ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Adichunchanagiri Seer: ವಿದ್ಯಾರ್ಥಿಗಳು ಸಂಶೋಧನೆ, ಕಠಿಣ ಪರಿಶ್ರಮದಿಂದ ಗುರಿ ಸಾಧಿಸಲಿ: ನಿರ್ಮಲಾನಂದನಾಥ ಮಹಾಸ್ವಾಮೀಜಿ

ವಿಜ್ಞಾನಿಗಳು ಸಂಶೋಧನೆಯ ಮೂಲಕ ಜನರ ಜೀವನಶೈಲಿ ಸುಧಾರಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ಜೀವನದಲ್ಲಿ ಏಳು-ಬೀಳುಗಳು ಸಹಜವಾಗಿದ್ದು, ಮೊದಲು ಪ್ರತಿಯೊಬ್ಬರೂ ತಮಗೆ ತಾವೇ ಸ್ನೇಹಿತರಾಗಬೇಕು. ಕೃತಕ ಬುದ್ಧಿಮತ್ತೆ (ಎಐ) ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು, ವೈಜ್ಞಾನಿಕ ಹಾಗೂ ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳ ಬೇಕು.

ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

-

Profile
Ashok Nayak Oct 22, 2026 7:42 PM

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡು, ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರು ಹಾಗೂ ಪೋಷಕರಿಗೆ ಗೌರವ ನೀಡಿ, ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ(Adichunchanagiri) ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ನಗರದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಎಂ.ಬಿ.ಎ ಮತ್ತು ಎಂ.ಟೆಕ್ ಸ್ನಾತಕೋತ್ತರ ಪದವಿಗಳ ಪದವಿ ಪ್ರದಾನ ಸಮಾರಂಭ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜ್ಞಾನಿಗಳು ಸಂಶೋಧನೆಯ ಮೂಲಕ ಜನರ ಜೀವನಶೈಲಿ ಸುಧಾರಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ಜೀವನದಲ್ಲಿ ಏಳು-ಬೀಳುಗಳು ಸಹಜವಾಗಿದ್ದು, ಮೊದಲು ಪ್ರತಿಯೊಬ್ಬರೂ ತಮಗೆ ತಾವೇ ಸ್ನೇಹಿತರಾಗಬೇಕು. ಕೃತಕ ಬುದ್ಧಿಮತ್ತೆ (ಎಐ) ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು, ವೈಜ್ಞಾನಿಕ ಹಾಗೂ ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳ ಬೇಕು. ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಉತ್ತಮ ನಿರ್ಧಾರಗಳೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Adichunchanagiri Seer: ಯಲುವಹಳ್ಳಿ ರಮೇಶ್ ಸಂಸ್ಥೆಯಿಂದ 500 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ; ಉಚಿತ ಆರೋಗ್ಯ ತಪಾಸಣೆ

ಮುಖ್ಯ ಅತಿಥಿ, ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿಶಿಷ್ಟ ವಿಜ್ಞಾನಿ ಹಾಗೂ ವಿಮಾನ ಯೋಜನೆಯ ನಿರ್ದೇಶಕ ನಾಗೇಶ್ ಕೆ.ಎಸ್. ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹುಶಿಸ್ತೀಯ ಜ್ಞಾನ ಮತ್ತು ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಸವಾಲುಗಳಿಗೆ ಪರಿಹಾರ ಒದಗಿಸುವ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಎಲ್‌ಆ್ಯಂಡ್‌ಟಿ ಪ್ರಿಸಿಷನ್ ಎಂಜಿನಿಯರಿಂಗ್ ಆ್ಯಂಡ್ ಸಿಸ್ಟಮ್ಸ್‌ನ ಏರೋಸ್ಪೇಸ್ ವಿಭಾಗದ ಜಂಟಿ ಪ್ರಧಾನ ವ್ಯವಸ್ಥಾಪಕ ಡಾ. ಕಿಶೋರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೃತಜ್ಞತೆಯ ಮನೋ ಭಾವ ಬೆಳೆಸಿಕೊಳ್ಳುವುದರೊಂದಿಗೆ ಅನ್ವೇಷಣೆ ಮತ್ತು ಎಐ ತಂತ್ರಜ್ಞಾನವನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳಬೇಕು. ಉದ್ಯೋಗ ಹುಡುಕುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ಉತ್ಸಾಹವಿದ್ದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

1405964 (1) ok

ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಟಿ. ರಾಜು ಗಣ್ಯರನ್ನು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಡಾ. ಎನ್. ಶಿವರಾಮರೆಡ್ಡಿ ಅವರು ಪದವೀಧರರಿಗೆ ಸಮಾನತೆ, ಕರ್ತವ್ಯನಿಷ್ಠೆ ಮತ್ತು ಸೇವೆಯ ಮಹತ್ವ ಸಾರುವ ಪ್ರತಿಜ್ಞಾವಿಧಿ ಬೋಧಿಸಿದರು.

ಸಮಾರಂಭದಲ್ಲಿ 2024–2026ನೇ ಸಾಲಿನ ಎಂ.ಬಿ.ಎ ಮತ್ತು ಎಂ.ಟೆಕ್ ಪದವೀಧರರಿಗೆ ಚಿನ್ನದ ಪದಕ ಹಾಗೂ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರ‍್ಯಾಂಕ್ ಪಡೆದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ರಂಗಸ್ವಾಮಿ ಜಿ.ಆರ್., ಗಣಕಯಂತ್ರ ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಅಕಾಡೆಮಿಕ್ಸ್ ಡಾ. ಮಂಜುನಾಥ್ ಕುಮಾರ್ ಬಿ.ಎಚ್., ವಾಯುಯಾನ ವಿಭಾಗದ ಮುಖ್ಯಸ್ಥೆ ಡಾ. ದೀಪಾ ಎಂ.ಎಸ್., ಪರೀಕ್ಷಾ ನಿಯಂತ್ರಣಾಧಿಕಾರಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.