ಜವಳಿ ರಫ್ತಿಗೆ ಜಾಗತಿಕ ಮಾರುಕಟ್ಟೆ ಬಳಸಿಕೊಳ್ಳಿ: ಜಿಲ್ಲಾಧಿಕಾರಿ ಜಿ. ಪ್ರಭು
ಜವಳಿ ಕ್ಷೇತ್ರದಲ್ಲಿ ದೇಶದ ರಫ್ತು ವಹಿವಾಟು ಪ್ರಸ್ತುತ 3.6 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದು, 2030ರ ವೇಳೆಗೆ 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಸ್ಥಳೀಯ ಉದ್ಯಮಿಗಳು, ನೇಕಾರರು ಹಾಗೂ ಜವಳಿ ಉತ್ಪಾದಕರು ರಫ್ತು ಪ್ರಕ್ರಿಯೆ, ವಿದೇಶಿ ಮಾರುಕಟ್ಟೆ ಮತ್ತು ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಸಮಗ್ರ ಅರಿವು ಪಡೆದುಕೊಳ್ಳಬೇಕು.
-
ಚಿಕ್ಕಬಳ್ಳಾಪುರ: ಜಿಲ್ಲೆಯ ಜವಳಿ ಉದ್ಯಮಿಗಳು ಸ್ಥಳೀಯ ಉತ್ಪನ್ನಗಳಿಗೆ ಗುಣಮಟ್ಟದ ಬ್ರಾಂಡಿಂಗ್ ನೀಡಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ರಫ್ತು ಪ್ರಮಾಣ ಹೆಚ್ಚಿಸ ಬೇಕು. ಇದರಿಂದ ಉದ್ಯಮಿಗಳ ಆದಾಯ ವೃದ್ಧಿಸುವುದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಜವಳಿ ವಲಯದ ರಫ್ತು ಉದ್ಯಮಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ರಫ್ತು ಪ್ರೋತ್ಸಾಹ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜವಳಿ ಕ್ಷೇತ್ರದಲ್ಲಿ ದೇಶದ ರಫ್ತು ವಹಿವಾಟು ಪ್ರಸ್ತುತ 3.6 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದು, 2030ರ ವೇಳೆಗೆ 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಸ್ಥಳೀಯ ಉದ್ಯಮಿಗಳು, ನೇಕಾರರು ಹಾಗೂ ಜವಳಿ ಉತ್ಪಾದಕರು ರಫ್ತು ಪ್ರಕ್ರಿಯೆ, ವಿದೇಶಿ ಮಾರುಕಟ್ಟೆ ಮತ್ತು ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಸಮಗ್ರ ಅರಿವು ಪಡೆದುಕೊಳ್ಳಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜವಳಿ ಕ್ಷೇತ್ರದ ಮೂಲಕ ಸುಮಾರು 10,800 ಮಂದಿಗೆ ಉದ್ಯೋಗಾವ ಕಾಶ ಕಲ್ಪಿಸಲಾಗಿದ್ದು, ಈ ವಲಯದಲ್ಲಿ 785 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ರಾಜ್ಯದ ಜವಳಿ ಕ್ಷೇತ್ರವು ವಾರ್ಷಿಕ ಸುಮಾರು 25 ಸಾವಿರ ಕೋಟಿ ರೂ. ಆದಾಯ ತರುತ್ತಿದ್ದು, ಅದರಲ್ಲಿ ಜಿಲ್ಲೆಯ ಪಾಲು ಗಮನಾರ್ಹವಾಗಿದೆ. ಸ್ಥಳೀಯ ಮಾರುಕಟ್ಟೆಯ ಜೊತೆಗೆ ವಿದೇಶಿ ಮಾರುಕಟ್ಟೆಯ ಅವಕಾಶಗಳನ್ನೂ ಬಳಸಿಕೊಂಡರೆ ಉದ್ಯಮಿಗಳ ಆದಾಯವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಜವಳಿ ಉತ್ಪನ್ನಗಳಿಗೆ ಸೂಕ್ತ ಬ್ರಾಂಡಿಂಗ್, ಗುಣಮಟ್ಟ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ವಿದೇಶಗಳಿಗೆ ರಫ್ತು ಮಾಡುವತ್ತ ಉದ್ಯಮಿಗಳು ಗಮನಹರಿಸಬೇಕು. ರಫ್ತು ವಹಿವಾಟಿನಲ್ಲಿ ಎದುರಾಗುವ ತಾಂತ್ರಿಕ ಹಾಗೂ ಪ್ರಕ್ರಿಯಾತ್ಮಕ ತೊಡಕುಗಳನ್ನು ನಿವಾರಿಸಲು ಮತ್ತು ಉದ್ಯಮಿಗಳಿಗೆ ಅಗತ್ಯ ಜಾಗೃತಿ ಮೂಡಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಎ.ಬಿ. ಬಸವರಾಜು, ಜವಳಿ ಉತ್ಪನ್ನಗಳ ರಫ್ತಿಗೆ ಅನುಕೂಲ ವಾಗುವಂತೆ ಭಾರತವು ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ ಗಳ ಕುರಿತು ವಿವರಿಸಿದರು. ಉದ್ಯಮಿಗಳು ಈ ಒಪ್ಪಂದಗಳ ಪ್ರಯೋಜನ ಪಡೆದುಕೊಂಡು ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಬಾಬಾಸಾಬ್ ಅವರು ಕೈಗಾರಿಕೆಗಳ ಸ್ಥಾಪನೆ ಹಾಗೂ ವಿಸ್ತರಣೆಗೆ ಸಂಸ್ಥೆಯಿಂದ ದೊರೆಯುವ ಸಾಲ ಸೌಲಭ್ಯಗಳು ಮತ್ತು ಬಡ್ಡಿದರಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ಅಂಚೆ ಇಲಾಖೆಯ ಕೋಲಾರ ವಿಭಾಗದ ಪಿ.ಕೆ. ದೇವಾ ನಂದ, ಬಿ. ಕೃಷ್ಣ ಅವರ ತಂಡ ಹಾಗೂ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್‌ಟಿ) ನಿಖಿಲ್ ಅವರು ಭಾಗವಹಿಸಿ ರಫ್ತು ಪ್ರಕ್ರಿಯೆ, ವಿದೇಶಿ ಮಾರುಕಟ್ಟೆ ಅವಕಾಶಗಳು ಮತ್ತು ಉದ್ಯಮಿಗಳಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಪರ ನಿರ್ದೇಶಕ ಸಿ.ಎಸ್. ಯೋಗೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಈ.ಈ. ಅಶೋಕ, ನೇಕಾರರು ಹಾಗೂ ಜವಳಿ ಉದ್ಯಮಿಗಳು ಉಪಸ್ಥಿತರಿದ್ದರು.