Adichunchanagiri Seer: ಯಲುವಹಳ್ಳಿ ರಮೇಶ್ ಸಂಸ್ಥೆಯಿಂದ 500 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ; ಉಚಿತ ಆರೋಗ್ಯ ತಪಾಸಣೆ
ಯಾವುದೇ ಸಮಾಜದ ಗರ್ಭಿಣಿಯರಿಗೆ ಸೀಮಂತ ಎನ್ನುವುದು ತಾಯ್ತನದ ಬದುಕಿಗೆ ನೆಮ್ಮದಿಯ ದಾರಿ ತೋರುವ ಮಾರ್ಗವಾಗಿದೆ. ಮನಸ್ಸಿನ ನೆಮ್ಮದಿ, ಸಂತೋಷ ಹಾಗೂ ತಾಯಿಯ ಆರೋಗ್ಯವು ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಎಂತಹುದೇ ಸಂದರ್ಭ ವಿರಲಿ ಭಯ, ಉದ್ವೇಗಕ್ಕೆ ಒಳಗಾಗದೆ ಸಂತೋಷದಿಂದ ಗರ್ಭಾವಸ್ಥೆಯನ್ನು ಕಳೆಯಬೇಕು ಎಂದರು
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಆರೋಗ್ಯ ತಪಾಸಣೆಯೊಂದಿಗೆ ಬಾಗೀನ ನೀಡಿ ಗೌರವಿಸಲಾಯಿತು. -
ಚಿಕ್ಕಬಳ್ಳಾಪುರ: ಸಮಾಜದಲ್ಲಿ ಸಂಕಷ್ಟದಲ್ಲಿರುವವರು, ದೀನದಲಿತರು ಹಾಗೂ ಬಡವರ ನೆರವಿಗೆ ನಿಲ್ಲುವುದು ನಿಜವಾದ ಸಮಾಜ ಸೇವೆಯಾಗಿದ್ದು, ಉಳ್ಳವರು ಇಲ್ಲದವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಆದಿಚುಂಚನಗಿರಿ(Adichunchanagiri) ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲುವಹಳ್ಳಿ ಎನ್. ರಮೇಶ್ ಸಮಾನ ಮನಸ್ಕರ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಗರ್ಭಿಣಿಯರ ಸಾಮೂಹಿಕ ಸೀಮಂತ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಯಾವುದೇ ಸಮಾಜದ ಗರ್ಭಿಣಿಯರಿಗೆ ಸೀಮಂತ ಎನ್ನುವುದು ತಾಯ್ತನದ ಬದುಕಿಗೆ ನೆಮ್ಮದಿಯ ದಾರಿ ತೋರುವ ಮಾರ್ಗವಾಗಿದೆ. ಮನಸ್ಸಿನ ನೆಮ್ಮದಿ, ಸಂತೋಷ ಹಾಗೂ ತಾಯಿಯ ಆರೋಗ್ಯವು ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಎಂತ ಹುದೇ ಸಂದರ್ಭವಿರಲಿ ಭಯ, ಉದ್ವೇಗಕ್ಕೆ ಒಳಗಾಗದೆ ಸಂತೋಷದಿಂದ ಗರ್ಭಾವಸ್ಥೆಯನ್ನು ಕಳೆಯಬೇಕು ಎಂದರು.
ಇದನ್ನೂ ಓದಿ: Adichunchanagiri Sri: ಯುವಜನತೆ ರಕ್ತದಾನದ ಮೂಲಕ ಜೀವ ಉಳಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕು : ಮಂಗಳನಾಥ ಸ್ವಾಮೀಜಿ ಕರೆ
ಹತ್ತಾರು ವರ್ಷಗಳಿಂದ ತಂದೆ-ತಾಯಿ ಸ್ಥಾನದಲ್ಲಿ ನಿಂತು ಪ್ರತಿವರ್ಷ ನೂರಾರು ಗರ್ಭಿಣಿಯರಿಗೆ ಸೀಮಂತ ನೆರವೇರಿಸುತ್ತಿರುವ ಯಲುವಹಳ್ಳಿ ರಮೇಶ್ ಅವರ ಸೇವೆ ಶ್ಲಾಘನೀಯ. ಸೀರೆ, ಆಹಾರ, ಹಣ್ಣು ಸೀರೆ ಉಡುಗೊರೆ ಸಹಿತ ಬಾಗೀನ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಸಮಾಜ ಸೇವೆಯ ಭಾಗವಾಗಿ ಅನ್ನದಾನ, ವೃದ್ಧಾಶ್ರಮದಲ್ಲಿ ಜನ್ಮದಿನ ಆಚರಣೆ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಗಳನ್ನು ಅವರು ನಡೆಸುತ್ತಿದ್ದಾರೆ. ಭಗವಂತ ಹೆಚ್ಚನ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2015ರಲ್ಲಿ ಆರಂಭವಾದ ಸೇವೆ
ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, 2015ರಲ್ಲಿ ತಮ್ಮ ಸೊಸೆಯ ಸೀಮಂತದ ಸಂದರ್ಭ ದಲ್ಲಿ ಗ್ರಾಮದ ಗರ್ಭಿಣಿಯರನ್ನೂ ಸೇರಿಸಿ ಸಾಮೂಹಿಕ ಸೀಮಂತ ಮಾಡುವ ಆಲೋಚನೆ ಮೂಡಿತು. ಮೊದಲ ವರ್ಷ 108 ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಗಿದ್ದು, ಅಂದಿನಿಂದ ಪ್ರತಿವರ್ಷ ಕಾರ್ಯಕ್ರಮ ಮುಂದುವರಿದಿದೆ. ಈ ಬಾರಿ 500 ಗರ್ಭಿಣಿಯರಿಗೆ ಸೀಮಂತ ಮಾಡಲಾ ಗಿದೆ ಎಂದರು.
ಬದುಕಿರುವಾಗ ಸಾಧ್ಯವಾದಷ್ಟು ಜನರ ಕಷ್ಟಕ್ಕೆ ನೆರವಾಗಬೇಕು ಎಂಬುದೇ ನಮ್ಮ ಸಂಕಲ್ಪವಾಗಿದೆ. ಉಸಿರು ಇರುವವರೆಗೂ ಈ ಸೇವಾ ಕಾರ್ಯ ಮುಂದುವರಿಸುವುದಾಗಿ ಭಾವುಕರಾಗಿ ಹೇಳಿದರು.
ಆರೋಗ್ಯದ ಬಗ್ಗೆ ವೈದ್ಯರ ಸಲಹೆ
ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಪ್ರಸೂತಿ ತಜ್ಞೆ ಡಾ.ಜಯಂತಿ ಅಂಜಿನಪ್ಪ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿಯರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕು. ಪೌಷ್ಟಿಕ ಆಹಾರ ಸೇವನೆ, ಅಗತ್ಯ ಲಸಿಕೆ, ನಿಯಮಿತ ಆರೋಗ್ಯ ತಪಾಸಣೆ, ವ್ಯಾಯಾಮ ಹಾಗೂ ಸಮರ್ಪಕ ವಿಶ್ರಾಂತಿಗೆ ಆದ್ಯತೆ ನೀಡಬೇಕು ಎಂದರು.
ಹೇಮಾಲತಾ ಜನಾರ್ಧನ್ ಮಾತನಾಡಿ, ಗರ್ಭಾವಸ್ಥೆಯಲ್ಲಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿಗೂ ಹೆಚ್ಚಿನ ಮಹತ್ವವಿದೆ. ಕುಟುಂಬ ಹಾಗೂ ಸಮಾಜ ಗರ್ಭಿಣಿಯರಿಗೆ ಪ್ರೀತಿ, ಕಾಳಜಿ ಮತ್ತು ಆತ್ಮೀಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೇಬಿಯಮ್ಮ ರಮೇಶ್, ಜನಾರ್ಧನ, ಕೊಂಡೇನಹಳ್ಳಿ ಚಂದ್ರಣ್ಣ, ಲಕ್ಷ್ಮಣ್, ರಾಮಚಂದ್ರ, ರವಿ, ವಕೀಲ ಲಕ್ಷ್ಮೀನಾರಾಯಣ, ಕಳವಾರ ಶ್ರೀಧರ್, ಡಾ. ಕವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.