾರ್ಯಕ್ರಮ ಮುಂದುವರಿದಿದ್ದು, ಪಕ್ಷದ ಸಂಘಟನೆಗೆ ಒಗ್ಗಟ್ಟಿನ ಅಗತ್ಯವಿದೆ ಎಂದು ಹಿರಿಯ ನಾಯಕರು ಕಾರ್ಯಕರ್ತರಿಗೆ ಮನವಿ ಮಾಡಿದರು.