ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇಂದ್ರ ಸಚಿವ ಅಮಿತ್‌ ಶಾ ಆರೋಗ್ಯದಲ್ಲಿ ಏರುಪೇರು; ಹುಬ್ಬಳ್ಳಿ ಹೋಟೆಲ್‌ನಲ್ಲೇ ಚಿಕಿತ್ಸೆ

Amit Shah: ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರ ವಾಸ್ತವ್ಯ ಹೂಡಿದ ಖಾಸಗಿ ಹೋಟೆಲ್‌ನಲ್ಲೇ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.

ಅಮಿತ್‌ ಶಾ ಆರೋಗ್ಯದಲ್ಲಿ ಏರುಪೇರು; ಹುಬ್ಬಳ್ಳಿಯಲ್ಲಿ ಚಿಕಿತ್ಸೆ

ಅಮಿತ್‌ ಶಾ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Sep 19, 2026 2:52 PM

ಹುಬ್ಬಳ್ಳಿ, ಸೆ. 19: ಶುಕ್ರವಾರ (ಸೆಪ್ಟೆಂಬರ್‌ 18) ನಗರಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರು ವಾಸ್ತವ್ಯ ಹೂಡಿದ ಖಾಸಗಿ ಹೋಟೆಲ್‌ನಲ್ಲೇ ಚಿಕಿತ್ಸೆ ನೀಡಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ವೇಳೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಹೋಟೆಲ್‌ನಲ್ಲೇ ವೈದ್ಯರಿಂದ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ಅವರು ತಂಗಿರುವ ಖಾಸಗಿ ಹೋಟೆಲ್‌ಗೆ ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಭುವನೇಶ ಪಾಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಐಜಿಪಿ ಲಾಬುರಾಮ್ ಕೂಡ ಹೋಟೆಲ್‌ಗೆ ಆಗಮಿಸಿ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದರು.

ಸದ್ಯ ಅಮಿತ್‌ ಶಾ ಅವರ ಆರೋಗ್ಯ ಸ್ಥಿರವಾಗಿದೆ, ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಬಳಿಕ ಎಲ್ಲ ಕಾರ್ಯಕ್ರಮ ರದ್ದುಪಡಿಸಿ ಅಮಿತ್ ಶಾ ಅಲ್ಲಿಂದ ನೇರವಾಗಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸಂಸತ್ತಿನಲ್ಲಿ ಕಾವೇರಿದ ರಾಹುಲ್‌- ಅಮಿತ್‌ ಶಾ ಜಟಾಪಟಿ

ಅಮಿತ್ ಶಾ ಶುಕ್ರವಾರ ತಡರಾತ್ರಿ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿ ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಿದ್ದರು.

ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ಬಳಿ ನಿರ್ಮಿಸಲಾಗಿರುವ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರು ಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕೆ.ಎಲ್‌.ಇ. ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಅಮಿತ್ ಶಾ ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಅಮಿತ್ ಶಾ ಅವರಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ಜೈಲುಗಳ ಆಧುನೀಕರಣ, ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಿ: ಅಮಿತ್‌ ಶಾಗೆ ಸಿಎಂ ಡಿಕೆಶಿ ಮನವಿ

ಹಿಂದೆಯೂ ಕಾಡಿತ್ತು ಅನಾರೋಗ್ಯ

ಕೇಂದ್ರ ಸರ್ಕಾರದ ಪ್ರಭಾವಿ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಅಮಿತ್‌ ಶಾ ಅವರಿಗೆ ಹಿಂದೆಯೂ ಅನಾರೋಗ್ಯ ಕಾಣಿಸಿಕೊಂಡಿತ್ತು. 2020ರಲ್ಲಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು 2 ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 61 ವರ್ಷದ ಅಮಿತ್ ಶಾ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಗಸ್ಟ್ 2ರಂದು ಅವರು ಗುರುಗಾಂವ್‌ನ ಮೇದಾಂತ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದಾದ ಬಳಿಕ ಆಗಸ್ಟ್ 14ರಂದು ಕೊರೋನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಡಿಸ್ಚಾರ್ಜ್ ಆಗಿ ಮನೆಯಲ್ಲೇ ಐಸೋಲೇಟ್ ಆಗುವುದಾಗ ಅವರು ಎಕ್ಸ್‌ನಲ್ಲಿ ತಿಳಿಸಿದ್ದರು. ಆದರೆ ಆಯಾಸ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, 13 ದಿನಗಳ ಬಳಿಕ ಆಗಸ್ಟ್ 31ರಂದು ಡಿಸ್‌ಚಾರ್ಜ್‌ ಆಗಿದ್ದರು. ಬಳಿಕ ಮತ್ತೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಸೆಪ್ಟೆಂಬರ್‌ 13ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.