Chikkaballapur News: ಜು.27-29ರವರೆಗೆ ಕಾಲಜ್ಞಾನಿ ಸದ್ಗುರು ಶ್ರೀಯೋಗಿನಾರೇಯಣ ಗುರುಪೂಜಾ ಸಂಗೀತ ಮಹೋತ್ಸವ
ಹರಿ-ಹರ ಕ್ಷೇತ್ರವಾಗಿರುವ ಕೈವಾರವು ಭಕ್ತಿಯ ಆರಾಧನಾ ಕೇಂದ್ರವಾಗಿದ್ದು, ಪ್ರತಿ ನಿತ್ಯ ಭಜನೆ, ಹರಿಕಥೆ, ಸಂಗೀತ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕಾಲಜ್ಞಾನಿ ಸದ್ಗುರು ತಾತಯ್ಯನವರ 300ನೇ ಜಯಂತಿ ವರ್ಷಾಚರಣೆ ಅಂಗವಾಗಿ ಗುರುಪೂಜಾ ಮಹೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ
-
ಚಿಕ್ಕಬಳ್ಳಾಪುರ: ಭಕ್ತಿ, ಸಂಗೀತ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾಗಿರುವ ಶ್ರೀಕ್ಷೇತ್ರ ಕೈವಾರದಲ್ಲಿ ಕಾಲಜ್ಞಾನಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಗುರುಪೂಜಾ ಸಂಗೀತ ಮಹೋತ್ಸವವು ಜು.27ರಿಂದ 29ರವರೆಗೆ ವೈಭವದಿಂದ ನಡೆಯಲಿದ್ದು, ದೇಶದ ವಿವಿಧ ರಾಜ್ಯ ಗಳಿಂದ ಆಗಮಿಸುವ ಖ್ಯಾತ ಸಂಗೀತ ವಿದ್ವಾಂಸರು, ನೃತ್ಯ ಕಲಾವಿದರು ಹಾಗೂ ಸಾವಿರಾರು ಭಜನಾ ತಂಡಗಳ ಸಮ್ಮುಖದಲ್ಲಿ ನಿರಂತರ 72 ಗಂಟೆಗಳ ಅಖಂಡ ನಾದೋಪಾಸನೆ ನಡೆಯಲಿದೆ ಎಂದು ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಹರಿ-ಹರ ಕ್ಷೇತ್ರವಾಗಿರುವ ಕೈವಾರವು ಭಕ್ತಿಯ ಆರಾಧನಾ ಕೇಂದ್ರವಾಗಿದ್ದು, ಪ್ರತಿ ನಿತ್ಯ ಭಜನೆ, ಹರಿಕಥೆ, ಸಂಗೀತ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕಾಲಜ್ಞಾನಿ ಸದ್ಗುರು ತಾತಯ್ಯನವರ 300ನೇ ಜಯಂತಿ ವರ್ಷಾಚರಣೆ ಅಂಗವಾಗಿ ಗುರುಪೂಜಾ ಮಹೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: Chikkaballapur News: ಮಂಚೇನಹಳ್ಳಿ ಪಿಎಚ್‌ಸಿಯಲ್ಲಿ ಮೂಲಸೌಕರ್ಯ ಕೊರತೆ ನಿವಾರಣೆಗೆ ಕ್ರಮಕ್ಕೆ ಜಯಕುಮಾರ್ ಆಗ್ರಹ
ಜು.27ರಂದು ಘಂಟಾನಾದ, ಸುಪ್ರಭಾತ, ಗೋಪೂಜೆ ಹಾಗೂ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ನೇತೃತ್ವದ ಸಾಮೂಹಿಕ ನಾಮಸಂಕೀರ್ತನೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಮೂರು ದಿನಗಳ ಕಾಲ ದೇಶದ ವಿವಿಧ ಭಾಗಗಳ ಹೆಸರಾಂತ ಕಲಾವಿದರಿಂದ ಗಾಯನ, ವೀಣೆ, ಪಿಟೀಲು, ಕೊಳಲು, ಮ್ಯಾಂಡೋಲಿನ್, ನಾದಸ್ವರ-ತವಿಲ್, ಭರತನಾಟ್ಯ, ಕೂಚಿ ಪುಡಿ, ಹರಿಕಥೆ ಹಾಗೂ ಬುರಕಥೆ ಕಾರ್ಯಕ್ರಮಗಳು ಜರುಗಲಿವೆ.
ಜು.29ರ ಗುರುಪೂರ್ಣಿಮೆಯಂದು ಬೆಳಿಗ್ಗೆ ತಾತಯ್ಯನವರು ರಚಿಸಿದ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ಹಾಗೂ ವಿಶೇಷ ಗುರುಪೂಜೆ ನೆರವೇರಲಿದ್ದು, ಸಂಜೆ ಮೈಸೂರು ನಾಗರಾಜ್–ಡಾ. ಮೈಸೂರು ಮಂಜುನಾಥ್ ಸೇರಿದಂತೆ ದೇಶದ ಪ್ರಮುಖ ಕಲಾವಿದರ ಸಂಗೀತ ಕಚೇರಿಗಳು ಮಹೋತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.
ನಾರೇಯಣ ಪ್ರಶಸ್ತಿ ಪ್ರದಾನ
ಗುರುಪೂಜಾ ಮಹೋತ್ಸವದ ಅಂಗವಾಗಿ ಹಿರಿಯ ಸಾಹಿತಿ ಹಾಗೂ ಮಲ್ಲಾರ ಮಾಸಪತ್ರಿಕೆಯ ನಿರ್ವಾಹಕ ಸಂಪಾದಕ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಸದ್ಗುರು ಶ್ರೀಯೋಗಿನಾರೇಯಣ ಮಠದ ಪ್ರತಿಷ್ಠಿತ 'ನಾರೇಯಣ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ನಾದಸುಧಾರಸ ಸಂಚಾಲಕ ತಳಗವಾರ ಆನಂದ್, ಮಠದ ವ್ಯವಸ್ಥಾಪಕ ಲಕ್ಷ್ಮೀನಾರಾಯಣ್, ಸದ್ಭಕ್ತ ವೆಂಕಟೇಶ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.