Chikkaballapur News: ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆ ಈಡೇರಿಕೆಯ ಮನವಿ ಪತ್ರ ಸಲ್ಲಿಕೆ
2 ತಿಂಗಳಿಂದ ಕೆಲಸ ತ್ಯಜಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಕಳೆದ 23 ವರ್ಷಗಳಿಂದ ಸರಕಾರದ ಭೂಮಾಪಕರ ಜತೆ ಸೇರಿ ಅವರಂತೆ ನಾವೂ ಕೂಡ ಜವಾಬ್ದಾರಿಯಿಂದ ಭೂಮಾಪನ ಕೆಲಸ ವನ್ನು ಮಾಡುವ ಮೂಲಕ ಸರಕಾರದ ಹೊರೆಯನ್ನು ಕಡಿಮೆ ಮಾಡಿದ್ದೇವೆ. ಪೋಡಿ ಮುಕ್ತ ಗ್ರಾಮ, ಕಂದಾಯ ಗ್ರಾಮ, ಜಮೀನು ದುರಸ್ತಿ ಸೇರಿ ಹತ್ತಾರು ಕೆಲಸಗಳನ್ನು ಕನಿಷ್ಟ ವೇತನ ಪಡೆದು ನಿಷ್ಟೆಯಿಂದ ಕಾರ್ಯನಿರ್ವಹಿಸಿದ್ದೇವೆ.
-
ಚಿಕ್ಕಬಳ್ಳಾಪುರ : ಫೈಲ್ ಆಧಾರಿತ ಸೇವಾ ಶುಲ್ಕದ ಬದಲು ಮಾಸಿಕ ವೇತನ ಜಾರಿಗೊಳಿಸ ಬೇಕು. ಪರವಾನಗಿ ಪಡೆದ ಭೂಮಾಪಕರನ್ನು ಈ ಕೂಡಲೇ ಸರಕಾರಿ ನೌಕರರನ್ನಾಗಿ ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಸರಕಾರಿ ಭೂ ಮಾಪಕರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ನಮಗೂ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪರವಾನಗಿ ಪಡೆದ ಜಿಲ್ಲಾ ಭೂ ಮಾಪಕರ ಸಂಘದಿಂದ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ತಮ್ಮ ಹಕ್ಕು ಗಳ ಈಡೇರಿಕೆಗಾಗಿ ಸರಕಾರವನ್ನು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, 2 ತಿಂಗಳಿಂದ ಕೆಲಸ ತ್ಯಜಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಕಳೆದ 23 ವರ್ಷಗಳಿಂದ ಸರಕಾರ ದ ಭೂಮಾಪಕರ ಜತೆ ಸೇರಿ ಅವರಂತೆ ನಾವೂ ಕೂಡ ಜವಾಬ್ದಾರಿಯಿಂದ ಭೂಮಾಪನ ಕೆಲಸವನ್ನು ಮಾಡುವ ಮೂಲಕ ಸರಕಾರದ ಹೊರೆಯನ್ನು ಕಡಿಮೆ ಮಾಡಿದ್ದೇವೆ. ಪೋಡಿ ಮುಕ್ತ ಗ್ರಾಮ, ಕಂದಾಯ ಗ್ರಾಮ, ಜಮೀನು ದುರಸ್ತಿ ಸೇರಿ ಹತ್ತಾರು ಕೆಲಸಗಳನ್ನು ಕನಿಷ್ಟ ವೇತನ ಪಡೆದು ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇವೆ.
ಇದನ್ನೂ ಓದಿ: Chikkaballapur News: 36 ಗಂಟೆಗಳ ನೆಕ್ಸೋರಾ ಹ್ಯಾಕಥಾನ್ ನಲ್ಲಿ ನಾಗಾರ್ಜುನ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ
ಇಷ್ಟಾದರೂ ನಮ್ಮ ಸೇವೆ ಸರಕಾರಕ್ಕೆ ಅಗತ್ಯವಾಗಿ ಬೇಕಿದ್ದರೂ ಖಾಯಮಾತಿ ಮಾಡು ವಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಕ್ರೋಶದಿಂದ ನುಡಿದರು.
11ಇ, ತತ್ಕಾಲ್ ಪೋಡಿ, ಆಲಿನೇಷನ್, ಹದ್ದುಬಸ್ತು, ನ್ಯಾಯಾಲಯದ ಪ್ರಕರಣಗಳು, ಈ ಸ್ವತ್ತು, ಪಿಎಂಜಿಎ, ಸ್ವಾಮೀತ್ವ ಸಮೀಕ್ಷೆ, ಆಕಾರ್ ಬಂದ್, ಡಾಟಾ ಎಂಟ್ರಿ, ದರಖಾಸ್ತು ಪೋಡಿ, ಕೆರೆಗಳ ಅಳತೆ, ನಾಲಾ ಅಳತೆ, ವಿದ್ಯುತ್ ಲೈನ್ ಅಳತೆ, ಮುನರಾಯಿ ದೇವಾಲಯ ಗಳ ಅಳತೆ, ರಾಷ್ಟ್ರೀಯ ಹೆದ್ದಾರಿಗಳ ನಕ್ಷಾ ಸ್ವಾಮಿತ್ವ ಅಳತೆ, ಗ್ರಾಮಠಾಣ, ವಕ್ಫ್ ಬೋರ್ಡ್, ನೀರಾವರಿ ಕಾಲುವೆ ಮೊದಲಾದ ಅಳತೆಗಳನ್ನು ನಿರ್ವಹಿಸುತ್ತಿದದು ಯಾವುದೇ ಭದ್ರತೆ, ಸೇವಾ ಆಧಾರ ಇಲ್ಲದೆ, ಕನಿಷ್ಟ ಸೇವಾ ಶುಲ್ಕ ಪಡೆದು ಜೀವನ ನಡೆಸುತ್ತಿದ್ದೇವೆ.
ನಮ್ಮ ಸ್ಥಿತಿ ಜೀತದಾಳುಗಳಿಗಿಂತ ಕಡೆಯಾಗಿರುವುದರಿಂದ ಜೀವನ ನಡೆಸಲು ಆಗದ ಕಾರಣ ಮುಷ್ಕರದ ಹಾದಿ ತುಳಿಯಲಾಗಿದೆ ಎಂದರು.
ರಾಜ್ಯ ಮಟ್ಟದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಮುಂದುವರೆಸಿರುವ ಕಾರಣ ಕೆರಳಿರುವ ಸರಕಾರ ಭೂಮಾಪಕರಿಗೆ ನೀಡಿರುವ ಕಡತಗಳನ್ನು ವಾಪಸ್ಸು ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಇಲ್ಲವಾದಲ್ಲಿ ನಿಮ್ಮ ವಿರುದ್ದ ಕ್ರಿಮಿನಲ್ ಮೊಕದ್ಧಮೆ ದಾಖಲಿ ಸುವುದಾಗಿ ಹಿರಿಯ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇದು ಸರಿಯಲ್ಲ ಎಂದು ಬೇಸರಿಸಿದರು.
ವಾಸ್ತವವಾಗಿ ನಮಗೆ ಯಾವುದೇ ಕಡತಗಳನ್ನು ಭೌತಿಕವಾಗಿ ನೀಡುವುದಿಲ್ಲ, ಬದಲಿಗೆ ಡಿಜಿಟಲ್ ತಂತ್ರಾಂಶದ ಮೂಲಕ ನೀಡಲಾಗುತ್ತದೆ.ಆ ಪ್ರತಿಯನ್ನು ನಾವು ಪಡೆದು ಕಾರ್ಯೋನ್ಮುಖರಾಗುತ್ತಿದ್ದೇವೆ. ಸತ್ಯ ಹೀಗಿದ್ದರೂ ಪ್ರತಿಭಟನೆಯನ್ನು ಹತ್ತಿಕ್ಕಲು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆಗಳಿಗೆ ಜಿಲ್ಲಾ ಮತ್ತು ರಾಜ್ಯ ಸಂಘ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಮಾಪಕರ ಮುಷ್ಕರಕ್ಕಿಂತಲೂ ಮೊದಲೇ ಭೂಮಾಪನಾ ಇಲಾಖೆಯಲ್ಲಿ ಕೆಲಸಗಳು ಮಂದಗತಿಯಲ್ಲಿ ಸಾಗಿದ್ದವು.ಇದೀಗ ಭೂಮಾಪಕರು ಮುಷ್ಕರ ನಿರತರಾಗಿದ್ದಾರೆ ಎಂಬು ದನ್ನೇ ನೆಪ ಮಾಡಿಕೊಂಡು ರೈತರ ಕೆಲಸಕಾರ್ಯಗಳನ್ನು ಮಾಡಿಕೊಡುವಲ್ಲಿ ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ. ದಾಖಲೆಗಳನ್ನು ಸರಿಪಡಿಸಿಕೊಳ್ಳಲೂ, ಕಚೇರಿಗೆ ಅರ್ಜಿಸಲ್ಲಿಸಿ ಹಣ ಕಟ್ಟಿದರೂ ಸರ್ವೆ ಕಾರ್ಯ ಆಗುತ್ತಿಲ್ಲ.ಇದು ಪರಿಹಾರ ಆಗಬೇಕಾದರೆ ನಮ್ಮ ಬೇಡಿಕೆ ಗಳನ್ನು ಸರಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಬಿ,ಆರ್. ಗಂಗರೆಡ್ಡಿ, ಶಿಡ್ಲಘಟ್ಟ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಗೌರಿಬಿದನೂರು ವೇಮಾರೆಡ್ಡಿ, ಚಿಂತಾಮಣಿ ನಂಜರೆಡ್ಡಿ, ಚಿಕ್ಕಬಳ್ಳಾಪುರ ಲಕ್ಷ್ಮೀನಾರಾಯಣರೆಡ್ಡಿ, ಗುಡಿಬಂಡೆ ಅಖಿಲ್ ಕುಮಾರ್, ಚೇಳೂರು, ಗಂಗರೆಡ್ಡಿ ಮತ್ತಿತರರು ಇದ್ದರು.