ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ದಲಿತ ರೈತರ ವಿರುದ್ಧ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.29ರಂದು ಜಿಲ್ಲಾದ್ಯಂತ ಪ್ರತಿಭಟನೆ: ದಸಂಸ

ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಕಳೆದ ಹತ್ತು ದಿನಗಳಿಂದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದರೂ, ಸ್ಥಳೀಯ ತಹಶೀಲ್ದಾರ್ ಅಥವಾ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಯಿಂದಾಗಿ ಬಡ ದಲಿತ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ

ದಲಿತ ರೈತರ ವಿರುದ್ಧ ದೌರ್ಜನ್ಯ ಖಂಡಿಸಿ ಜೂ.29ರಂದು ಪ್ರತಿಭಟನೆ

-

Profile
Ashok Nayak Jun 27, 2026 8:58 PM

ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಬಡ ದಲಿತ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ (ದಸಂಸ), ಈ ನೀತಿಯನ್ನು ಖಂಡಿಸಿ ಜೂ.29ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಿ.ವಿ. ವೆಂಕಟರಮಣ, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಸಿಂಗಾಟ ಕದಿರೇನಹಳ್ಳಿ ಗ್ರಾಮದ ಹಳೆಯ ಸರ್ವೆ ನಂ. 67 (ಪ್ರಸ್ತುತ ಸರ್ವೆ ನಂ. 81, 82, 83, 84, 85 ಹಾಗೂ 86) ಪ್ರದೇಶದಲ್ಲಿ 1972-73ರಲ್ಲಿ ಅಂದಿನ ತಹಶೀಲ್ದಾರರು ಬಡ ದಲಿತರಿಗೆ ಸಾಗುವಳಿ ಚೀಟಿ ಹಾಗೂ ಪಹಣಿ ನೀಡಿದ್ದರು. ಅಂದಿನಿಂದಲೂ ದಲಿತ ಕುಟುಂಬಗಳು ಕಾನೂನುಬದ್ಧವಾಗಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿವೆ. ಆದರೆ ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡಿ, ಉಳುಮೆಗೆ ತೆರಳುವ ರೈತರ ಮೇಲೆ ದೌರ್ಜನ್ಯ ನಡೆಸುವ ಮೂಲಕ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ದಸಂಸ ತಾಲೂಕು ಸಂಚಾಲಕ ಕೆ.ಎ. ನರಸಿಂಹಪ್ಪ ಮಾತನಾಡಿ, ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಕಳೆದ ಹತ್ತು ದಿನಗಳಿಂದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದರೂ, ಸ್ಥಳೀಯ ತಹಶೀಲ್ದಾರ್ ಅಥವಾ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಬಡ ದಲಿತ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಅರಣ್ಯ ಭೂಮಿ ಎಂಬ ನೆಪದಲ್ಲಿ ದಲಿತರ ಜಮೀನಿನ ಮೇಲೆ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಬಿ.ವಿ. ರಮಣ, ಕೆ.ಎ. ನರಸಿಂಹಪ್ಪ, ಜಿ.ಎ. ಆದಿನಾರಾಯಣಪ್ಪ, ಕೆ.ಎಸ್. ನರಸಿಂಹಪ್ಪ, ಗಂಗರಾಜು, ಕೆ.ಎನ್. ಸತ್ಯನಾರಾಯಣ, ಸಿ.ಎನ್. ಆದಿನಾರಾಯಣಪ್ಪ, ಬ್ಯಾಂಕ್ ಸುಬ್ಬರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.