Dharmasthala Case: ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಎಸ್‌ಐಟಿ, ಇಡಿ, ಐಟಿ ಇಲಾಖೆಗೆ ಹೈಕೋರ್ಟ್ ನೋಟಿಸ್
High court: ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿಯೂ ಸೇರಿದಂತೆ ಈ ಹೋರಾಟದಲ್ಲಿ ತೊಡಗಸಿಕೊಂಡ ಪ್ರತಿಯೊಬ್ಬರೂ ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯನ್ನು ಖರೀದಿಸಿರುತ್ತಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ಎಸ್ಐಟಿಗೆ ಮನವಿ ಸಲ್ಲಿಸಿದ್ದರು.

-

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿಗಳ ವಿರುದ್ಧ ನಡೆಸಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರದ (Dharmasthala Case) ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ ಜಯಂತ್ ಹಾಗೂ ಎಂಡಿ ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ (Karnataka high court) ಅರ್ಜಿ ಸಲ್ಲಿಕೆಯಾಗಿದ್ದು ನ್ಯಾಯಾಲಯ ಈ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ತನಿಖಾ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ.
ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) 2025ರ ಆಗಸ್ಟ್ 20, ಸೆಪ್ಟೆಂಬರ್ 5,8 ಮತ್ತು 9ರಂದು ಸಲ್ಲಿಸಿರುವ ಮನವಿ ಮತ್ತು ದೂರುಗಳನ್ನು ಪರಿಗಣಿಸಲು ನಿರ್ದೇಶನ ನೀಡುವಂತೆ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾದ ಬೆಂಗಳೂರು ನಿವಾಸಿ ತೇಜಸ್ ಎ. ಗೌಡ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಅರಿಗ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ರಾಜ್ಯ ಸರ್ಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್ಐಟಿ, ಆದಾಯ ತೆರಿಗೆ ಮಂಗಳೂರು ಕೇಂದ್ರ ವಲಯ ಅಧಿಕಾರಿ, ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.
ಇದನ್ನೂ ಓದಿ: Dharmasthala Case: ಧರ್ಮಸ್ಥಳ ಪ್ರಕರಣಗಳ ತನಿಖೆ ಶೀಘ್ರದಲ್ಲಿ ಮುಕ್ತಾಯ: ಗೃಹ ಸಚಿವ ಪರಮೇಶ್ವರ್
ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೆಸರಲ್ಲಿ ಹೋರಾಟ ಮಾಡುತ್ತಿದ್ದು, ಆ ಹೋರಾಟಕ್ಕೆ ವಕೀಲರಿಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು ಹೇಳುತ್ತಾರೆ. ಜೊತೆಗೆ ಈ ಹೋರಾಟದಲ್ಲಿ ತೊಡಗಿಸಿಕೊಂಡ ಸೌಜನ್ಯ ತಾಯಿಯೂ ಸೇರಿದಂತೆ ಪ್ರತಿಯೊಬ್ಬರೂ ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯನ್ನು ಖರೀದಿಸಿರುತ್ತಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ಎಸ್ಐಟಿಗೆ ಮನವಿ ಸಲ್ಲಿಸಿದ್ದರು.
ಇನ್ನೊಬ್ಬ ಅರ್ಜಿದಾರರಾದ ಧನಕೀರ್ತಿ ಅವರು ತಮ್ಮ ದೂರಿನಲ್ಲಿ ಯೂಟ್ಯೂಬರ್ ಕುಡ್ಲ ರ‍್ಯಾಂಪೇಜ್ ಸಂಪಾದಕ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರದ ವರದಿಗಳನ್ನು ಪ್ರಸಾರ ಮಾಡುತ್ತಿದ್ದು, ಅದಕ್ಕೆ ಯಾವುದು ಮೂಲ ಎಂದು ತನಿಖೆ ಮಾಡಬೇಕು ಹಾಗೂ ಎಸ್ಐಟಿ ತನಿಖೆ ಸಮಯದಲ್ಲಿ ದಿನನಿತ್ಯ ತನ್ನದೇ ತನಿಖಾ ವರದಿಯನ್ನು ಎಸ್ಐಟಿಯ ತನಿಖಾ ವರದಿ ಎಂಬ ರೀತಿಯಲ್ಲಿ ಬಿಂಬಿಸಿ ಪ್ರಸಾರ ಮಾಡುತ್ತಿದ್ದರು. ಈ ಸುದ್ದಿಯ ಮೂಲ ಯಾವುದು ಪತ್ತೆ ಮಾಡಬೇಕು ಎಂದು ಎಸ್ಐಟಿಗೆ ಕೋರಿದ್ದರು.